ಪ್ರಕಾಶ ರಾಠೋಡರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ವಿಜಯಪುರ : ಮೇ.19:ಬಂಜಾರಾ ಸಮಾಜದ ನಾಯಕ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಂಜಾರಾ ಸಮಾಜದ ಮುಖಂಡ, ಜಿ.ಪಂ. ಮಾಜಿ ಸದಸ್ಯ ರಾಜಪಾಲ ಚವ್ಹಾಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿಯನ್ನು ಜಾರಿಗೊಳಿಸಿದ ಅವೈಜ್ಞಾನಿಕ ನಿರ್ಧಾರದ ವಿರುದ್ಧ ಹಾಗೂ ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಅನೇಕ ಕಡೆ ಸುತ್ತಾಡಿ ಪಕ್ಷದ ಪರ ಪ್ರಬಲವಾಗಿ ಪ್ರಚಾರ ನಡೆಸಿದ ಪ್ರಕಾಶ ರಾಠೋಡರು ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ, ಸಿದ್ಧರಾಮಯ್ಯ ಅವರ ಬಲಗೈ ಭಂಟನಾಗಿ, ಕಾಂಗ್ರೆಸ್ ನಿಷ್ಠಾವಂತ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಬಂಜಾರಾ ಸಮಾಜದ ಜನರಿದ್ದಾರೆ, ಬಂಜಾರಾ ಸಮಾಜಕ್ಕೆ ಪ್ರಾತಿನಿಧ್ಯ ದೊರಕಿಸುವ ನಿಟ್ಟಿನಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಅವರ ತಂದೆ ದಿ.ಕೆ.ಟಿ. ರಾಠೋಡ ಸಹ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಈ ಬಾರಿ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದರು. ಈಗಾಗಲೇ ಬಂಜಾರಾ ಸಮಾಜದ ಹಿರಿಯ ನಾಯಕರು, ಬುದ್ಧಿಜೀವಿಗಳು ಎಐಸಿಸಿಗೆ ಲಿಖಿತ ಪತ್ರ ಸಲ್ಲಿಸಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಕೋರಿದ್ದಾರೆ ಎಂದು ವಿವರಿಸಿದರು.
ಬಂಜಾರಾ ಸಮಾಜದ ಮುಖಂಡರಾದ ಡಿ.ಎಲ್. ಚವ್ಹಾಣ, ಬಿ.ಬಿ. ಚವ್ಹಾಣ, ಅಶೋಕ ರಾಠೋಡ, ವಾಲು ಚವ್ಹಾಣ, ಮಹಾದೇವ ರಾಠೋಡ, ಎಂ.ಎಸ್. ನಾಯಕ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.