
ಕಲಬುರಗಿ,ಸೆ.11: ಸನಾತನ ಧರ್ಮ ಸರ್ವನಾಶವಾಗಬೇಕು ಎಂಬ ತಮಿಳ್ನಾಡು ಕ್ರೀಡಾ ಸಚಿವ ಉದಯ್ ನಿಧಿ ಸ್ಟಾಲಿನ್ ಹೇಳಿಕೆಯನ್ನು ಬೆಂಬಲಿಸಿದ ಹಾಗೂ ವಿಕ್ರಮ್ ಲ್ಯಾಂಡರ್ ಚಂದ್ರಯಾನದ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅವಹೇಳನ ಮಾಡುವ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಟ ಪ್ರಕಾಶ್ ರೈ ಅವರಿಗೆ ನಗರದಲ್ಲಿ ಸಂವಾದ ಹಾಗೂ ನಾಟಕ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿರುವುದನ್ನು ವಿರೋಧಿಸಿ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಆಗ ಪೋಲಿಸರು ವಶಕ್ಕೆ ತೆಗೆದುಕೊಂಡರು.
ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿನ ಸಂವಾದ ಕಾರ್ಯಕ್ರಮದಲ್ಲಿ ಆಗಮಿಸಿದ ಪ್ರಕಾಶ್ ರೈ ವಿರುದ್ಧ ಪ್ರತಿಭಟನೆಕಾರರು ಘೋಷಣೆಗಳನ್ನು ಹಾಕಿದರು. ಶಾಂತಿಯುತವಾಗಿರುವ ನಗರದಲ್ಲಿ ಅಶಾಂತಿ ಸೃಷ್ಟಿಸಲು ಬಂದಿದ್ದೀರಿ ಎಂದು ಘೋಷಣೆ ಕೂಗಿದರಲ್ಲದೇ ಭಾರತ್ ಮಾತಾಕೀ ಜೈ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ನಾಗರಾಜ್ ಸ್ವಾದಿ ಅವರೂ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಪ್ರತಿಭಟನಾ ಕಾರ್ಯಕರ್ತರನ್ನು ಪೋಲಿಸರು ತಮ್ಮ ವಶಕ್ಕೆ ತೆಗೆದುಕೊಂಡರು. ಧರ್ಮದ ಪರವಾಗಿ ಹೋರಾಟ ಮಾಡುತ್ತಿರುವವರನ್ನು ಪೋಲಿಸರು ಬಂಧಿಸಿಕೊಂಡು ಹೋಗುತ್ತಿದ್ದಾರೆ ಎಂದು ಪೋಲಿಸ್ ವಾಹನದಲ್ಲಿದ್ದ ನಾಗರಾಜ್ ಸ್ವಾದಿ ಅವರು ಆಕ್ರೋಶ ಹೊರಹಾಕಿದರು.