ಪ್ರಕರಣ ಇತ್ಯರ್ಥವಾಗುವರೆಗೂ ಪ್ರಕ್ರಿಯೆ ತಟಸ್ಥ


ಬ್ಯಾಡಗಿ,ಸೆ.24: ಪಟ್ಟಣದಲ್ಲಿ ಅನಧಿಕೃತವಾಗಿ ಮಾಡಲಾಗಿರುವ ಎರಡು ಲೇಔಟ್’ಗಳ ಕುರಿತಂತೆ ಲೋಕಾಯುಕ್ತ ಹಾಗೂ ಎಸಿಬಿ ಅಧಿಕಾರಿಗಳಿಗೆ ತಾವು ದೂರು ಸಲ್ಲಿಸಿದ್ದು, ಈ ಎರಡು ಪ್ರಕರಣಗಳು ಇತ್ಯರ್ಥವಾಗುವವರೆಗೂ ಸದರಿ ಲೇಔಟ್’ಗಳಿಗೆ ಸಂಬಂಧಿಸಿದಂತೆ ಎಲ್ಲ ಬಗೆಯ ಪ್ರಕ್ರಿಯೆಗಳನ್ನು ತಟಸ್ಥವಾಗಿಡಬೇಕೆಂದು ನ್ಯಾಯವಾದಿ ಡಿ.ಎಚ್.ಬುಡ್ಡನಗೌಡ್ರ ಪುರಸಭಾ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರ ಅವರಿಗೆ ಮನವಿ ಸಲ್ಲಿಸಿರುವ ಡಿ.ಎಚ್.ಬುಡ್ಡನಗೌಡ್ರ, ಸದರಿ ಲೇಔಟ್’ಗಳು ಕಾನೂನು ಬಾಹಿರವಾಗಿದ್ದು, ನಕಲಿ ದಾಖಲೆಗಳಿಂದ ಲೇಔಟ್’ಗಳನ್ನು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಸಂಬಂಧಿಸಿದ ದಾಖಲೆಗಳೊಂದಿಗೆ ತಾವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ. ಅಲ್ಲದೇ ಲೋಕಾಯುಕ್ತ ಹಾಗೂ ಎಸಿಬಿ ಅಧಿಕಾರಿಗಳಿಗೂ ಸಹ ಇದರ ಬಗ್ಗೆ ದೂರು ಸಲ್ಲಿಸಿದ್ದು, ಈ ಎರಡು ಲೇಔಟ್ ಪ್ರಕರಣಗಳು ಇತ್ಯರ್ಥ ಆಗುವವರೆಗೂ ಇವುಗಳಿಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನು ಪುರಸಭೆಯಲ್ಲಿ ತಟಸ್ಥವಾಗಿಡಬೇಕು. ಏನಾದರೂ ಪ್ರಕ್ರಿಯೆಗೆ ತಾವು ಮುಂದುವರೆದರೆ ಅದಕ್ಕೆ ನೀವು ಸಹ ಜವಾಬ್ದಾರಿಯಾಗುತ್ತಿರೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಮಾಜಿಕ ಸೇವಕರಾದ ಮಹೇಶ ಉಜನಿ, ಪ್ರಕಾಶ ಬಣಕಾರ ಉಪಸ್ಥಿತರಿದ್ದರು.