ಪ್ರಕೃತಿ-ಪರಿಸರ

ಪ್ರಾಕೃತಿಕ ಪರಿಸರದಲ್ಲಿ ಸೌಂದರ್ಯದ ಖಣಿ ಎನಿಸಿರುವ ಭೂಮಿ ಇದು ನಿಸರ್ಗದ ಮಹಾನ್‌ಕೊಡುಗೆ ಧರತಿ, ವಸುಂಧರೆ, ಭೂಮಿತಾಯಿ ಎಂದು ಕರೆಯಲಾಗುವ ಈ ಭೂಮಿಯು ಜೈವಿಕ ಮತ್ತು ಅಜೈವಿಕ ಅಂಶಗಳಿಂದ ತುಂಬಿದೆ. ಮನುಷ್ಯ ಈ ಭೂಮಿಯ ಮೇಲೆ ಜನ್ಮ ತಾಳಿದ ದಿನದಿಂದಲೂ ತನ್ನ ಬದುಕಿಗಾಗಿ ಅವಶ್ಯಕವಾಗಿರುವ ಅನೇಕ ವಸ್ತುಗಳನ್ನು ’ಪರಿಸರ’ದಿಂದ ಪಡೆದುಕೊಂಡಿದ್ದಾನೆ ಹಾಗೂ ಪಡೆಯುತ್ತಿದ್ದಾನೆ.
ಹಾಗಾದರೆ ಈ ’ಪರಿಸರ’ ಎಂದರೇನು? ಎಂಬುದು ಮೊದಲ ಪ್ರಶ್ನೆ. ವಸ್ತು ಮತ್ತು ಶ್ರಮದ ಮೇಲೆ ನೇರ ಪ್ರಭಾವ ಬೀರುವಂತೆ ತತ್‌ಕ್ಷಣದಲ್ಲಿ ಸುತ್ತುವರಿದ ಯಾವುದೇ ಪರಿಸ್ಥಿತಿಯನ್ನು ಪರಿಸರ ಎಂದು ಜೆ ಗಿಸ್ಪರ್ಟ್ ಅರ್ಥೈಸುತ್ತಾರೆ. ಅಂದರೆಪ್ರತಿಯೊಂದು ಕಾಲದ ಜೀವಿಯು ತನ್ನದೇ ಆದ ವಿಶೇಷ ಪರಿಸರವನ್ನು ಹೊಂದಿ ನಿಲ್ಲುತ್ತದೆ. ಅಂತೆಯೇ ’ಮಾನವನನ್ನು ಪರಿಸರದ ಕೂಸು ಎನ್ನಲಾಗುತ್ತದೆ. ಅವನ ಬೆಳವಣಿಗೆ, ಬುದ್ಧಿಶಕ್ತಿ, ಕಲೆ, ಸಂಸ್ಕೃತಿ, ಆರ್ಥಿಕತೆ ಜೀವನ ಪದ್ಧತಿ ಮೊದಲಾದವುಗಳಿಗೆಲ್ಲ ಪರಿಸರದ ಒಡನಾಟವೇ ಕಾರಣವೆನ್ನಬಹುದು. ಇಂಥ ಪರಿಸರವನ್ನು ನೈಸರ್ಗಿಕ ಪರಿಸರ ಹಾಗೂ ಕೃತಕ ಪರಿಸರ ಎಂದು ವಿಭಾಗಿಸಿ ನೋಡಲಾಗುತ್ತದೆ. ಪ್ರಕೃತಿ ದತ್ತವಾದ ಪರಿಸರವೇ ನಿಸರ್ಗ ಪರಿಸರ ಇದು ಮಾನವನ ಬುದ್ಧಿಶಕ್ತಿಗೆ ಸಾಮರ್ಥ್ಯಕ್ಕೆ ಸವಾಲಾಗಿ ನಿಂತಿರುವಂಥದ್ದು ಇದು ನಿಸರ್ಗದತ್ತ ಕೊಡುಗೆ, ಸೂರ್ಯ, ಚಂದ್ರ, ನಕ್ಷತ್ರ, ಗಾಳಿ, ನೀರು, ಬೆಟ್ಟ-ಗುಡ್ಡ, ಮಣ್ಣು, ಸಸ್ಯಸಂಕುಲ, ಪ್ರಾಣಿ-ಸಂತತಿ, ಸೂಕ್ಷ್ಮಾಣ ಜೀವಿಗಳು ಮೊದಲಾದವುಗಳು. ಈ ನಿಸರ್ಗದತ್ತ ಪರಿಸರವನ್ನು ೧) ಭೌತಿಕ ಪರಿಸರ (ಭೂಗೋಳ, ವಾಯುಗೋಳ, ಇತ್ಯಾದಿ) ಮತ್ತು ೨) ಜೈವಿಕ ವಿಭಾಗಿಸಲಾಗುತ್ತದೆ. ಭೌಗೋಳಿಕ ಪರಿಸರ ಪ್ರಾಕೃತಿಕ ದತ್ತವಾಗಿದ್ದು, ಇದು ಜಲ, ನೆಲ, ಅಗಿ, ಗಾಳೆ.ನದಿ, ಸಮುದ್ರ, ಖನಿಜ, ಗೃಹ ನಕ್ಷತ್ರ ಮೊದಲಾದವುಗಳನ್ನು ಒಳಗೊಂಡು ನಿಂತಿರುವ ಇದನ್ನು ಭೂಗೋಳ, ವಾಯುಗೋಳ, ಜಲಗೋಳ ಎಂದು ವಿಭಾಗಿಸಲಾಗಿದೆ.


ಈ ಪರಿಸರದ ಸಂದರ್ಭ, ಸನ್ನಿವೇಶಗಳು ವಚನ ಸಾಹಿತ್ಯದಲ್ಲಿ ಅಂತರ್ಜಲದಂತ ಹರಿದಾಡಿರುವುದನ್ನು ಗುರುತಿಸಬಹುದಾಗಿದೆ. ದೇವ ಸೃಷ್ಟಿಯೆನಿಸಿರುವ ಇದು ಹಲವು ಸಂಪತ್ತುಗಳ ಖಣಿ, ಸುಂದರತೆಯ ಆಗರ ಬದುಕಿನ ಸ್ಥಿತಿಗತಿಗೆ, ಸಂಘರ್ಷ-ಸಾಮರಸ್ಯಕ್ಕೆ ಮನುಷ್ಯರ ಪಾಲಿರುವಂತೆ ಅಲ್ಲಿ ಪರಿಸರದ ಪಾಲಿರುವುದು ಮುಖ್ಯವಾಗುತ್ತದೆ. ಆಧುನಿಕ ಯುಗದಲ್ಲಿ ನಿಂತಿರುವ ನಾವು ಕೈಗಾರೀಕರಣ, ನಗರೀಕರಣ, ನವೀಕರಣ,
ಉದಾತ್ತೀಕರಣದಂತಹ ವಾತಾವರಣಕ್ಕೆ ಗಂಟು ಬಿದ್ದಿದ್ದೇವೆ. ಇದರಿಂದ ಪರಿಸರ ಮಾಲಿನ್ಯ ಉಚ್ಚಮಟ್ಟಕ್ಕೇರಿರುವುದನ್ನು ವಿಜ್ಞಾನಿಗಳು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಶಬ್ದ ಮಾಲಿನ್ಯ, ಜಲಮಾಲಿನ್ಯ, ವಾಯುಮಾಲಿನ್ಯ, ಆಕಾಶ ಮಾಲಿನ್ಯಗಳು ಅಧಿಕಗೊಂಡಿರುವ ಈ ವಾತಾವರಣದಲ್ಲಿ ಶರಣರ ವಚನಗಳಲ್ಲಿ ’ಬದುಕಿನ ಪರಿಸರದ ಬಗ್ಗೆ ಚಿಂತಿಸಿರುವುದನ್ನು ಅರಿತುಕೊಳ್ಳಲು ಬಯಸಿದ್ದು ಪ್ರಸ್ತುತ ಸಂಗತಿ ಎನ್ನಬಹುದು. “ಪರಿಸರ ವಿಜ್ಞಾನ’ ಎಂಬುದು ಇಂಗ್ಲಿಷನ ಇಛಿoಟogಥಿ ಎಂಬ ಪದದಿಂದ ಬಂದಿದೆ.ಈ ಪದ ಗ್ರೀಕ್ ಶಬ್ದವಾದ (ಔiಞos) ಐಕೋಸನಿಂದ ಬಂದಿದ್ದು, “ಐಕೋಸ್’ ಎಂದರೆ ಗ್ರೀಕ್ ಭಾಷೆಯಲ್ಲಿ ’ಮನೆ’ ಎಂದು ಅರ್ಥ. ಹೀಗಾಗಿ ಈ ಮನೆಯ ಅಧ್ಯಯನವನ್ನು “ಇಛಿoಟogಥಿ ಎನ್ನಲಾಗಿದ್ದು, ಅದು ಮನೆಯ ಸುತ್ತಲಿನ ವಾತಾವರಣಕ್ಕೆಸಂಬಂಧಿಸಿದ್ದಾಗುತ್ತದೆ.
ಬಸವಣ್ಣನವರ ’ಮನೆ’ ಪ್ರತಿಮೆಯುಳ್ಳ ವಚನ ’ಪರಿಸರ’ಪ್ರಜ್ಞೆಯನ್ನು ಎಷ್ಟೊಂದು ರೋಚಕವಾಗಿ ವಿವರಿಸುತ್ತದೆ ಎಂಬುದನ್ನು ಇಲ್ಲಿಅರಿಯಬಹುದು.

