ಪ್ಯಾರಾ ಅಥ್ಲೆಟಿಕ್ಸ್ : ಚಿನ್ನ ಗೆದ್ದ ರಾಧಾ, ಬೆಳ್ಳಿ ಗೆದ್ದ ರಕ್ಷಿತಾ

ಚಿತ್ರದುರ್ಗ ಫೆ.28:ಯುಎಇಯ ಶಾರ್ಜಾದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮುಕ್ತ ಪ್ಯಾರಾ ಅಥ್ಲೆಟಿಕ್ ಕೂಟದ ವಿವಿಧ ವಿಭಾಗಗಳ 1500 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ರಾಧಾ ವೆಂಕಟೇಶ್ ಚಿನ್ನದ ಪದಕ ಹಾಗೂ ರಕ್ಷಿತಾ ರಾಜು ಬೆಳ್ಳಿ ಪದಕ ಪಡೆದಿದ್ದಾರೆ.ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಯಡಿ  ಬೆಂಗಳೂರಿನ ಸಾಯಿ ಕ್ರೀಡಾ ನಿಲಯದಲ್ಲಿ ಅಭ್ಯಾಸ ಮಾಡುತ್ತಿರುವ ರಾಧಾ ವೆಂಕಟೇಶ್ ಟಿ12 ವಿಭಾಗದ 1500 ಮೀಟರ್ಸ್ ಓಟದಲ್ಲಿ 5:16.77 ನಿಮಿಷದಲ್ಲಿ ಹಾಗೂ ಟಿ11 ವಿಭಾಗದ 1500 ಮೀಟರ್ಸ್ ಓಟದಲ್ಲಿ ರಕ್ಷಿತಾ ರಾಜು 5:44.67 ನಿಮಿಷದಲ್ಲಿ ಗುರಿ ತಲುಪಿದ್ದಾರೆ.ಅಕ್ಟೋಬರ್‍ನಲ್ಲಿ ಚೀನಾದಲ್ಲಿ ನಡೆಯಲ್ಲಿರುವ ಪ್ಯಾರಾ ಏಷ್ಯನ್ ಗೇಮ್ಸ್‍ಗೆ ಆಯ್ಕೆಯಾಗಿದ್ದಾರೆ.  ಇವರು ಎನ್‍ಸಿಒಇ ಯೋಜನೆಯಡಿ ಅಭ್ಯಾಸ ಮಾಡುತ್ತಿದ್ದಾರೆ.ರಾಧಾ ವೆಂಕಟೇಶ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೊಮ್ಮಸಮುದ್ರ ಗ್ರಾಮದವರು. ರಕ್ಷಿತಾ ರಾಜು ಅವರು ಮೂಡಿಗೆರೆ  ತಾಲ್ಲೂಕಿನ  ಬಾಳೂರು ಸಮೀಪದ ಗುಡ್ನಹಳ್ಳಿ ಗ್ರಾಮದವರಾಗಿದ್ದಾರೆ.  ಇಬ್ಬರೂ ಕೋಚ್ ರಾಹುಲ್ ಬಾಲಕೃಷ್ಣ, ಗೋವಿಂದ್, ಸೌಮ್ಯಾ ಸಾವಂತ್, ಗೈಡ್ ರನ್ನರ್ ತಬರೇಶ್ ಅವರ ಸಲಹೆ ಪಡೆದು ಸಾಧನೆ ಮಾಡುತ್ತಿದ್ದಾರೆ.ಕಳೆದ ಬಾರಿ ನವದೆಹಲಿಯಲ್ಲಿ ನಡೆದ 400ಮೀ, 800ಮೀ ಹಾಗೂ 1500ಮೀ ಓಟದಲ್ಲಿ ಚಿನ್ನ ಗೆದ್ದುಕೊಂಡಿದ್ದರು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.