ಪ್ರಕೃತಿ ವಿಕೋಪಕ್ಕೆ ಮಾನವನ ಪಾಪವೋ, ದೈವೀ ಕೋಪವೋ?

ಚಿತ್ರದುರ್ಗ. ಮೇ.೪: ಆಧುನಿಕತೆಯ ಸೋಗಿನಲ್ಲಿ, ತಂತ್ರಜ್ಞಾನದ ಹೆಸರಿನಲ್ಲಿ ಪ್ರಕೃತಿಯ ನಾಶಕ್ಕೆ ಹೊರಟಿರುವ ಮಾನವ ಈ ಮೂಲಕ ಪರಿಸರವನ್ನು ಹಾಳು ಮಾಡಿ ಪ್ರಕೃತಿ ವಿಕೋಪಕ್ಕೆ ಕಾರಣನಾಗಿದ್ದಾನೆ. ಅಸಹಜ ಪ್ರಕ್ರಿಯೆಗಳು ಪ್ರಕೃತಿಯನ್ನು ಅಧೋಗತಿಗೆ ತಳ್ಳಿವೆ, ರಸ್ತೆ ಅಗಲೀಕರಣದ ನೆಪದಲ್ಲಿ, ದೊಡ್ಡ ದೊಡ್ಡ ಯೋಜನೆಗಳನ್ನು ಮಾಡುವುದು, ಸ್ಥಾವರಗಳನ್ನು ಸ್ಥಾಪಿಸುವುದು ಪುಣ್ಯಕೆಲಸವೆಂದು ಭಾವಿಸಿರುವ ಮಾನವ ಹೆಮ್ಮರಗಳನ್ನು ಕಡಿದು ನಿರ‍್ಗವನ್ನು ಹಾಳು ಮಾಡಿ ಪಾಪದ ಮೂಟೆಯನ್ನು ಹೆಗಲಿಗೆ ಹೊತ್ತು ನಡೆಯುತ್ತಿದ್ದಾನೆ. ಮನಕ್ಕೆ ಮುದ ಕೊಡುವ, ಹಸಿರಿನಿಂದ ಕಂಗೊಳಿಸುವ, ತಂಪು ಗಾಳಿಯನ್ನು ಕಂಪಿನೊಂದಿಗೆ ಪಸರಿಸುವ, ಸುಂದರವಾಗಿ ಕಂಗೊಳಿಸುವ ಪ್ರಕೃತಿ ಮಾತೆಯನ್ನು ವಿಕಾರಗೊಳಿಸುತ್ತಿರುವ ಮಾನವ ಅಟ್ಟಹಾಸದಿಂದ ಮೆರೆಯುತ್ತಿದ್ದಾನೆ. ದಟ್ಟವಾದ ಕಾಡುಗಳು ಬಟ್ಟ ಬಯಲಾದ್ದರಿಂದ ಕಾಡು ಪ್ರಾಣಿಗಳಿಗೆ ನೆಲೆ ಇಲ್ಲದಂತಾಗಿದೆ, ಪಕ್ಷಿ ಸಂಕುಲವೆಲ್ಲ ನಶಿಸಿಹೋಗಿದೆ. ಎಲ್ಲರನ್ನ, ಎಲ್ಲವನ್ನ ತನ್ನ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಪ್ರಕೃತಿ ಮಾತೆಯನ್ನೇ ಬಟ್ಟ ಬಯಲು ಮಾಡಲು ಹೊರಡಿರುವ ಮಾನವನ ದುಷ್ಕೃತ್ಯವನ್ನು ಪ್ರಕೃತಿ ಮಾತೆಯಾದರೂ ಹೇಗೆ ಸಹಿಸಿಯಾಳು?