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ ?
ಹೊಸ್ತಿಲಲ್ಲಿ ಹುಲ್ಲುಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೊ ?
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನದೊಳಗೆ ಮನೆಯೊಡೆಯ ಇದ್ದಾನೊ ಇಲ್ಲವೊ ?
ಇಲ್ಲ, ಕೂಡಲ ಸಂಗಮ ದೇವಾ –

ಪರಿಸರದ ಮಾಲಿನ್ಯವನ್ನು ತುಂಬಾ ಸಶಕ್ತವಾಗಿ ಹೇಳುವ ರೂಪಕವಿದು. ಜಗದಸಕಲ ಆಗುಹೋಗುಗಳಿಗೆ ಸರ್ವಸಿದ್ದಿಗಳಿಗೆ ಕಾರಣವಾಗಿರುವ ಈ ’ಪರಿಸರವು’ (ಮನೆ)ಹಾಳಾಗಬಾರದೆಂಬುದು ಬಸವಣ್ಣನವರ ವಿಚಾರ. ಈ ಮೂಲಕ ಮಾನವನ ತನು-ಮನ ಹಾಳಾಗುವ ಪರಿಯನ್ನು ಬಸವಣ್ಣನವರು ಇಲ್ಲಿ ಕಟ್ಟಿಕೊಟ್ಟಿರುವುದು ವೈಜ್ಞಾನಿಕತೆಗೆ ವಿಸ್ಮಯವುಂಟುಮಾಡುವ ಸಂಗತಿ ಪರಿಸರದ ಪರಿಧಿಯಲ್ಲಿ ಸುಖಿಸಬೇಕಾಗಿರುವ ಮಾನವ ಆ ಪರಿಸರವನ್ನು ಸದಾ ಸಂರಕ್ಷಿಸಿಕೊಳ್ಳಬೇಕು. ’ಪರಿಸರದ ಪಾವಿತ್ರ್ಯ ಹಾಳಾಗಬಾರದು. ನಾವು ದುರಾಸೆ, ಆಲಸ್ಯ, ಸಂಗರ್ಷ ಹಾಗೂ ಹಿಂಸೆಯನ್ನು ಮುಂದು ’ಪರಿಸರ’ವೆಂಬುದು ಕೇವಲ ನಮ್ಮ ಸುತ್ತಲಿನ ಭೂಮಿಯಷ್ಟೇ ಅಲ್ಲ; ಅದು ಪಂಚಭೂತಗಳಿಂದ ಕೂಡಿದ, ಚರಾಚರವಸ್ತುವನ್ನೊಳಗೊಂಡ ಅಖಂಡ ವಿಶ್ವ, “ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ನಿರಂಜನದೇವಾ, ನಿಮ್ಮ ಮಹಿಮೆಯ ಪ್ರಣವ ಸ್ವರೂಪಂಗಲ್ಲದೆ ಕಾಣಬಾರಿಗೆಯೂ ಬಾರದಯ್ಯಾ” ಎನ್ನುತ್ತಾರೆ ಶರಣರು, ಈ ಪ್ರಕೃತಿ ಪರಿಶುದ್ಧವಾಗಿರಬೇಕು ಅದನ್ನು ಪರಿಶುದ್ಧಗೊಳಿಸುವ ಪರಿಯನ್ನು ಚನ್ನಬಸವಣ್ಣನವರು ಹೀಗೆ ಹೇಳುತ್ತಾರೆ.

ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ
ನಾ ನೋಡುತಿಹ ಆಕಾಶದ ಚಂದ್ರ ಸೂರ್ಯರ
ಭಕ್ತನ ಮಾಡಿದಲ್ಲದೆ ನಾ ನೋಡೆನಯ್ಯಾ
ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ
ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ
ಮಾಡಿದಲ್ಲದೆ, ಕೊಳ್ಳನು ಕೂಡಲ ಚನ್ನಸಂಗಾ ನಿಮ್ಮಾಣೆ

ಚನ್ನ ಬಸವಣ್ಣನವರು ಇಲ್ಲಿ ’ಭಕ್ತನ ಮಾಡಿದಲ್ಲದೆ’ ಎಂಬ ಪದವನ್ನು ತುಂಬಾ ಅಥವತ್ತಾಗಿ ಬಳಸಿರುವುದನ್ನು ಗಮನಿಸಬೇಕು. ಭಕ್ತನ ಮಾಡುವುದು ಎಂದು ಪರಿಶುದ್ಧವಾಗಿಸುವುದು. ಈ ಪರಿಶುದ್ಧತೆ ಯಾವುದೇ ಮಲಿನವನ್ನು ಅಂಟಿಸಿ. ದಂತಿರುವುದು, ಭೂಮಿ, ಆಕಾಶ, ಚಂದ್ರ, ಸೂರ್ಯ, ಜಲ, ದವಸ ಧಾನ್ಯಗಳ ಸತ್ತಿಯ ಅವುಗಳ ಶುದ್ಧತೆ ಅವಶ್ಯ. ಅದನ್ನು ಸದಾ ಕಾಪಾಡಿಕೊಂಡಿರಬೇಕೆಂಬ ಉದ್ದೇಶ ; ವಚನದಲ್ಲಿ ಸ್ಪಷ್ಟವಾಗಿದೆ. ಸಕಲ ಜೀವಾತ್ಮರಿಗೆ ಅತ್ಯಂತ ಅವಶ್ಯವಾಗಿರುವ ’ಪರಿಸರ ಹೇಗಿರಬೇಕು? ಪರಿಸರದ ಬಗ್ಗೆ ಇಂದು ನಾವು ಮಾತನಾಡುತ್ತಲೇ ಇದ್ದೆ ಬಸವಣ್ಣನವರು ಒಂದೇ ಒಂದು ಮುಖ್ಯ ಮಾತನ್ನಾಡಿದರು ಲೇಸನ್ನೇ ಬಯಸುವಂತ’ ಪರಿಸರ ಬೇಕು ಅದನ್ನು ಪಾಲಿಸಿದ್ದರೆ ಇಂದು ಪರಿಸರ ಮಾಲಿನ್ಯದ ಪ್ರಶ್ನೆ ಇರುತ್ತಿರಲಿಲ್ಲ. ’ಮರ್ತ್ಯಲೋಕವನ್ನು ನಾವು ಕರ್ತಾರನ ಕಮ್ಮಟ’ವೆಂದು ಅರಿತೇ ಇಲ್ಲ. ಇಲ್ಲಿರುವ ಮರ, ಗಿಡ, ಬಳ್ಳಿ, ಪಕ್ಷಿ ಸಂಕುಲಗಳಲ್ಲಿ ಜೀವತತ್ವದಹುದುಗಿದೆ. ಅದೊಂದು ಎಲ್ಲವನ್ನು ತುಂಬಿಕೊಂಡಿರುವ ಬಯಲು. ಆ ಪರಿಸರವು “ಆಡಬಾರದ ಬಯಲು, ನೋಡಬಾರದ ಬಯಲು

ನುಡಿಯಬಾರದ್ದು, ಹಿಡಿಯಬಾರದ ಬಯಲು,
ಆ ಒಡಲಿಲ್ಲದ ಬಯಲಲ್ಲಿ ದೇವ ಅಡಗಿರ್ದ
ಭೇದವನು……….’

