ಪ್ರಕೃತಿ ರಕ್ಷಣೆ ಭಾರತದ ಸಂಸ್ಕೃತಿ

ಮೈಸೂರು/ಬೆಂಗಳೂರು,ಏ.೯- ಭಾರತ ಹುಲಿಗಳ ತವರು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಪ್ರಾಜೆಕ್ಟ್ ಟೈಗರ್‌ನ ಯಶಸ್ಸು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಇಂದಿಲ್ಲಿ ಹೇಳಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಪೂರ್ಣಗೊಳಿಸಿದೆ.ಅದೇ ಸಮಯದಲ್ಲಿ, ವಿಶ್ವದ ಹುಲಿ ಜನಸಂಖ್ಯೆಯ ೭೫ ರಷ್ಟು ಭಾರತದಲ್ಲಿದೆ. ಭಾರತದಲ್ಲಿ ಸದ್ಯ ೩,೧೬೭ ಹುಲಿಗಳು ಕಾಡಿನಲ್ಲಿ ವಾಸಿಸುತ್ತಿವೆ ಇದು ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದ್ದಾರೆ.
“ಪ್ರಾಜೆಕ್ಟ್ ಟೈಗರ್” ಯೋಜನೆಗೆ ೫೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸ್ಮರಣಾರ್ಥ ನಾಣ್ಯ ಮತ್ತು ದೇಶದಲ್ಲಿ ಹುಲಿ ಸಂಖ್ಯೆಯ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು ಪ್ರಾಜೆಕ್ಟ್ ಟೈಗರ್ ದೊಡ್ಡ ಬೆಕ್ಕುಗಳ ರಕ್ಷಣೆ ಮತ್ತು ಸಂರಕ್ಷಣೆಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದ್ಧಾರೆ.
ಪ್ರಾಜೆಕ್ಟ್ ಟೈಗರ್‌ನ ೫೦ ವರ್ಷಗಳ ಅತ್ಯಂತ ಮಹತ್ವದ ಮೈಲಿಗಲ್ಲಿಗೆ ನಾವೆಲ್ಲರು ಸಾಕ್ಷಿಯಾಗಿದ್ದೇವೆ. ಭಾರತ ಹುಲಿಯನ್ನು ಉಳಿಸುವುದು ಮಾತ್ರವಲ್ಲದೆ ಹುಲಿ ಸಂರಕ್ಷಣೆಯ ಪ್ರವರ್ಧಮಾನಕ್ಕೆ ಬರಲು ಅತ್ಯುತ್ತಮ ಪರಿಸರ ವ್ಯವಸ್ಥೆ ಒದಗಿಸಿದೆ ಎಂದು ಅವರು ಹೇಳಿದ್ದಾರೆ.
ಹುಲಿ ಯೋಜನೆ ದೊಡ್ಡ ಹುಲಿಗಳ ರಕ್ಷಣೆ ಮತ್ತು ಸಂರಕ್ಷಣೆ, ಪ್ರಕೃತಿ ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಹುಲಿ ಯೋಜನೆಯ ಯಶಸ್ಸು ಭಾರತಕ್ಕೆ ಮಾತ್ರವಲ್ಲ. ಇಡೀ ಜಗತ್ತಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ವಿಶ್ವದ ಹಲವು ದೇಶಗಳಲ್ಲಿ ಹುಲಿ ಸಂತತಿ ಕಡಿಮೆಯಾಗುತ್ತಿದೆ. ಆದರೆ, ಭಾರತದಲ್ಲಿ ಹುಲಿಗಳ ಸಂತತಿ ವೃದ್ಧಿಸುತ್ತಿದೆ. ಭಾರತದ ಜೀವ ವೈವಿಧ್ಯತೆಯ ಸಂರಕ್ಷಣಾ ಮನೋಭಾವವೆ ಇದಕ್ಕೆ ಕಾರಣವಾಗಿದೆ ಎಂದರು.
