ಪ್ಯಾಲಿಸ್ಟೈನ್ ಡ್ರಗ್ಸ್ ಪೆಡ್ಲರ್ ಸೆರೆ 25 ಲಕ್ಷ ಮೌಲ್ಯದ ಎಂಡಿಎಂಎ ವಶ

ಬೆಂಗಳೂರು, ನ.೯- ಡ್ರಗ್ಸ್ ಸಾಗಾಣೆ ಮಾರಾಟದಲ್ಲಿ ತೊಡಗಿದ್ದ ಪ್ಯಾಲಿಸ್ಟೈನ್ ದೇಶದ ಡ್ರಗ್ಸ್ ಪೆಡ್ಲರ್ ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೨೫ ಲಕ್ಷ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
ಪ್ಯಾಲಿಸ್ಟೈನ್ ನ ಹಸನ್ ಡಬ್ಲ್ಯೂ ಎ ಹಾಶೀಮ್ (೨೫)ಬಂಧಿತ ಆರೋಪಿಯಾಗಿದ್ದು ಆತನಿಂದ ೨೫ ಲಕ್ಷ ಮೌಲ್ಯದ ೩೨೦ ಗ್ರಾಂ ಎಂಡಿಎಂಎ, ಮೊಬೈಲ್,ಎಲೆಕ್ಟ್ರಾನಿಕ್ ತೂಕದ ಯಂತ್ರ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ.
ಪ್ಯಾಲಿಸ್ಟೈನ್ ದೇಶದ ಆರೋಪಿಯು ೬ ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾ ಪಡೆದು ನಗರಕ್ಕೆ ಬಂದಿದ್ದು, ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸಲು ಮತ್ತೆ ವ್ಯಾಪಾರಿ ವೀಸಾ ಪಡೆದು ಬಂದು ಸುಡಾನ್ ದೇಶದ ಮತ್ತೊಬ್ಬ ಡ್ರಗ್ಸ್ ಪೆಡ್ಲರ್ ಜೊತೆಯಲ್ಲಿ ಯಲಹಂಕ ಉಪನಗರದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ಆತನಿಂದ ಕಡಿಮೆ ಬೆಲೆಗೆ ಮಾದಕವಸ್ತು ಖರೀಧಿಸಿ ಒಂದು ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ನ್ನು ೮ರಿಂದ ೮೫೦೦ ರೂ ವರೆಗೆ ಹೆಚ್ಚಿನ ಬೆಲೆಗೆ ಪರಿಚಯಸ್ಥ ಗಿರಾಕಿಗಳು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.
ಸುಡಾನ್ ದೇಶದ ಡ್ರಗ್ಸ್ ಪೆಡ್ಲರ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ. ಆರೋಪಿಯ ವಿರುದ್ದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ-೧೯೮೫ ಹಾಗೂ ವಿದೇಶಿಯರ ಕಾಯ್ದೆ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.