ಲೋಕದ ಜಡ ಮಾನವರು ಹೇಗೆ ಅರಿಯಲು ಸಾದ್ಯ? ಎಂದು ದಾಸಿಮಯ್ಯ ಕೇಳುತ್ತಾನೆ. ಚೈತನ್ಯಶೀಲರು ಅಂದರೆ ಜಂಗಮಗುಣದವರಿಗೆ ಈ ಪ್ರಕೃತ್ತಿ ಅರ್ಥಗುತ್ತವೆ ಎಂದು ಸಂದೇಶ ನೀಡುತ್ತಾನೆ ಒಡಲಿಲ್ಲದ ಪರಿಸರ ಒಂದು ವಿಶಾಲವಾದ ಭವ್ಯ ಬೆಳದಿಂಗಳ ಆ ಬಯಲೋಳಗಣ ದಿವ್ಯಶಕ್ತಿ “ದೇವ ಸ್ವರೂಪದ್ದು ಅದರ ಮಲಿನತೆಯಾಗಬಾರದು ಆ ಶಕ್ತಿಯನ್ನು ಆಂತರಿಕ ಕಂಡು ಆನಂದಿಸಿ ಅನುಭವಿಸಬೇಕು ಪ್ರಕೃತಿ ಶರಣರಿಗೆ ಬದುಕಿನ ಒಂದು ಆಶ್ರಯದ ತಾಣ. ಪ್ರಕೃತಿ ಪರಿಸರದ ಚಿತ್ರಣವನ್ನು ನೀಡುತ್ತ ಶರಣರು ಅಗೋಚರನಾದ ದೈವಶಕ್ತಿಯನ್ನು ಸ್ವರೂಪಗೊಳಿಸಿತೋರುವ ರೀತಿ ಇಲ್ಲಿ ಮನನೀಯವಗುತ್ತದೆ.
ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ,
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ.
“ನೆಲ ಮರೆಯ ನಿಧಾನದಂತೆ

ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ”
’ಕರಿಯು ಕನ್ನಡಿಯೊಳ್ ಅಡಗಿರುವಂತೆ’

ಪರಿಸರದಲ್ಲಿರುವ ದೇವ ಸ್ವರೂಪ ಅಗೋಚರ, ಇಲ್ಲಿಯ ವಚನಗಳ ಸಾಲಿನಲ್ಲಿಪ್ರಕೃತಿಗನ್ವಯಿಸುವ ಸಸ್ಯ ಹಾಗೂ ಭೌತಿಕ ಸಂಸ್ಕೃತಿ ಸುಂದರವಾಗಿ ವ್ಯಕ್ತವಾಗಿದೆ. ಸುಗಂಧದ ದ್ರವ್ಯರಾಶಿಯನ್ನು ಸೂಸುವ ಚಂದನ, ಸಿಹಿಯನ್ನೇ ಕೊಡುವ ಸಸ್ಯಸಂಕುಲದಕಬ್ಬು, ಪ್ರಕೃತಿಯ ’ದಾಸೋಹ’ ಗುಣಕ್ಕೆ ಹೆಸರುವಾಸಿಗಳು, ಅಂತೆಯೇ ಮರ, ಗಿಡ, ಬಳ್ಳಿ ಸಸ್ಯ ಸಂಕುಲವೆಲ್ಲ ಜೀವಾತ್ಮರಿಗೆ ಸದಾ ಉಪಕಾರಿ. ವಾಸಿಸುವ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಮಾನವ ಜೀವನದ ಮೇಲೂ ವಿಶಿಷ್ಟ ಬಗೆಯ ಪ್ರಭಾವಬೀರುವುದು ಈ ಪರಿಸರ. ಇದರಿಂದ ಮಾನವನ ಬೆಳವಣಿಗೆ, ಫಲವತ್ತತೆಯ ಜೊತೆಗೆ ವಿಶೇಷವಾಗಿ ಆತನ , ಸಾಮಾಜಿಕ, ಆರ್ಥಿಕ, ಧಾರ್ಮಿಕ, ಆರೋಗ್ಯಿಕ ಹಾಗೂ ಸಾಂಸ್ಕೃತಿಕ ಜೀವನದ ಮೇಲೆ ಗಮನಾರ್ಹ ಪ್ರಭಾವವನ್ನು ಉಂಟುಮಾಡುತ್ತವೆ. ಪ್ರಾಕೃತಿಕ ’ಪರಿಸರ’ವನ್ನು ಬಳಸಿಕೊಂಡು ತಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಸೊಗಸಾಗಿ ಅಭಿವ್ಯಕ್ತಗೊಳಿಸಿದವರು ಬಸವಣ್ಣ ಹಾಗೂ ಅಕ್ಕಮಹಾದೇವಿ. ಇವರ ಅನೇಕ ವಚನಗಳು ಪ್ರಾಕೃತಿಕ ಸೌಂದರ್ಯಕ್ಕೆ ಪ್ರತೀಕಗಳಾಗಿ ನಿಂತಿವೆ.

’ಅಂತರಂಗ ಶುದ್ಧವಿಲ್ಲದವರೊಳಗು
ಅತ್ತಿಯ ಹಣ್ಣಿನಂತೆ ಕ್ಷುದ್ರ ಬಿಡದು ನೋಡಯ್ಯಾ
ಅಂತರಂಗ ಶುದ್ಧವುಳ್ಳವರೊಳಗು
ಬಾಳೆಯ ಹಣ್ಣಿನಂತೆ ಸುಗುಣ ತೋರುವುದು ನೋಡಯ್ಯ

