
(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು18: ಆರೋಗ್ಯವೆಂದರೆ ದೈಹಿಕ, ಮಾನಸಿಕ, ಆಧ್ಯಾತ್ಮಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯ ಕಾಪಾಡಿಕೊಳ್ಳವದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪಾತ್ರ ಅತ್ಯಂತ ಮಹತ್ವ ಪೂರ್ಣವಾಗಿದೆ ಎಂದು ಯೋಗ ಗುರುಮಾತೆ ಓಂಕಾರೇಶ್ವರಿ ಮಾತಾಜಿ ಹೇಳಿದರು.
ಪಟ್ಟಣದ ಶ್ರೀಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಬಸವ ಪತಂಜಲಿ ಯೋಗ ಸಮಿತಿ, ತಾಲೂಕಾ ಪತಂಜಲಿ ಯೋಗ ಸಮಿತಿ, ವರ್ತಕರ ಸಂಘ, ರೋಟರಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಮತ್ತು ಪರಿಸರ ಸ್ನೇಹ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಜುಲೈ18ರಿಂದ 30ರವರೆಗೆ ಹಮ್ಮಿಕೊಂಡಿರುವ ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಧಿ ಎಂದು ಕರೆಯಲ್ಪಡುವ ಅತ್ಯಂತ ಪುರಾತನವಾದ ಭಾರತೀಯ ಚಿಕಿತ್ಸಾ ಪದ್ಧತಿಯು ಪ್ರಾಕೃತಿಕವಾಗಿಯೇ ನಿರೋಗಿಗಳನ್ನಾಗಿ ಮಾಡುವ ವಿಶೇಷತೆಯನ್ನು ಹೊಂದಿದೆ. ಪ್ರಕೃತಿ ಅಥವಾ ನಿಸರ್ಗದ ಅಧೀನದಲ್ಲಿ ಮಾನವನ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿಯ ನಿಯಮಗಳನ್ನು ಪಾಲಿಸುವುದು ಅವಶ್ಯ.
ಪ್ರಕೃತಿ ಚಿಕಿತ್ಸೆಯ ಒಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿದ್ದು ಇದು ಕೇವಲ ರೋಗವನ್ನು ಮಾತ್ರ ದೂರ ಮಾಡದೆ ಮನುಷ್ಯನ ಜೀವನ ಶೈಲಿ ಸರಿ ಮಾಡಿ ದೇಹದ ರೋಗ ನಿರೋಧಕ ಶಕ್ತಿ ಹಾಗೂ ಚೈತನ್ಯ ಹೆಚ್ಚಿಸುವ ಮೂಲಕ ಮಾನವನ ಆರೋಗ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಶಿಬಿರದಲ್ಲಿ ಸಿಪಿಐ ಬಸವರಾಜ, ಮುರಿಗೆಪ್ಪ ಶೆಟ್ಟರ, ಮಂಜುನಾಥ ಉಪ್ಪಾರ, ವಿಶ್ವನಾಥ ಅಂಕಲಕೋಟಿ, ಮೋಹನಕುಮಾರ ಹುಲ್ಲತ್ತಿ, ಮಂಜುನಾಥ ಬೋವಿ, ದ್ರಾಕ್ಷಾಯಿಣಿ ಹರಮಗಟ್ಟಿ, ಪರಶುರಾಮ ಮೇಲಗಿರಿ, ಪವಾಡೆಪ್ಪ ಆಚನೂರ, ಕಮಲಾ ನಿಡಗುಂದಿ, ಹನುಮಂತಪ್ಪ ಕಾಟೇವಾಡಿ, ಶಿವಯೋಗಿ ಹೊಸಮನಿ, ಕೊಟ್ರೇಶ ತೊಪ್ಪಲದ, ಮಹೇಶ ಖಟಾವಕರ, ಮಂಜುನಾಥ ಕುಡತರಕರ ಸೇರಿದಂತೆ ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.