ಪ್ರಕೃತಿ ಮಾತೆ ದೈವದ ಸಂಕೇತ, ಕಾಲಮಾನಗಳನ್ನು ತನ್ನ ಬದಲಾವಣೆಯಿಂದಲೇ ತಿಳಿಸುವ ಕಾಲಜ್ಞಾನಿ, ಕೆಟ್ಟದ್ದನ್ನು ತನ್ನ ಹೊಟ್ಟೆಯಲ್ಲಿಡಿದಿಟ್ಟುಕೊಂಡು, ಸದಾ ಒಳ್ಳೆಯದನ್ನೇ ಬಿಟ್ಟುಕೊಡುವ ತ್ಯಾಗಮಯಿ. ಬರಿಯ ಮನಸ್ಸಿಗೆ ಕನಸನ್ನು ಕಟ್ಟಿಕೊಡುವ ಕಲ್ಪನಾಮಯಿ. ದೇವರೆಂದೇ ಪೂಜಿಸುವ ಪ್ರಕೃತಿ ಮಾತೆಯನ್ನು ಸೇವೆ ಎಂಬ ಸೋಗಿನಲ್ಲಿ, ಭ್ರಷ್ಟ ರಾಜಕಾರಣಿಗಳು, ಕಳ್ಳ ಖದೀಮರು, ಸ್ವರ‍್ಥ ಖೂಳರು ಪ್ರಕೃತಿ ಮಾತೆ ಉಟ್ಟ ಹಸಿರು ಸೀರೆಯನ್ನೇ ಕಿತ್ತು ಬೆತ್ತಲೆ ಮಾಡಿ ಹೊರಟಿರುವವರನ್ನು ಯಾವ ತಾಯಿ ತಾನೆ ಕ್ಷಮಿಸಲು ಸಾಧ್ಯ? ಧರೆ ಕ್ಷಮೆಯ ಸಾಗರ ಎಂದು ಹೇಳಿದ್ದಾರೆ, ಆದರೆ ಧರೆಯ ಮೇಲೆ ಹಸಿರುಟ್ಟು ನಲಿವ ಪ್ರಕೃತಿ ಮಾತೆಯ ಒಡಲನ್ನೇ ಬರಿದು ಮಾಡು ಎಂದು ಯಾರು ಹೇಳಿದ್ದಾರೆ? ಇಂತಹ ದುಷ್ಟರು ಪ್ರಕೃತಿ ಮಾತೆಯ ಕ್ಷಮೆಗೆ ರ‍್ಹರೇ? ಕಾಡಿನಿಂದ ನಾಡು ನಿಜ, ನಾಡಿಗೆ ಆಧಾರ ಸ್ಥಂಭವಾಗಿರುವ ಕಾಡು ಕಡಿದು ನಾಡಿನ ಭವಿಷ್ಯಕ್ಕೆ ಬೆಂಕಿ ಇಡುತ್ತಿರುವುದು ಯಾವ ನ್ಯಾಯ? “ಕಾಡಿದ್ದರೆ ಮಳೆ ಇಲ್ಲದೇ ಹೋದರೆ ತಣಿಯದು ಇಳೆ, ಬಾರದು ಬೆಳೆ” ಎಂಬ ಕವಿವಾಣಿ ಅರಣ್ಯ ಭಕ್ಷಕರಿಗೆ ತಿಳಿಸಿ ಹೇಳುರ‍್ಯಾರು? ಮರಗಳಿಂದ ಮಳೆ, ಮಳೆಯಿಂದ ಬೆಳೆ, ಬೆಳೆಯಿಂದ ಹಸಿವು ಹಿಂಗುವುದು ಇಂತಹ ದಟ್ಟ ಅರಣ್ಯಗಳನ್ನು ನಿಟ್ಟನಿಲುವಿನಲ್ಲಿಯೇ ತುಂಡರಿಸಿ ನಿತ್ಯ ನಗುತ ನೀರು ತರುವ ಕಾಡು ಕಡಿದು ಜನರ ಬದುಕನ್ನೆ ಸುಡುತ್ತಿದ್ದಾರೆ, ಇಂತಹ ಕೊಳ್ಳಿ ಇಡುವ ಕಟುಕರನ್ನು ಕಂಡು ಪ್ರಕೃತಿ ಮಾತೆ ಕೋಪಗೊಳ್ಳದೇ, ಪಾಪ ಹೋಗಲಿ ಬಿಡು ಎಂದು ಕ್ಷಮಿಸಿಬಿಡುವಳೇ?