ಎಂದು ಹೇಳುತ್ತ, ಈ ಎರಡೂ ಹಣ್ಣುಗಳ ಗುಣಸ್ವರೂಪದ ಸಂಗತಿಯೊಂದಿಗೆ ಮಾನವನ

ಅಂತರಂಗದ ಶುದ್ದಿಯನ್ನು ಬೆಸೆದಿರುವುದು ಪರಿಸರದ ಅನುಭವಾತ್ಮಕ ನುಡಿ.
ಈಹಣ್ಣುಗಳೆರಡರ ಹೋಲಿಕೆಯಿಂದ ವ್ಯಕ್ತಿಯ ಆಂತರಿಕ ಗುಣ ಚಿತ್ತ ಶುದ್ಧತೆಯ ಭಾವಪ್ರತಿಬಿಂಬಿತವಾಗಿರುವುದು ಹೃದಯಕ್ಕೆ ತಟ್ಟುತ್ತದೆ.ಭೂಚರ, ಜಲಚರ, ವಾಯುಚರ, ಜೀವಸಂಕುಲ, ಸಂಸ್ಕೃತಿಗೆ ಪ್ರೇರಕ ಶಕ್ತಿ, ಅವುಗಳನೇರ ಪ್ರಭಾವ, ಮೂಲಭೂತ ಸಂಸ್ಕೃತಿಯ ಬದಲಾವಣೆಗೆ ಕಾರಣೀಭೂತವಾಗುತ್ತದೆ. ಮಾನವ ಕುಲದ ಜೀವನ ಶೈಲಿಯನ್ನು ತಿದ್ದುವಲ್ಲಿ ಅವುಗಳನ್ನು ಕರೆದು ಗಮನಿಸಬೇಕು.
ಆಗ ಕಾಗೆಯ ಕುಲದ ಗುಣ, ಕೋಳಿಯ ಗೋತ್ರ ಪ್ರೇಮ, ಮರ್ಕಟನ ಚಂಚಲತೆ,ನಾಯಿಯ ನಂಬಿಕೆ, ನರಿಯ ಕುಟಿಲತೆಗಳೆಲ್ಲ ಕಾಣಸಿಗುತ್ತವೆ. ಮಾನವ ಸಂಸ್ಕೃತಿಗೆ ಪ್ರೇರಕ ಶಕ್ತಿಯಾಗಿ ನಿಂತಿರುವ ’ಪರಿಸರ’ ಆತನ ಮೇಲೆ ಏನೆಲ್ಲ ಪರಿಣಾಮ ಬೀರಬಲ್ಲದೆಂಬುದನ್ನು ಶರಣರ ವಚನಗಳು ಸ್ಕೂಲವಾಗಿ ಹಾಗೂ ಸೂಕ್ಷ್ಮವಾಗಿ ತಿಳಿಪಡಿಸುತ್ತವೆ.ಬಸವಣ್ಣನವರ ವಚನಗಳ ವಸ್ತು ಪ್ರಕೃತಿ ಸೌಂದರ್ಯವಲ್ಲ; ಜೀವನ ಸೌಂದರ್ಯ ಜೀವನ ಅವರ ನುಡಿಯಲ್ಲಿ ಪ್ರಕೃತಿಯ ಮೂಲಕ ಕಾವ್ಯವಾಗಿ ನಿಂತಿರುವುದು ಗಮನಾರ್ಹ ಸಂಗತಿ, ಮಾನವ ತನ್ನ ಸಹಜ ಸುಂದರ ನಿಜ ಸ್ವರೂಪವನ್ನು ಕಂಡುಕೊಳ್ಳಲು ಸಾಧಕನಾಗಿ ಕೈಕೊಳ್ಳುವ ಸಾಹಸ ಯಾತ್ರೆಗಳ ವಿವಿಧ ನಿಲ್ದಾಣಗಳನ್ನಿಲ್ಲಿ ಕಾಣಬಹುದು. ತೀವ್ರವಾದ ಭಾವ ಸಂವೇದನೆಯ ಶಕ್ತಿಯನ್ನು ನಿರೂಪಿಸುವಲ್ಲಿ ಬಸವಣ್ಣನವರು ಪ್ರಾಕೃತಿಕ ವಲಯಕ್ಕೆ
ಪ್ರಾಧಾನ್ಯತೆ ನೀಡುತ್ತಾರೆ. ಬೆಲ್ಲವ ತಿಂದ ಕೋಡಗನಂತೆ ಸಿಹಿಯ ನೆನೆಯದಿರಾ ಮನವೇ ಕಬ್ಬತಿಂದ ನರಿಯಂತೆ ಹಿಂದಕ್ಕೆಳಸದಿರಾ ಮನವೇ ಗಗನವನಡರಿದ ಕಾಗೆಯಂತೆ ದೆಸೆದೆಸೆಗೆ ಹಂಬಲಿಸದಿರಾ ಮನವೇ ಕೂಡಲ ಸಂಗನ ಶರಣರ ಕಂಡು ಲಿಂಗವೆಂದೇ ನಂಬು ಮನವೇ … ಇದೊಂದು ’ಉಪಮಾನ’ ಪ್ರಧಾನವಾದ ವಚನ. ಇಲ್ಲಿ ಮೂಡಿಬಂದ ಪ್ರಾಣಿ ಸಂಕುಲಗಳಾದ ನರಿ-ಕೋಡಗ-ಕಾಗೆ ಪ್ರಕೃತಿ ಪರಿಸರದ ವಿಶೀಷ್ಟಗುಣ ಹೊಂದಿರು ವಂತಹದು. ಅವುಗಳ ಆಶೆಬುರಕತನ, ಚಂಚಲತೆ ಮುಂದುಗಾಣದಿರುವಿಕೆಯನ್ನು ವ್ಯಕ್ತಗೊಳಿಸುವುದರ ಜೊತೆಗೆ ಮಾನವನ ಮನದ ಚಿತ್ರವನ್ನು ಅದ್ಭುತವಾಗಿ ಹಿಡಿದಿಡಲಾಗಿದೆ. ಸಂಸ್ಕಾರಗೊಂಡ ಮನಸ್ಸು ಪ್ರಪಂಚರೂಪದ ವಿಶಾಲ ಭಾವವನ್ನು ಒಂದೆಡೆ ನಿಲ್ಲಿಸದ ಶಕ್ತಿಯನ್ನು ಗಳಿಸದೆ ಹೋದರೆ ಆತನ ಹಾನಿಯೊಂದಿಗೆ ಪರಿಸರದಹಾನಿಯೂ ಉಂಟಾಗುತ್ತದೆಂಬುದನ್ನು ಈ ವಚನ ಸಾರುತ್ತದೆ.
ಹೀಗೆ ಬಸವಣ್ಣ ನವರಕಾವ್ಯಸತ್ವ, ಮಾನಸಿಕ ಪ್ರಜ್ಞೆಯ ವಿಕಾಸ, ಸಮರಸ ಭಾವ, ನಿರ್ಲಿಪ್ತ ಸ್ಥಿತಿ’ ಹಾಗೂ ಲೌಕಿಕಪ್ರಜ್ಞೆಗಳ ಮೂಲ ಸಾಮಗ್ರಿ ಬಾಹ್ಯ ಪ್ರಪಂಚವೇ ಅಂದರೆ ಪರಿಸರವೇ ಆ ಪರಿಸರ ಪ್ರಜ್ಞೆ ಅವರು ಪಡೆದ ಅನುಭಾವ, ತೀವ್ರತೆಯ ಸ್ವರೂಪವನ್ನು ಅವಲಂಬಿಸಿ ನೀಂತಿದೆ. ಅವರ
ಭಾಷೆ-ಭಾವಕ್ಕೆ ನವೀನ ಶಕ್ತಿಯನ್ನೊದಗಿಸಿದ ಈ ಪರಿಸರ ಪ್ರಜ್ಞೆ ಇಲ್ಲಿ ತರತಮವಾಗಿಚಿತ್ರಿತಗೊಂಡಿದೆ. ಶರಣರ ವೈಚಾರಿಕ ಕ್ರಾಂತಿಯಲ್ಲಿ ಮಧುರ ಭಕ್ತಿಯ ತೀವ್ರತೆ, ವಿರಕ್ತಿಯ ಉತ್ಕಟತೆ,ನಿರ್ಭಯದ ನಿಲುವಿಗೆ ಪ್ರೇರಕವಾದವಳು ಮಹಾದೇವಿಯಕ್ಕ,
“ನಾಮದಲ್ಲಿ ಹೆಂಗೂಸಾದರು ಭಾವಿಸಲು ಗಂಡು ರೂಪಾಗಿ” ಕೆಚ್ಚೆದೆಯಿಂದ ಸಾಧನೆ ಮಾಡಿದವಳು. ಅಕ್ಕನ ವಚನಗಳು ಅವಳ ಆತ್ಮಚರಿತ್ರೆಯ ಮತ್ತು ವ್ಯಕ್ತಿತ್ವದ ಜೀವಂತ ಅಭಿವ್ಯಕ್ತಿಗಳು. ಅವಳ ಸಾಧನೆಯ ಎಲ್ಲ ಹಂತಗಳ ಎಲ್ಲ ಭಾವ ಲಹರಿಗಳು ಆಕೆಯ ವಚನಗಳಲ್ಲಿ ಸಂಚರಿಸಿವೆ ಪ್ರಕೃತಿ ಹಾಗೂ ಪರಿಸರವು ಅಕ್ಕನೊಂದಿಗೆ ಬೆರೆತು ಹೋಗಿರುವುದನ್ನು ಇಲ್ಲಿ ಕಾಣಬಹುದು. ತಾನು ಹೇಳಬಯಸುವ ತೀವ್ರ ವಿರಕ್ತಿ, ಆರ್ತ ಪ್ರಾರ್ಥನೆ, ಆಧ್ಯಾತ್ಮದ ರೀತಿ, ಪ್ರಣಯಿನಿಯ ವಿಕಳಾವಸ್ಥೆ, ಉನ್ಮಾದ, ವಿರಹ ವೇದನೆ, ಸಮ್ಮಿಲನದ ಹರ್ಷೋದ್ವೇಗ ಈ ಮೊದಲಾದ ಭಾವನೆಗಳ ಪ್ರತಿಪಾದನೆಗಾಗಿ ಅಕ್ಕ ಜೋಡಿಸಿಕೊಂಡಿರುವ ಪರಿಸರವು ಕಣ್ಕಟ್ಟಿ ನಿಲ್ಲುತ್ತದೆ. ಇಂತಹ ಕಡೆಗಳಲ್ಲಿ ಅವಳು ಆರಿಸಿಕೊಳ್ಳುವ ಪ್ರಕೃತಿಯ ಅಂಗಗಳು, ಪ್ರಾಣಿ, ಪಕ್ಷಿ, ಸಸ್ಯ ಸಂಕುಲದ ಪ್ರತಿಮೆ, ರೂಪಕ, ದೃಷ್ಟಾಂತ, ಉಪಮಾನಗಳು ತುಂಬಾ ಮಹತ್ವವಾದವುಗಳೆನಿಸುತ್ತವೆ. ಅವಳ ವಚನಗಳಲ್ಲಿ ಸುಮಾರು ೬೦ಕ್ಕಿಂತ ಹೆಚ್ಚು ವಚನಗಳು ಪ್ರಾಕೃತಿಕ ಅಂಶಗಳನ್ನು ಬಳಸಿಕೊಂಡಿದ್ದು, ಅನೇಕ ವಚನಗಳಲ್ಲಿ ಪ್ರಾಣಿ ಪಕ್ಷಿ ಸಸ್ಯ ಪ್ರಪಂಚ ಪ್ರಕಟವಾಗಿದೆ.

