ಪ್ಯಾರ ಮಿಲಟರಿಯಿಂದ ಪಥ ಸಂಚಲನ

ಲಿಂಗಸುಗೂರ,ಏ.೧೪- ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗೆ ತಾಲ್ಲೂಕು ಆಡಳಿತ ಪೂರ್ಣ ಪ್ರಮಾಣದ ಸಿದ್ಧತೆ ಮಾಡಿಕೊಂಡಿದೆ. ನಾಗರಿಕರು ಕೂಡ ನೀತಿ, ನಿಯಮಗಳನ್ನು ಪಾಲಿಸುವ ಮೂಲಕ ಪಾರದರ್ಶಕ ಚುನಾವಣೆ ನಡೆಸಲು ಸಹಕಾರ ನೀಡಬೇಕು’ ಎಂದು ಚುನಾವಣಾಧಿಕಾರಿ ಅವಿನಾಶ ಶಿಂಧೆ ಸಂಜೀವನ್ ಹೇಳಿದರು.
ಇಂಡೋ ಟಿಬೆಟ್ ಬಾರ್ಡರ್ ಫೋರ್ಸ್ (ಐಟಿಬಿಟಿಎಫ್) ಮತ್ತು ಪೊಲೀಸ್ ಪಥ ಸಂಚಲನ ಉದ್ಘಾಟಿಸಿ ಮಾತನಾಡಿ, ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಪವಿತ್ರ ಮತದಾನ ಹಕ್ಕು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ರಾಯಚೂರು ಪೊಲೀಸ ವರಿಷ್ಠಾಧಿಕಾರಿ ನಿಖಿಲ ಬಿ ಮಾತನಾಡಿ, ಮತದಾನ ಹಕ್ಕು ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳಿಸುವ ಮಹಾನ್ ಅಸ್ತ್ರವಾಗಿದೆ. ಮತದಾರರು ನಿರ್ಭಯದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕು. ಪ್ರಾಮಾಣಿಕ, ನೇರ ದಿಟ್ಟ ಮತದಾನ ಮಾಡಲು ಮತಗಟ್ಟೆಗೆ ಬರುವ ಮತದಾರರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಹೇಳಿದರು.
ಪಥ ಸಂಚಲನ: ಇಂಡೋ ಟಿಬೆಟ್ ಬಾರ್ಡರ್ ಫೋರ್ಸ್ ಮತ್ತು ಪೊಲೀಸ್ ಪಥಸಂಚಲನ ಸ್ಥಳೀಯ ಪೊಲೀಸ್ ಠಾಣೆ ಮೂಲಕ ಆರಂಭಗೊಂಡು, ಗಡಿಯಾರ ವೃತ್ತ, ಮೇನ್ ಬಜಾರ, ಪಿಂಚಣಿಪುರ, ಬಸ್ ನಿಲ್ದಾಣ, ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ಸಾಂಸ್ಕೃತಿಕ ಭವನ ತಲುಪಿತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಆರ್.ಶಿವಕುಮಾರ, ಡಿವೈಎಸ್ಪಿ ಎಸ್. ಮಂಜುನಾಥ, ಪಿಐ ಸಂಜಿವ ಕುಮಾರ ,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ ಹಾಗೂ ಪೊಲೀಸ ಸಿಬ್ಬಂದಿ ಇದ್ದರು.