ಪ್ರಕೃತಿ ಚಿಕಿತ್ಸೆಯಲ್ಲಿದೆ ಸರ್ವರೋಗಳಿಗೂ ಮದ್ದು

ಕಲಬುರಗಿ,ನ.18: ಇಂದಿನ ಆಧುನಿಕ ಒತ್ತಡ ಬದುಕಿನಲ್ಲಿ ಆರೋಗ್ಯದೆಡೆಗೆ ನಿಷ್ಕಾಳಜಿ ವಹಿಸಿ, ನಾವೇ ಅನೇಕ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ. ಯಾವುದೇ ರೀತಿಯ ಅಡ್ಡ ಪರಿಣಾಮಗಳ್ಳಿಲ್ಲದ, ಸಂಪೂರ್ಣ ಗುಣಮುಖವಾಗುವ, ನಿಸರ್ಗದಲ್ಲಿಯೇ ಉಚಿತವಾಗಿ ದೊರೆಯುವ ಸಂಪನ್ಮೂಲಗಳಿಂದ ಮಾನವನಿಗೆ ಬರುವ ಸರ್ವ ರೋಗಳಿಗೂ ಪ್ರಕೃತಿ ಚಿಕಿತ್ಸೆಯಲ್ಲಿ ಮದ್ದಿದೆಯೆಂದು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ, ಪ್ರಕೃತಿ ಚಿಕಿತ್ಸೆ ತಜ್ಞ ಡಾ.ಪ್ರಮೋದ ಗುಂಡಗುರ್ತಿ ಅಭಿಮತ ವ್ಯಕ್ತಪಡಿಸಿದರು.
ನಗರದ ಸಮೀಪದ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಬಳಿಯಿರುವ ಶ್ರೀ ವಿರೂಪಾಕ್ಷೇಶ್ವರ ಶಿಕ್ಷಣ ಸಮಿತಿಯ ‘ಶ್ರೀ ಮಹಾಂತೇಶ್ವರ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘5ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾನವನ ದೇಹ ಪಂಚಭೂತಗಳಿಂದ ಕೂಡಿರುವದರಿಂದ, ಅವುಗಳಿಂದಲೇ ಚಿಕಿತ್ಸೆ ದೊರೆಯುತ್ತದೆ. ಸೂರ್ಯ ಸ್ನಾನ, ಜಲ ಚಿಕಿತ್ಸೆ, ಮಣ್ಣಿನ ಮೂಲಕ ಚಿಕಿತ್ಸೆ, ವಿವಿಧ ಗಿಡ-ಮೂಲಿಕೆಗಳ ಮಹತ್ವ, ಚಿಕಿತ್ಸೆಯಲ್ಲಿ ಅವುಗಳ ಬಳಕೆಯ ವಿಧಾನ ಸೇರಿದಂತೆ ವಿವಿಧ ಪ್ರಕೃತಿ ಚಿಕಿತ್ಸೆಗಳನ್ನು ವಿವರಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದ ಮೂಲಕ ಪ್ರಶ್ನೆಗಳಿಗೆ ಉತ್ತರಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ.ಶಿವಲಿಂಗಯ್ಯ ಕಳ್ಳಿಮಠ ಮಾತನಾಡಿ, ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆ ನಮಗೆ ನೀಡಿದ್ದಾರೆ. ರಾಸಾಯನಿಕ ಮುಕ್ತ, ಯಾವುದೇ ಅಡ್ಡಪರಿಣಾಮಗಳಿಲ್ಲದ ಪ್ರಕೃತಿ ಚಿಕಿತ್ಸೆ ಬಗ್ಗೆ ಅಲಕ್ಷ್ಯ ಮಾಡಿ ಅನೇಕ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ನಮ್ಮ ಭಾಗದಲ್ಲಿ ಪ್ರಕೃತಿ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸದಸ್ಯ ದೇವೇಂದ್ರಪ್ಪ ಗಣಮುಖಿ, ಸಂಸ್ಥೆಯ ವ್ಯವಸ್ಥಾಪಕ ಶಿವಕುಮಾರ ಕಳ್ಳಿಮಠ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ರೇವಣಸಿದ್ದಪ್ಪ ನಿಂಬಾಜಿ, ಸಹ ಶಿಕ್ಷಕರಾದ ಮುರುಘರಾಜೇಂದ್ರ ಹಿರೇಮಠ, ಪೂಜಾ ಕಳ್ಳಿಮಠ, ಶಿವಯೋಗಿ ಕಳ್ಳಿಮಠ, ರಾಜಕುಮಾರ ಬಳೂರ್ಗಿ, ಅಂಬರೀಷ್ ಕುಂಬಾರ, ನಾಗೇಂದ್ರಯ್ಯ ಕಳ್ಳಿಮಠ, ಸಂತೋಷಕುಮಾರ ಪಾಟೀಲ ಸೇರಿದಂತೆ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.