ಲೌಕಿಕ ಭೋಗ ರಾಗಗಳನ್ನು ತೃಣವೆಂದು ತಿರಸ್ಕರಿಸಿ, ಪಾರಮಾರ್ಥಿಕ ಬದುಕನ್ನುಪ್ರೀತಿಸಿದ ಅಕ್ಕ ಮಹಾನ್ ಅನುಭಾವಿ. ಅವಳು ತನ್ನ ಬದುಕಿನ ಹೆಚ್ಚು ಭಾಗವನ್ನು ಪ್ರಕೃತಿ ಪರಿಸರದಲ್ಲಿಯೇ ಕಳೆದಿದ್ದಾಳೆ.
ಹೀಗಾಗಿ ಅವಳ ವಚನಗಳಲ್ಲಿ -ಅಗ್ನಿ, ವಾಯು,ಜಲ ಭೂಮಿ, ಆಕಾಶ, ಬೆಟ್ಟ, ನದಿ, ಸಮುದ್ರ, ತೊರೆ, ಕಲ್ಲು, ಮಣ್ಣು, ಸೂರ್ಯ, ಚಂದ್ರ, ಮಳೆ,
ಮರ, ಗಿಡ, ಬಳ್ಳಿ, ಮೊದಲಾದವುಗಳ ಉಲ್ಲೇಖವಿದ್ದರೆ, ಆನೆ, ಸಿಳ್ಳಾಯಿ, ಕೋಡಗ,ಸರ್ಪ, ಕಪ್ಪ, ಸಿಂಹ, ಹಾವು, ಮೃಗ, ಕಾಮಧೇನು, ಕರು, ಹಂದಿ, ಮದಕರಿ, ಪರುಷಮ್ಮಗ,ಇತ್ಯಾದಿ ಪ್ರಾಣಿ ಸಮುದಾಯ, ನವಿಲು, ಗಿಳಿ, ಕೋಗಿಲೆ, ತುಂಬಿ, ಅಳಿಸಂಕುಳ, ಗೂಗೆ, ಕಾಗೆ, ನೊಣ, ತೆರಣಿಹುಳು ಮೊದಲಾದ ಪಕ್ಷಿಪ್ರಪಂಚ ಹಾಗೂ ಈಳೆ, ನಿಂಬೆ, ಮಾವು, ಮಾದಲ, ಕಬ್ಬು, ಬಾಳೆ, ಹಲಸು, ನಾರಿವಾಳ, ಕಳವೆ, ರಾಜಾನ್ನ, ಶಾಲ್ಯಕ್ಕಿ, ಮರುಗ,ಮಲ್ಲಿಗೆ, ಪಚ್ಚೆ, ಮಡಿವಾಳ, ಬಿಲ್ವ, ಬೆಳವಲ, ಚಂದನ, ಹೂ, ಬಳ್ಳಿ, ಎರದ, ಬೊಬ್ಬುಲಿ ಗುಲ್ಕ-ಲತಾ, ತಳಿರು, ಪುಷ್ಪ ಮೊದಲಾದ ಅನೇಕ ಗಿಡ-ಮರ ಲತೆಗಳ ಉಲ್ಲೇಖಗಳಿವೆ.ಬಯಲಿನ ರೂಪಾಂತರವೇ ಸೃಷ್ಟಿ, ಆ ಸೃಷ್ಟಿಕರ್ತನೆ ತನಗೆ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದ್ದೆ’ ನೋಡಾ ಎನ್ನುವ ಅಕ್ಕ ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚಲುವನಿಗೆ ಒಲಿದವಳು. ಎಡೆಯಿಲ್ಲದ, ಕಡೆಯಿಲ್ಲದ, ತೆರಹಿಲ್ಲದ ಕುರುಹಿಲ್ಲದ ಆ ಚಲುವನನ್ನು ಸೃಷ್ಟಿಯಲ್ಲಿ ಹುಡುಕಿದವಳು.ಆಗಾಗ ಪ್ರಕೃತಿ, ಪರಿಸರವನ್ನುಮಾತನಾಡಿಸಿದವಳು.
’ಈಳೆ ನಿಂಬೆ ಮಾವು ಮಾದಲಕ್ಕೆ ಹುಳಿ ನೀರೆರೆದವರು ಯಾರಯ್ಯಾ ? ಎನ್ನುತ್ತ ಆತನ ಕಾಣದ ಕಾರ್ಯವನ್ನು ಅರುಹುತ್ತಾಳೆ. ಇಲ್ಲಿ ಜಲ ಒಂದೇ, ನೆಲ ಒಂದೇ ಅಂಶವು ಒಂದೇ, ಜಲವು ಹಲವು ದ್ರವ್ಯವ ಕೂಡಿ ತನ್ನ ಪರಿಬೇಕಾಗಿಹ ಹಾಗೆ ಇರುವುದನ್ನು ಹೇಳುತ್ತ, ತನ್ನ ಚನ್ನಮಲ್ಲಿಕಾರ್ಜುನನೊಂದಿಗೆ ಪರಿವೀಕ್ಷಣೆಗೈಯ್ಯುತ್ತಾಳೆ. ಈ ಲೋಕದ ಜೀವ ಜಂತುಗಳಲ್ಲಿ ಅಂತರ್ಯಾಮಿಯಾಗಿರುವ ಆ ’ದೇವ’ನು ಬೇರೆ ರೂಪದಲ್ಲಿರುವುದನ್ನು ಸೃಷ್ಟಿಯ ಮುಖದಲ್ಲಿ ಕಾಣಿಸುತ್ತಾಳೆ.
ಆ ಪರಮಾತ್ಮನ ನಿಲುವನ್ನರಿಯಲು ಪ್ರಯಾಣಿಸುವ ಅಕ್ಕ ಗುಡ್ಡ, ಬೆಟ್ಟ, ನದಿ, ಹಳ್ಳ-ಕೊಳ್ಳ ಹಾಳುದೇಗುಲಗಳನ್ನು ದಾಟಿ ಬಂದವಳು, ಗಿಡ-ಮರ-ಲತೆಗಳನ್ನು ಸ್ಪರ್ಶಿಸಿದವಳು ಹಲವು ಪ್ರಾಣಿ-ಪಕ್ಷಿಗಳ ಗುಣ-ಸ್ವರೂಪಗಳನ್ನು ಅರಿತು ನಿಂತವಳು, ಮಾನವ ಸ್ವಭಾವದ ಪರಿಸರದ ವಿವಿಧ ಪರಿಸರಗಳನ್ನು ಕಂಡು ಉಂಡು ಉಮ್ಮಳಿಸಿದವಳು, ಜೀವನಾನುಭವಗಳನ್ನು ತನ್ನದೇ ಆದ ಪರಿಸರದ ಹಿನ್ನೆಲೆಯಲ್ಲಿ ವಿವರಿಸಿರುವುದನ್ನು ಇಲ್ಲಿ ಮನಕಾಣಬಹುದು. ಆತ್ಮನುಸಂಧಾನಕ್ಕಾಗಿ ಅವಳು ನಡೆಸಿದ ಸಂಘರ್ಷದ ಚಿತ್ರ ವಚನಗಳಲ್ಲಿದೆ. ಆ ಸಂಘರ್ಷದ ಹಲವು ಮುಖಗಳ ಪರಿ ವೈಯಕ್ತಿಕವಾದುದೆನಿಸಿದರೂ, ಅದರಲ್ಲಿ ಸಾಮಾಜಿಕ ಪ್ರಜ್ಞೆ, ಪರಿಸರ ಕಾಳಜಿ ಹುದುಗಿರುವುದನ್ನು ಎಲ್ಲೆಲ್ಲೂ ಕಾಣಬಹುದು.