ಭಾರತದ ಕೊಡುಗೆ ಅಪಾರ:
ವಿಶ್ವದ ಭೂಪ್ರದೇಶದ ಕೇವಲ ಶೇ.೨.೪ ರಷ್ಟು ಇರುವ ಭಾರತ ಜಾಗತಿಕ ವೈವಿಧ್ಯತೆಗೆ ಸರಿ ಸುಮಾರು ಶೇ.೮ರಷ್ಟು ಕೊಡುಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಶಕಗಳ ಹಿಂದೆಯೇ ಭಾರತದಲ್ಲಿ ಚಿರತೆಗಳು ಅಳಿದು ಹೋಗಿದ್ದವು. ಇತ್ತೀಚೆಗೆ ಚಿರತೆಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದಿದ್ದೇವೆ.ಇದು ದೊಡ್ಡ ಬೆಕ್ಕಿನ ಮೊದಲ ಯಶಸ್ವಿ ಟ್ರಾನ್ಸ್-ಕಾಂಟಿನೆಂಟಲ್ ಸ್ಥಳಾಂತರವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಸುಮಾರು ೩೦,೦೦೦ ಆನೆಗಳನ್ನು ಹೊಂದಿರುವ ನಾವು ವಿಶ್ವದ ಅತಿದೊಡ್ಡ ಏಷ್ಯಾಟಿಕ್ ಆನೆ ಶ್ರೇಣಿಯ ದೇಶವಾಗಿದೆ. ಎಂದು ಅವರೂ ಇದೇ ವೇಳೆ ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಟನ್ರ್ಯಾಷನಲ್ ಬಿಗ್ ಕ್ಯಾಟ್ಸ್ ಅಲೈಯನ್ಸ್-ಐಬಿಸಿಎಗೆ ಚಾಲನೆ ನೀಡಿದರು.
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಮಾತನಾಡಿ, ದೇಶದಲ್ಲಿ ೧೯೭೩ ರಲ್ಲಿ ೯ ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ ಪ್ರಾರಂಭವಾದ ಹುಲಿ ಸಂರಕ್ಷಣಾ ಪಯಣ, ಇದೀಗ ಪ್ರಧಾನಿ ನೇತೃತ್ವದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿ ೫೩ ರಕ್ಷಿತಾರಣ್ಯಗಳಿಗೆ ತಲುಪಿದೆ. ೨೩ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ ಇದು ದೇಶದ ಹೆಮ್ಮೆ ಎಂದು ಅವರು ತಿಳಿಸಿದ್ಧಾರೆ.
ಪ್ರಾಜೆಕ್ಟ್ ಟೈಗರ್ ೫೦ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು ಪಾಲ್ಗೊಂಡಿದ್ದರು.

ಬೊಮ್ಮ ದಂಪತಿಗೆ ಶ್ಲಾಘನೆ
ಆಸ್ಕರ್ ವಿಜೇತ ಸಾಕ್ಷ್ಯಚಿತ್ರ “ಎಲಿಫೆಂಟ್ ವಿಸ್ಪರಸ್”ನಲ್ಲಿ ಕಾಣಿಸಿಕೊಂಡ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ಅವರ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ಧಾರೆ.
ಚಾಮರಾಜನಗರ ಜಿಲ್ಲೆಯ ಬಂಡಿಪುರ ಅಭಯಾರಣ್ಯದಲ್ಲಿ ಸಫಾರ ನಡೆಸಿ ಅಲ್ಲಿದಂ ತಮಿಳುನಾಡಿನ ತೆಪ್ಪಕಾಡು ಆನೆ ಶಿಬಿರದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ದಂಪತಿ ಭೇಟಿ ಮಾಡಿ ಅಭಿನಂದಿಸಿದರು.
ಇದೇ ವೇಳೆ ಆನೆಗಳನ್ನು ಸೊಂಡಿಲನ್ನು ಪ್ರೀತಿ ಅಭಿಮಾನದಿಂದ ಸವರಿ, ತಾಯಿಯಿಂದ ಬೇರ್ಪಟ್ಟ ಆನೆ ಮರಿಗಳನ್ನು ಸಾಕಿ ಆವುಗಳಿಗೆ ಆಶ್ರಯ ನೀಡಿದ ಬೊಮ್ಮ ಮತ್ತು ಬೆಳ್ಳಿ ದಂಪತಿಯ ಸೇವೆ ಮತ್ತು ಕಾರ್ಯ ಮಾದರಿ ಎಂದು ಹೇಳಿದ್ದಾರೆ.
ಇದೇ ವೇಳೆ ಈ ದಂಪತಿ ಮಾವುತರು ಎದುರಿಸುತ್ತಿರುವ ಸಮಸ್ಯೆ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದರು. ಅವುಗಳನ್ನು ಬಗೆ ಹರಿಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾವುತರು ಮತ್ತು ಅರಣ್ಯ ಸಿಬ್ಬಂಧಿ ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗೆ ಅನುಸರಿಸಬೇಕಾದ ಕ್ರಮಗಳು ಅರಣ್ಯ, ವನ್ಯಜೀವಿ ರಕ್ಷಣೆ ಸೇರಿದಂತೆ ಮತ್ತಿತರೆ ಕೆಲಸಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.