ಅರಣ್ಯ ಸಂಪತ್ತು ನಾಡಿನ ಸಂಪತ್ತು, ಅರಣ್ಯ ಇಲ್ಲದೇ ಹೋದರೆ ಬದುಕಿಗೆ ವಿಪತ್ತು, ತೇಗ, ಬೀಟೆ, ಹೊನ್ನೆ, ಗಂಧ ಹೊತ್ತು ಚಂದ ಕಾಣುತ್ತಿದ್ದ ಸುಂದರಿ ಪ್ರಕೃತಿ ಮಾತೆಯ ಮುಖಕ್ಕೆ ಕೊಳ್ಳಿ ಇಟ್ಟು, ಅಂದಗಾತಿ ವನದೇವಿಯ ಸುಡುತ್ತಿದ್ದಾರೆ. ಪರಿಸರಕ್ಕೆ ಸ್ವಚ್ಛವಾದ ಗಾಳಿಯನ್ನು ನೀಡಿ, ಹಸಿರಿಂದ ಕಂಗೊಳಿಸಿ, ಪ್ರಾಣಿ, ಪಕ್ಷಿ ಸಂಕುಲವನ್ನು ನಲಿಯುವಂತೆ ಕಾಪಾಡುತ್ತಿದ್ದ ಪ್ರಕೃತಿ ಮಾತೆಗೆ ಕೊಡಲಿ ಹಾಕಿ ಮನುಜ ಕುಲಕ್ಕೆ ಕಳಂಕ ತರುವ ಭ್ರಷ್ಟರು, ಅರಣ್ಯ ಭಕ್ಷಕರು, ಅರಣ್ಯದ ರಕ್ಷಣೆಯ ಹೊಣೆ ಹೊತ್ತ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ರುಂಡ ಕಡಿದಾಗ ಪ್ರಕೃತಿ ಮಾತೆಯ ಕಣ್ಣೀರ ಕಡಲು ಬತ್ತಿ ಹೋಯಿತೇ ವಿನಃ ಯಾವೊಬ್ಬ ಆಳುವ ಅರಸಕುಲ ಸಂಕಟಪಡಲಿಲ್ಲ, ಕೊಲೆಗಡುಕರ ವಿರುದ್ದ ದನಿ ಎತ್ತಲಿಲ್ಲ. ಮಾನವನ ಇಂತಹ ಕುಕೃತ್ಯಕ್ಕೆ ಪ್ರಕೃತಿ ಮಾತೆ ಮುನಿಯದೆ ನಸು ನಗಲು ಸಾಧ್ಯವೇ?ಪ್ರಕೃತಿಯ ಮಡಿಲಿಗೆ ಕನ್ನ ಹಾಕುವ ಮಾನವ ಎಂದೂ ತಾನು ಗಿಡ ನೆಡಲಿಲ್ಲ, ನೀರು ಹಾಕಿ ಜೋಪಾನ ಮಾಡಲಿಲ್ಲ, ಕಾಡ ದೇವಿಯ ಋಣದಲ್ಲಿ ಬಿದ್ದು ಒದ್ದಾಡುವ ಇವರು ದೊಡ್ಡ ದೊಡ್ಡ ಮಹಡಿ ಮಹಲುಗಳನ್ನು ಕಟ್ಟಿಕೊಂಡು ಸ್ವರ‍್ಥಕ್ಕಾಗಿ ಏನೆಲ್ಲಾ ಮಾಡುತ್ತಿದ್ದಾರೆ. ಇಂತಹ ಧರ‍್ತರು ಸಾಮಾನ್ಯ ಜನರ ಜೀವನ, ಕಾಡಿನಿಂದ ನಾಡಿಗೆ ಆಗಬಹುದಾದ ಅನುಕೂಲಗಳ ಬಗ್ಗೆ ಕಿಂಚಿತ್ತಾದರೂ ಯೋಚನೆ ಮಾಡಿದ್ದಲ್ಲಿ ಸಮೃದ್ಧಿಯಾದ ಕಾಡು ಸಿರಿಗಂಧದ ನಮ್ಮ ಕರುನಾಡು ಇಂದು ಬಟ್ಟಬಯಲಾಗುತ್ತಿರಲಿಲ್ಲ, ಕಣ್ಣಿಂದ ಮರೆಯಾಗುತ್ತಿರಲಿಲ್ಲ. ಇಂತಹ ಖೂಳರನ್ನು ವನದೇವಿಯಾದರೂ ಹೇಗೆ ಸಹಿಸಿಯಾಳು?