ಚಿಲಿ ಪಿಲಿಯೆಂದೋದುವ ಗಿಳಿಗಳಿರಾ ಚಿಲಿಪಿಲಿಯೆಂದೋದುವ ಗಿಳಿಗಳಿರಾ
ನೀವು ಕಾಣಿರೆ ನೀವು ಕಾಣಿರೇ ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೆ, ನೀವು ಕಾಣಿರೇ
ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೇ ನೀವು ಕಾಣಿರೇ
ಕೊಳನ ತಡಿಯೋಳಾಡುವ ಹಂಸಗಳಿರಾ
ನೀವು ಕಾಣಿರೆ ನೀವು ಕಾಣಿರೇ
ಗಿರಿ ಗಹ್ವರದೊಳಾಡುವ ನವಿಲುಗಳಿರಾ
ನೀವು ಕಾಣಿರೆ, ನೀವು ಕಾಣಿರೇ
ಚನ್ನ ಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೇ

ಅಕ್ಕನ ಶ್ರೇಷ್ಠ ವಚನಗಳಲ್ಲಿ ಒಂದಾಗಿರುವ ಈ ವಚನದ ಪರಿ ತುಂಬಾ ವಿಶಿಷ್ಟವಾದುದು.
ಕಳೆದು ಹೋದ ವಸ್ತುವೊಂದನ್ನು ಹುಡುಕುತ್ತಿರುವ ರೀತಿ ಹಾಗೂ ಕಂಡೀರೇನು ? ಎಂದುಕೇಳುತ್ತಿರುವ ದಾಟಿ ಅಮೋಘವಾದುದು. ತಾಯಿಯೋರ್ವಳು ತನ್ನ ಮಗುವಿಗಾಗಿ ಹುಡುಕುವ ರೀತಿಯ ಭಾವ ಇಲ್ಲಿ ಪ್ರಕಟಗೊಂಡಿದೆ. ತನ್ನ ಎದುರಲ್ಲಿ ಕಾಣಿಸುವ ಗಿಳಿ, ಕೋಗಿಲೆ, ತುಂಬಿ, ಹಂಸ, ನವಿಲುಗಳನ್ನು ಮಾತನಾಡಿಸುತ್ತ, ಆತ್ಮೀಯವಾಗಿ ಅವುಗಳನ್ನುಕೇಳುವ ಶೈಲಿ ಇಲ್ಲಿ ಅನನ್ಯವಾಗಿದೆ. ಮಾತನಾಡುವುದೇ ಬಹುದೊಡ್ಡ ಗುಣವೆಂದುಕೊಂಡು ಮಾನವ, ಪ್ರಕೃತಿಯೊಂದಿಗೆ ದೂರ ನಿಲ್ಲುವ ವಾಸ್ತವಿಕ ಬದುಕಿನಲ್ಲಿ – ಅಕ್ಕನ ಈ ಪ್ರವೃತ್ತಿ ಎಂಥ ಪರಿಣಾಮಕಾರಿ ಎಂದರೆ ಪ್ರಕೃತಿಯಲ್ಲಿಯೂ ಮಾತು ಕೇಳುವ ಉತ್ತರಿಸುವ ಜೀವ ಸಂಕುಲವಿದೆ ಎಂಬುದನ್ನು ತೋರಿಸುತ್ತದೆ. ಆ ದೇವನ ಮೇಲಿನ ಅಕ್ಕನ ಅನುರಾಗ ಇಲ್ಲಿ ಪ್ರಕೃತಿಯ ಮೇಲಿನ ಪ್ರೇಮವಾಗಿ ರೂಪಗೊಂಡಿದೆ.
ಈ ವಚನದಲ್ಲಿಯ ಪರಿಸರ ಕ್ರಿಯಾಶೀಲತೆಯಿಂದ ತುಂಬಿಕೊಂಡಿದೆ. ಓದುವ, ಪಾಡುವ, ಎರಗಿಬಂದಾಡುವ, ಕೋಳನ ತಳಿಯೊಳಗಾಡುವ ಗಿರಿಗಹ್ವರದೊಳಾಡುವ ಎಂಬಂತಹ ಕೃದಂತ ನಾಮಗಳು ಪರಿಸರದ ಜೀವಂತಿಕೆಯನ್ನು ಎತ್ತಿ ತೋರಿಸುತ್ತವೆ. ಹಾಗೆಯೇ ಶ್ಲೇಷಾತ್ಮಕವಾಗಿ ಸುತ್ತ ಮುತ್ತ ಆವರಿಸಿರುವ ಮಾನವ ಪರಿಸರದ ನಾಟಕೀಯತೆಯಡೆಗೂ ಬೊಟ್ಟು ತೋರುವುದನ್ನು ಅರಿಯಬಹುದು.
ಈ ಕೃದಂತನಾಮಗಳು ಕೇವಲ ಪಕ್ಷಿಸಂಕುಲಕ್ಕೆ ಮಾತ್ರ ಹೇಳಿದ ಮಾತೆನಿಸದೆ ವ್ಯರ್ಥ ವಿದ್ಯಕಲಿತು- ’ಓದುವ ಪಂಡಿತ ಗಿಳಿಗಳು, ರಾಗ ಬದ್ದ ಹಾಡು ಹೇಳಿ ರಂಜಿಸುವ ಕೀರ್ತನಕಾರ ಕೋಗಿಲೆಗಳು, ಕಂಡಲ್ಲಿ ತಿರುಗುವ ಸಾಧಕ ತುಂಬಿಗಳು, ಆಳಕ್ಕಿಳಿದು ಶೋಧಿಸದ ಮೇಲಾಡುವ ಹಂಸಮಣಿಗಳು, ಪ್ರದರ್ಶನ ಕಲೆಯಲ್ಲಿ ನಿಪುಣತೆಯುಳ್ಳ ’ನವಿಲು’ ನಾಟ್ಯಮಣಿಗಳು ಮುಂತಾದ ಢಾಂಬಿಕ ಭಕ್ತಿಯ ಸಮೂಹದ ಪರಿಸರವನ್ನು
ಕುರಿತು ಮಾಡಿರುವ ವ್ಯಂಗ್ಯತನ ಈ ವಚನದಲ್ಲಿ ದಾಖಲಾಗಿರುವಂತಿದೆ. ಆಂತರಂಗಿಕ ಆಚರಣೆಯಿಲ್ಲದೆ ಬಾಹ್ಯಾಚರಣೆಯಲ್ಲಿ ತೊಡಗಿರುವವರನ್ನು ಖಂಡಿಸುವ ಪರಿ ಇಲ್ಲಿ ಮನಮುಟ್ಟುತ್ತದೆ. ಸಕಲ ಜೀವರಾಶಿಗಳಲ್ಲಿ ಅಂತರ್ ಮುಖಿಯಾಗಿರುವ ಶಿವತ್ವವು ಸಚರಾಚರ
ಸೃಷ್ಟಿಯಲ್ಲಿಯೂ ಅಂತರ್ಗತವಾಗಿದೆ. ಪ್ರಕೃತಿ ಮತ್ತು ಪರಿಸರದ ಸಂಬಂಧವು ಶಿವ-
