ಪ್ರಕೃತಿಗೆ ಕೊಡುಗೆ ನೀಡುವುದು ಆದ್ಯ ಕರ್ತವ್ಯ: ಮಲ್ಲಿಕಾರ್ಜುನಶ್ರೀ

ಬ್ಯಾಡಗಿ, ಮಾ27: ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಚ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದ್ದು,ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಮುಪ್ಪಿನಸ್ವಾಮಿ ಮಠದ ಮಲ್ಲಿಕಾರ್ಜುನ ಶ್ರೀಗಳು ಹೇಳಿದರು.

ಪಟ್ಟಣದ ಮುಪ್ಪಿನಸ್ವಾಮಿ ಮಠದ ಆವರಣದಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕಲೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಸೇವಾ ಸಂಸ್ಥೆಯ ಉದ್ಘಾಟನೆಯನ್ನು ಸಸಿ ನೆಡುವ ಮೂಲಕ ನೆರವೇರಿಸಿ ಮಾತನಾಡಿದ ಅವರು, ದಿನೇ ದಿನೇ ಹೆಚ್ಚುತ್ತಿರುವ ಭೂಮಿಯ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬರಲ್ಲೂ ಪರಿಸರ ಪ್ರಜ್ಞೆ ಮೂಡಿಸುವ ಅಗತ್ಯವಿದ್ದು, ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರದ ಸೌಂದರ್ಯವನ್ನು ಹೆಚ್ಚಿಸುವದರ ಜೊತೆಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, ಇಂದಿನ ದಿನ ನಮ್ಮ ಮನೆ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಹಸಿರೇ ಉಸಿರು ಎಂಬುದನ್ನು ಅರಿತು ಎಲ್ಲರೂ ಸ್ವಯಂ ಪ್ರೇರಿತರಾಗಿ ಪರಿಸರದ ಸಂರಕ್ಷಣೆಗೆ ತೊಡಗಿಸಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಿವಕುಮಾರ ಹೊಸಳ್ಳಿ, ಪ್ರಧಾನ ಕಾರ್ಯದರ್ಶಿ ಶಶಿಧರ ಹಿರೇಮಠ, ಬಸವರಾಜ ಸೊಟ್ಟೇರ, ಶಿವನಗೌಡ ಪಾಟೀಲ, ಕುಮಾರಸ್ವಾಮಿ ಹೊಸಮಠ, ನೀಲಕಂಠ ಹಾದಿಮನಿ, ಚಂದ್ರು ಛತ್ರದ ಉಪಸ್ಥಿತರಿದ್ದರು.