ಪ್ರಕೃತಿ ವಿಕೋಪ ನಿರ್ವಹಣೆಗೆ ಸನ್ನದ್ಧರಾಗಿ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ,ಜೂ,7-  ಆರಂಭಿಕ ಮುಂಗಾರು ಮತ್ತು ನಂತರದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸನ್ನಧರಾಗಬೇಕು ಎಂದು ತಹಶೀಲ್ದಾರ್ ಕೆ.ಶರಣಮ್ಮ ಸೂಚಿಸಿದರು.
ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಪ್ರಕೃತಿ ವಿಕೋಪ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್‍ತ ಮುಂಗಾರಿನಲ್ಲಿ ಗಾಳಿ, ಮಳೆ, ಗಾಳಿ, ಸಿಡಿಲು ಎರಗಿದಂಥ ಸಂದರ್ಭದಲ್ಲಿ ಜನ, ಜಾನುವಾರುಗಳ ರಕ್ಷಣೆ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಬೇಕು. ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ಹೇಳಿದರು.
ತಾಲೂಕು ಕಚೇರಿಯಲ್ಲಿ ತೆರೆಯಲಾಗಿರುವ ಪ್ರಕೃತಿ ವಿಕೋಪ ಸಹಾಯವಾಣಿ(08399-240238) ಕುರಿತು ಪ್ರತಿ ಗ್ರಾಮದಲ್ಲಿ ಪ್ರಚಾರ ನಡೆಸಿ, ಯಾವುದೇ ಅವಘಡಗಳು ಸಂಭವಿಸಿದಲ್ಲಿ ಜನರು ಸಹಾಯವಾಣಿ ಸಂಪರ್ಕಿಸುವಂತೆ ತಿಳಿಸಿ ಎಂದು ಹೇಳಿದರು.
ತುಂಗಭದ್ರಾ ನದಿ ತೀರದ ಗ್ರಾಮಗಳನ್ನು ಮಳೆಗಾಲದಲ್ಲಿ ಪ್ರವಾಹ ಭೀತಿ ಕಾಡುತ್ತದೆ. ಮಳೆ ಹೆಚ್ಚಾಗಿ ನದಿಯಲ್ಲಿ ಒಳ ಹರಿವು ಹೆಚ್ಚಾದ ಸಂದರ್ಭದಲ್ಲಿ ಯಾರೂ ನದಿ ಕಡೆ ಹೋಗದಂತೆ ತಿಳಿಸಬೇಕು. ಪ್ರಾಕೃತಿಕ ವಿಕೋಪಗಳನ್ನು ನಿರ್ವಹಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.