ಜೀವರ ಸಂಬಂಧದಂತೆ ಹೊಂದಿಕೆಯಾಗುವಂತಿರಬೇಕು ಇದರ ಅರಿವು ಅನುಸಂಧಾನದ ಬಯಕೆ ಇಲ್ಲೆಲ್ಲ ವ್ಯಕ್ತವಾಗಿರುವುದನ್ನು ಅರಿಯಬಹುದು.ಪರಿಸರ’ ಭೂಲೋಕದ ಮಹಾನ್ ಸಂಪತ್ತು, ಅದು ಪರಿಶುದ್ಧವಾದಷ್ಟು ’ಜೀವರಾಶಿ’ಸಂತೋಷವಾಗಿರಲು ಸಾಧ್ಯ. ಆದರೆ ಇಂದು ಪರಿಸರ ಮಲಿನವಾಗತೊಡಗಿದೆ. ಪ್ರಾಕೃತಿಕ ಪರಿಸರದ ಮೇಲೆ ಇಂದು ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಪರಿಸರಗಳ ಮಾಲಿನ್ಯ ತಗಲಿಕೊಂಡಿದೆ. ’ಕಾಡುಗಳೆಲ್ಲ ನಾಡಾಗಿ ಪರಿವರ್ತಿತಗೊಳ್ಳ ತೊಡಗಿವೆ. ಪ್ರಾಕೃತಿಕ ಸಂಪತ್ತು ದುರ್ಭಳಕೆಗೊಂಡು ಭೂಮಿ ಬಂಜೆಯರೂಪ ತಾಳುವ ದಿನಗಳು ಹತ್ತಿರವಾಗುತ್ತಿವೆ. ಭೂಮಿ ಬಿಸಿಯೇರುತ್ತಿದ್ದು, ಅಂತರ್‌ಜಲ ಕುಸಿಯ ತೊಡಗಿದೆ. ಋತುಮಾನಗಳಲ್ಲಿ ಏರು-ಪೇರು ಸುರುವಾಗಿದೆ. ಹಿಮಾಲಯ ಪರ್ವತ ಕರಗತೊಡಗಿದೆ. ’ಜೀವರಕ್ಷಕ’ ಓಜೋನ್ ಪದರಿಗೆ ರಂದ್ರ ಬೀಳುವ ಸೂಚನೆಯನ್ನು ಪರಿಸರ ವಿಜ್ಞಾನಿಗಳು ನೀಡುತ್ತಿದ್ದಾರೆ. ಹೀಗೆ ಪರಿಸರದಲ್ಲಿ ಅಸಮತೋಲನ ಉಂಟಾಗಿ ನಾನಾ ಅನಾಹುತಗಳು ಪ್ರಾರಂಭವಾಗತೊಡಗಿವೆ. ಭೂಮಿಯ ಮೇಲಿನ ಜೀವರಾಶಿ ಸುಖವಾಗಿರಲು ನಾವು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವುದು ಅನಿವಾರವಾಗಿದೆ. ಈ ಬಗೆಯಲ್ಲಿ ಚಿಂತಿಸುವ ಅನೇಕ ಪರಿಸರವಾದಿಗಳು ನಾನಾ
ರೀತಿಯ ಪ್ರಯತ್ನದಲ್ಲಿ ತೊಡಗಿದ್ದಾರೆ. ಸಾಮಾಜಿಕ ಚಿಂತಕರು, ವಿಜ್ಞಾನಿಗಳು, ಸಾಹಿತಿಗಳು ಈ ಅಂಶವನ್ನು ಗಂಭೀರವಾಗಿ ಪರಿಗಣಿಸತೊಡಗಿದ್ದಾರೆ. ಆದರೆ ಇಂಥ
ಚಿಂತನೆಯು ೧೨ನೆಯ ಶತಮಾನದಲ್ಲಿಯೇ ನq ದಿತ್ತು ಎಂಬುದನ್ನು ಬಸವಾದಿ ಶರಣರವಚನಗಳಲ್ಲಿ ಗುರುತಿಸಬಹುದಾಗಿದೆ. ಪರಿಸರ ರಕ್ಷಣೆಯಿಂದ ಮಾತ್ರ ಮನುಷ್ಯಕುಲ ಬದುಕಬಲ್ಲದೆಂಬ ವೈಜ್ಞಾನಿಕ ಸತ್ಯವನ್ನು ಶರಣರು ಕಂಡುಕೊಂಡಿದ್ದರು. ಅಂತೆಯೇ ಅವರು ಸಕಲ ಜೀವಾತ್ಮರಿಗೆ ಲೇಸ ಬಯಸುವ ಪರಿಸರವನ್ನು ನಿರ್ಮಿಸಲು ಹೆಣಗಿದರು. ಅದಕ್ಕಾಗಿ ಅನೇಕ ಜೀವನ ತತ್ವಗಳನ್ನು ನಿರೂಪಿಸಿದರು, ಅವುಗಳಲ್ಲಿ ಪರಿಸರ ಶುದ್ದಿಗೆ ಅವಶ್ಯವಾದವುಗಳೆಂದರೆ,
ನಡೆ-ನುಡಿ ಒಂದಾಗಿರುವುದು ಆಚಾರ-ವಿಚಾರ, ಜ್ಞಾನ-ಕ್ರಿಯೆ, ಅಂತರಂಗ- ಬಹಿರಂಗಶುದ್ಧಿ, ಮೇಲು-ಕೀಳಿಲ್ಲದ ಭಾವ, ಸ್ವಾತಂತ್ರ-ಸಮಾನತೆ, ಕಾಯಕ- ದಾಸೋಹ ಪದ್ಧತಿಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ನಡೆದು ತೋರಿದರು. ಭಕ್ತಿಯ ಹೆಸರಲ್ಲಿ ಮಾನವ ಪ್ರೀತಿಯನ್ನು ಬಿತ್ತಿ ಬೆಳೆಯಲು ಪ್ರಯತ್ನಿಸಿದರು.
ಲೋಕ ಕಲ್ಯಾಣವನ್ನು ಸಾಧಿಸುವ ವಾತಾವರಣ ನಿರ್ಮಿಸಲು ಹೋರಾಟಮಾಡಿದರು. ಅಂದಿನ ಪರಿಸರದಲ್ಲಿ ತುಂಬಿನಿಂತಿದ್ದ ಅಸಮಾನತೆ ಹೊಡೆದೋಡಿಸಲು ಆ ಕಾಲದ ವೈವಿದ್ಯಮಯವಾದ ಪರಿಸರದ ಚಿತ್ರವನ್ನು ತಮ್ಮ ವಚನಗಳ ಮೂಲಕ ದರ್ಶಿಸಿದರು

ಸುಗಂಧ ಪುಷ್ಪದಲ್ಲಿರುವ ಭೃಂಗ
ಮೊಲೆಯುಣ್ಣುವ ಶಿಶು
ಆನೆ, ಅಂಕುಶ, ಗಿರಿ-ವಜ್ರ
ತಮಂಧ-ಜ್ಯೋತಿ, ಮರಹು-ನೆನವು
ಸರ್ಪದ ನೆರಳಲ್ಲಿರುವ ಕಪ್ಪೆ

ತೊರಣಕ್ಕೆ ತಂದ ಹರಕೆ ಕುರಿ, ಗಾಳಿಗಿಟ್ಟ ದೀಪ, ಆನೆಯನೇರಿಕೊಂಡು ಹೋಗುವವರು,ಪಲ್ಲಕ್ಕಿ ಏರಿದ ಸೊಣಗ, ಬೆಟ್ಟದ ಮೇಲೆ ಮನೆ ಮಾಡಿಕೊಂಡವರು ಇಂತಹ ಅನೇಕ ಚಿತ್ರಗಳು ವಚನಕಾರರಲ್ಲಿ ಪರಿಸರದ ಸ್ವರೂಪಾಗಿ ಕಾಣಸಿಗುತ್ತವೆ. ಪಕ್ಷಿ-ಪ್ರಾಣಿ-ಸಸ್ಯ ಸಂಸ್ಕೃತಿಯ ಮೂಲಕ ಅಂದಿನ ಸಾಮಾಜಿಕ, ಧಾರ್ಮಿಕ ವ್ಯಕ್ತಗೊಂಡಿರುವುದನ್ನು ಗುರುತಿಸಬಹುದು.

