ಪ್ರಕೃತಿ ಚಿಕಿತ್ಸೆ ಬಗ್ಗೆ ಜಾಗೃತಿ ಅಗತ್ಯ

ಕಲಬುರಗಿ,ನ.18: ಇಂದಿನ ಆಧುನಿಕ ಒತ್ತಡ ಬದುಕಿನಲ್ಲಿ ಆರೋಗ್ಯದೆಡೆಗೆ ನಿಷ್ಕಾಳಜಿ ವಹಿಸಿ, ನಾವೇ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ. ಯಾವುದೇ ರೀತಿಯ ಅಡ್ಡ ಪರಿಣಾಮಗಳ್ಳಿಲ್ಲದ, ಸಂಪೂರ್ಣ ಗುಣಮುಖವಾಗುವ, ನಿಸರ್ಗದಲ್ಲಿಯೇ ಉಚಿತವಾಗಿ ದೊರೆಯುವ ಸಂಪನ್ಮೂಲಗಳಿಂದ ಮಾನವನಿಗೆ ಬರುವ ಸರ್ವ ರೋಗಳಿಗೂ ಪ್ರಕೃತಿ ಚಿಕಿತ್ಸೆಯಲ್ಲಿ ಮದ್ದಿದ್ದು, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆಯೆಂದು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ತಜ್ಞ ಡಾ.ಪ್ರಮೋದ ಗುಂಡಗುರ್ತಿ ಹೇಳಿದರು.
ಅವರು ನಗರದ ಆಳಂದ ರಸ್ತೆಯಲ್ಲಿರುವ ‘ಶೆಟ್ಟಿ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತೀಯ ವೈದ್ಯ ಪದ್ಧತಿಗೆ ಹೆಚ್ಚಾಗಿ ಮೊರೆ ಹೋಗಬೇಕಾಗಿದೆ. ಔಷಧೀಯ ಸಸ್ಯಗಳನ್ನು ಎಲ್ಲೆಡೆ ಬೆಳೆಸಬೇಕು. ನಮ್ಮ ಭಾಗದಲ್ಲಿ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಆರಂಭಿಸಬೇಕು. ಮಾನವನ ದೇಹ ಪಂಚಭೂತಗಳಿಂದ ಕೂಡಿರುವದರಿಂದ, ಅವುಗಳಿಂದಲೇ ಚಿಕಿತ್ಸೆ ದೊರೆಯುತ್ತದೆ. ಸೂರ್ಯ ಸ್ನಾನ, ಜಲ ಚಿಕಿತ್ಸೆ, ಮಣ್ಣಿನ ಮೂಲಕ ಚಿಕಿತ್ಸೆ, ವಿವಿಧ ಗಿಡ-ಮೂಲಿಕೆಗಳ ಮಹತ್ವ, ಚಿಕಿತ್ಸೆಯಲ್ಲಿ ಅವುಗಳ ಬಳಕೆಯ ವಿಧಾನ ಸೇರಿದಂತೆ ವಿವಿಧ ಪ್ರಕೃತಿ ಚಿಕಿತ್ಸೆಗಳನ್ನು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ, ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆ ನಮಗೆ ನೀಡಿದ್ದಾರೆ. ರಾಸಾಯನಿಕ ಮುಕ್ತ, ಯಾವುದೇ ಅಡ್ಡಪರಿಣಾಮಗಳಿಲ್ಲದ ಪ್ರಕೃತಿ ಚಿಕಿತ್ಸೆ ಬಗ್ಗೆ ಅಲಕ್ಷ್ಯ ಮಾಡಿ ಅನೇಕ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಇದು ಪ್ರಸ್ತುತ ತುಂಬಾ ಅಗತ್ಯವಾಗಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಜಿಡಗೆ, ಸಿದ್ದಾರೂಢ ನರಿಬೋಳ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಹೆಳವರ ಯಾಳಗಿ, ಅಣ್ಣಾರಾಯ ಮಂಗಾಣೆ, ಬಸವರಾಜ ಎಸ್.ಪುರಾಣೆ, ಅಮರ ಜಿ.ಬಂಗರಗಿ, ಗುರುಲಿಂಗಪ್ಪ ನಿಂಬರ್ಗಿ ಸೇರಿದಂತೆ ಮತ್ತಿತರರಿದ್ದರು.