ಪ್ರಕೃತಿ ಆಸ್ವಾದಿಸುವ ಮನಸ್ಸಿನಿಂದ ಸೃಜನಶೀಲತೆ ಉತ್ಪತ್ತಿ

ಧಾರವಾಡ,ಜ8 :ಯಾವ ಲೇಖಕ ತಲ್ಲಣಗಳಿಗೆ ಈಡಾಗುತ್ತಾನೊಅಂತಹ ಸಾಹಿತಿಯಿಂದ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಾಹಿತ್ಯರಚಿತವಾಗುತ್ತದೆ ಎಂದು ಸಾಹಿತಿ ಬೆಂಗಳೂರಿನ ರಾಜಶೇಖರ ಮಠಪತಿ (ರಾಗಂ) ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಗದಿಗೆಯ್ಯ ಹೊನ್ನಾಪುರಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಸೃಜನಶೀಲತೆ ಮತ್ತು ತಲ್ಲಣಗಳು’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಧರ್ಮವೀರ ಭಾರತಿ, ಕನುಪ್ರಿಯ, ಮಾಂಟೋ ಮುಂತಾದ ಕವಿಗಳು ಸೃಜನಶೀಲತೆಗೆ ಮಾದರಿಯಾದಂಥ ಸಾಹಿತ್ಯ ರಚನೆ ಮಾಡಿದ್ದಾರೆ. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಅನುವಾದ ಸಾಹಿತ್ಯದಲ್ಲಿಯೂ ಸೃಜನಶೀಲತೆಯನ್ನು ಹೆಚ್ಚಾಗಿ ಕಾಣುತ್ತೇವೆ ಎಂದು ಹೇಳಿ, ಒಟ್ಟು ಸಾಹಿತ್ಯ ಸೃಜನಶೀಲವಾದದ್ದು ಮೆಟಾಮಾರ್ಪಸಸ್ ಕಾದಂಬರಿಯಲ್ಲಿ, ಲಂಕೇಶ, ಬೇಂದ್ರೆಯವರ ಸಾಹಿತ್ಯದಲ್ಲಿ ಸೃಜನಶೀಲತೆ ಇರುವುದರೊಂದಿಗೆ ಬುದ್ಧಿ ಮತ್ತು ಪ್ರೇಮ ಇವುಗಳ ಮಧ್ಯದಲ್ಲಿಇರುವ ವ್ಯತ್ಯಾಸಗಳನ್ನು ತಿಳಿಸುವುದರೊಂದಿಗೆ ಕ್ರಾಂತಿಕಾರಿ ಸಂತ ತರುಣಸಾಗರ ಅವರ ಮಾತುಗಳನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿಡಾ.ದುಷ್ಯಂತ ನಾಡಗೌಡ ಮಾತನಾಡಿ, ಓದಬೇಕು, ಓದಿದ್ದನ್ನು ವಿಚಾರ ಮಾಡಬೇಕು, ವಿಚಾರ ಮಾಡಿ ಅರಗಿಸಿಕೊಂಡಿದ್ದನ್ನು ಕೇಳುಗರ ಮನಸ್ಸಿಗೆ ತಿಳಿಯುವ ಹಾಗೆ ವಿವರಿಸಬೇಕು ಅಂದಾಗ ಸೃಜನಶೀಲತೆ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಬರವಣಿಗೆಯು ಸೃಜನಶೀಲತೆಯಿಂದ ಕೂಡಿರುತ್ತದೆ. ಅನುಭವವನ್ನು ಹೇಳಲು ಭಾಷೆಯು ವಿಸ್ತಾರವಾಗಬೇಕು. ಸಾಹಿತಿ, ಕಲಾವಿದರಿಗೆ ಪ್ರಕೃತಿಯನ್ನು ನೋಡಿ ಆಸ್ವಾದಿಸುವ ಮನಸ್ಸುಇದ್ದಾಗ ಸೃಜನಶೀಲತೆ ಉತ್ಪತ್ತಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ದತ್ತಿದಾನಿ ಶ್ರೀಮತಿ ಜಗದೇವಿ ಹೊನ್ನಾಪುರಮಠ ಇದ್ದರು.ಡಾ. ಜಿನದತ್ತ ಹಡಗಲಿ ಸ್ವಾಗತಿಸಿ, ನಿರೂಪಿಸಿದರು. ಮಹಾಂತೇಶ ನರೇಗಲ್ಲ ವಂದಿಸಿದರು.
ಕಾರ್ಯಕ್ರಮದಲ್ಲಿಡಾ. ಹೇಮಾ ಪಟ್ಟಣಶೆಟ್ಟಿ, ನಿಂಗಣ್ಣಕುಂಟಿ, ಮೇಘಾ ಹುಕ್ಕೇರಿ, ಲಲಿತಾ ಪಾಟೀಲ, ಪ್ರೊ. ಎಸ್. ಕೆ. ಕುಂದರಗಿ, ಎಸ್.ಎಂ. ದಾನಪ್ಪಗೌಡರ, ಲಿಂಗರಾಜ ಪಾಟೀಲ, ರಾಮಚಂದ್ರ ದೋಂಗಢೆ, ಸಿದ್ದರಾಮ ಹಿಪ್ಪರಗಿ, ಯಕ್ಕೇರಪ್ಪ ನಡುವಿನಮನಿ, ದರಗದ, ದೇಸಾಯಿ ಹಾಗೂ ಹೊನ್ನಾಪುರ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.