ಕಲ್ಲನಾಗರ ಕಂಡರೆ ಹಾಲೆಯುವರಯ್ಯಾ
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದರೆ ಹೋಗಿ ಎಂಬರು
ಉಂಬದಾ ಲಿಂಗಕ್ಕೆ ಬೋನವ ಹಿಡಿವರಯ್ಯಾ

ಎಂಬ ವಚನ ನಿಜಭಕ್ತಿಯರಿಯದ ಸಾಮಾಜಿಕ ಪರಿಸರವನ್ನು ಪರಿಚಯಿಸುತ್ತದೆ. “ಬಡಹಾರುವನೆಷ್ಟು ಭಕ್ತನೆನಿಸಿದರೂ ನೇಣಿನ ಹಂಗ ಬಿಡದ ಸ್ಥಿತಿ, ತಾವು ಅಂಕು ಡೊಂಕಿದ್ದುಕೊಂಡು ಲೋಕದ ಡೊಂಕವ ತಿದ್ದಲು ಪ್ರಯತ್ನಿಸುವ ರೀತಿ, ಇವನಾರೆಂದು ಎಣಿಸುವ ಸಂದರ್ಭ, ಮೂಕೊರತಿ ಕೈಯಲ್ಲಿ ಹಾವಿಡಿದುಕೊಂಡು ಮಗನ ಮದುವೆಗೆ ಶಕುನ ಕೇಳುವ ಚಿತ್ರ, ಸಿರಿಗರ ಹೊಡೆದವರ ನುಡಿಸಲಾರದ ವಾತಾವರಣ, ನಡೆಯೊಂದು ಪರಿ-ನುಡಿಯೊಂದು ಪರಿ ಕಾಣುವ ಸಮಾಜ, ಹೆಣ್ಣು-ಗಂಡು ಬಡವ-ಶ್ರೀಮಂತ. ವರ್ಗ-ವರ್ಣದಲ್ಲಿ ಭೇದ ಭಾವ ಕಾಣುತ್ತಿರುವ ಪರಿಸರವನ್ನು ಬದಲಿಸಲು ಪ್ರಯತ್ನಿಸಿದರು ಶರಣರು. ಶರಣರ ಪರಿಸರ ಕಾಳಜಿ ಅಪೂರ್ವವಾದುದು. ಈ ಪರಿಸರ ರಕ್ಷಣೆಗಾಗಿ ಕ್ರಾಂತಿ ಮಾಡಬೇಕಾಯಿತು. ಪರಿಸರ ದೂಷಕರ ವಿರುದ್ಧ ಹೋರಾಟ ಮಾಡಿ ಪರಿಸರ ಸಂರಕ್ಷಿಸಲು ಹೆಣಗಿದರು

“ಮರ್ತದ ಬಾಳು ಹಾಳಾಗಬಾರದೆಂದು
ಕರ್ತನಟ್ಟಿದ ಶರಣನೊಬ್ಬನ”

ಎಂಬ ವಚನ ಹೇಳುವಂತೆ ಬಸವಣ್ಣನವರು ಬಂದರು, ಅವರ ಕಾರ್ಯಕ್ಕೆ ಮಣಿದು ಅನೇಕ ಶರಣರು ಈ ನೆಲಕ್ಕೆ ಬಂದರು. ತಮ್ಮ ತಮ್ಮ ’ಪರಿಸರ ಪ್ರಜ್ಞೆ ಮೆರೆದರು. ಪರಿಸರ ನಾಶಕ್ಕಾಗಿ ಮುರುಗುವ ಬಸವಣ್ಣ

’ಮರಗಿಡ ಬಳ್ಳಿ ಧಾನ್ಯಗಳ ಬೆಳಸೆಲ್ಲವ
ತರಿ ತರಿದು ಪ್ರಾಣವ ಕೊಂಡುಂಡು
ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿಧಿಯಯ್ಯಾ’

ಎಂದು ಕೇಳಿ ಅದನ್ನು ತಡೆಯಲು ವಿಧಿ (ಕಾಯ್ದೆ) ಹೇರುತ್ತಾರೆ. “ಒಂದಿದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿ” ಚರಾಚರ ಜಗತ್ತಿದೆ. ಅದು
ಕಾರಣ, ಶರಣರು ಲಿಂಗಕ್ಕರ್ಪಿಸಿ ಪ್ರಸಾದವಕೊಂಡು ನಿರ್ದೋಷಿಗಳಾಗಿ ಬದುಕಲು ಸೂಚಿಸುತ್ತಾರೆ. ಲಿಂಗಕ್ಕರ್ಪಿಸುವುದು’ ಎಂದರೆ- ಉಪಯೋಗಿಸುವುದು. ಪ್ರಸಾದ ಭಾವವು ಬದುಕನ್ನು ಪರಿಶುದ್ಧವಾಗಿಡುವುದು ಅಂದರೆ ಸಂಗ್ರಹ ಬುದ್ಧಿಯಿಂದಲ್ಲ ಇಲ್ಲಿ ಕಾಯಕ-ದಾಸೋಹದ ಭಾವ ’ಪರಿಸರ’ವನ್ನು ಸುರಕ್ಷಿತವಾಗಿಡಬಲ್ಲದು. ಉತ್ಪಾದಕತೆ- ಹಂಚಿಕೆ- ಅನುಭೋಗದ ಅರ್ಥವನ್ನು ನಾವಿಂದು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನಿಜಭಕ್ತಿಯೆಂದರೆ ಸತ್ಯಪ್ರೇಮವನ್ನು ಅರಿಯುವದು ಪರಸ್ಪರ ಪ್ರೀತಿ ಭಕ್ತಿಯ ಸ್ಥಾಯಿ. ಅದು ಜ್ಞಾನಯುಕ್ತವಾಗಿರಬೇಕು. ಇಂಥ ವಿಚಾರಗಳಿಂದ ಶರಣರು ತಮ್ಮ ವಚನಗಳ ಮೂಲಕ ಜಾಗೃತಿಯುಂಟುಮಾಡಿದರು ನಮ್ಮ ಆಹಾರ ಪದ್ಧತಿಗೂ ನೀತಿ-ನಿಯಮ ಹಾಕಿಕೊಟ್ಟರು. ಇದರಿಂದ ಶ್ರೇಷ್ಠ ವ್ಯಕ್ತಿತ್ವ ನಿಮಾರ್ಣವಾಗುವುದೆಂದು ನಂಬಿದರು. ಆ ಮೂಲಕ ಭಕ್ತಿ ಪರಿಸರ, ಕುಟುಂಬ ಪರಿಸರ ಗಟ್ಟಿಗೊಂಡು ಸಾಮಾಜಿಕ, ಧಾರ್ಮಿಕಾದಿ ಪರಿಸರಗಳ ಸಂರಕ್ಷಣೆ ಸಾಧ್ಯವೆಂಬುದನ್ನು ಆಚರಿಸಿ ತೋರಿಸಿದರು. ಅಂತೆಯೇ ವಚನಗಳಲ್ಲಿ ಲೋಕಾನುಭವ, ತಾತ್ವಿಕ ಚಿಂತನೆ, ಸಾಮಾಜಿಕ ಜೀವನದ ಇತಿಹಾಸ ಕಾಣಸಿಗುವಂತೆ ಅವುಗಳಲ್ಲಿ ಕಾಲಾತೀತವಾದ ಪರಿಸರ ಪ್ರಜ್ಞೆಯನ್ನು ಕಾಣಬಹುದಾಗಿದೆ.


ಡಾ.ಸೋಮನಾಥ ಯಾಳವಾರ ಹಿರಿಯ ವಿದ್ವಾಂಸರು
ಹುಮನಾಬಾದ್, ಜೀ.ಬೀದರ್