ದಟ್ಟವಾದ ಅರಣ್ಯಗಳು ನಿತ್ಯ ನೀರು ತರುವ ಜೀವನಾಡಿಗಳು, ಪ್ರಾಣವಾಯು ನೀಡುವ ಸ್ಥಾವರಗಳು, ವಿಪತ್ತುಗಳನ್ನು ತಡೆ ಹಿಡಿಯುವ ಗೋಡೆಗಳು, ಸಮೃದ್ಧಿಯ ಸರೋವರಗಳು, ಆರೋಗ್ಯದ ಕೇಂದ್ರಗಳು, ಪ್ರಾಣಿ ಪಕ್ಷಿ ಸಂಕುಲವನ್ನು ಸಲುಹುವ ತಾಯ್ತನದ ಸಂಕೇತಗಳು, ನಾಡನ್ನೇ ಸಂಪದ್ಭರಿತಗೊಳಿಸುವ ಭಂಡಾರಗಳು ಇಂತಹ ಪ್ರಕೃತಿಯನ್ನೇ ಹಾಳು ಮಾಡಲು ಹೊರಟ ಮಾನವ ಪಾಪದ ಪ್ರತಿರೂಪ. ತಾಯಿ ಮಗುವಿನ ಮೇಲೆ ಕೋಪಮಾಡಿಕೊಳ್ಳಬಹುದು, ಆದರೆ ಶಿರವನ್ನೇ ತೆಗೆಯುವ ಪಾಪಕೃತ್ಯ ಮಾಡಲಾರಳು, ಹಾಗೆಯೇ ಪ್ರಕೃತಿ ಮಾತೆ ಮಾನವ ಮಾಡುವ ದುಶ್ಕೃತ್ಯಕ್ಕೆ ಕೋಪಿಸಿಕೊಳ್ಳಬಹುದು, ಆದರೆ ನಾಶಕ್ಕೆ ನಾಂದಿ ಹಾಡುವುದಿಲ್ಲ. ಕ್ಷಮೆಯ ಸಾಗರವಾಗಿರುವ ಪ್ರಕೃತಿ ಮಾತೆ ಮುನಿಸಿಕೊಂಡು ವಿಕೋಪದ ಸ್ವರೂಪ ತಾಳಿದ್ದಾಳೆಂದರೆ ಮಾನವನ ಪಾಪದ ಕರ‍್ಯ, ಪ್ರಕೃತಿ ಮಾತೆಯ ಮೇಲೆ ನಡೆಸುತ್ತಿರುವ ಕ್ರರ‍್ಯ ಅತಿರೇಕವಾಗಿದೆ ಎಂದೇ ತಿಳಿಯಬೇಕು. ಹಾಗಾಗಿ “ಪ್ರಕೃತಿ ವಿಕೋಪಕ್ಕೆ ಕಾರಣ ಮಾನವನ ಪಾಪವೇ ಆಗಿದೆ”. ಆ ಪಾಪದ ಫಲದಿಂದಾಗಿ ಕೋವಿಡ್ ಮಹಾ ಮಾರಿಯಿಂದ ಪ್ರಾಕೃತಿಕ ಆಮ್ಲಜನಕವಿಲ್ಲದೆ ಕೃತಕ ಉಸಿರಾಟಕ್ಕಾಗಿ ಬಡಬಡಿಸುತ್ತಾ ಪ್ರಾಣ ತೆರುತ್ತಿದ್ದಾರೆ. ಇದರಿಂದ ಪಾಠ ಕಲಿತು ಇನ್ನು ಮುಂದಾದರೂ ನಾವು ಎಚ್ಚೆತ್ತುಕೊಂಡು ಪ್ರಕೃತಿ ಮಾತೆಯ ಮಡಿಲ ಹಸಿರುಗೊಳಿಸುವ ಪಣತೊಡೋಣ. ಗಿಡ ನೆಟ್ಟು ಮಾನವ ಸಂಕುಲಕ್ಕೆ ಪ್ರಾಣವಾಯುವಿನ ಪ್ರಕೃತಿ ಸ್ಥಾವರ ನರ‍್ಮಿಸಲು ಕೈಜೋಡಿಸೋಣ. * ಕೋಲಂನಳ್ಳಿ ಪೀತಾಂಬರ್, ಚಳ್ಳಕೆರೆ