ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ: ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಜಾಗೃತಿ

ವಿಜಯಪುರ, ಜೂ.7: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಒಂದು ತಿಂಗಳ ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುರ್ನವಸತಿ ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನದ ಅಂಗವಾಗಿ ಜೂ.5 ರಂದು ತಿಕೋಟಾದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ವಿವಿಧ ಇಲಾಖೆಗಳ ಜಂಟಿ ಸಹಯೋಗದಲ್ಲಿ ವಿವಿಧ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನಿಡಿ ಕರಪತ್ರ ಹಾಗೂ ಸ್ಟೀಕರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕೈಗೊಂಡ ಅಭಿಯಾನದ ಸಂದರ್ಭದಲ್ಲಿ ಯಾವುದೇ ಬಾಲ ಮತ್ತು ಕಿಶೋರ ಕಾರ್ಮಿಕರು ಪತ್ತೆಯಾಗಿರುವುದಿಲ್ಲ. ಈ ಅಭಿಯಾನದಲ್ಲಿ ಕಾರ್ಮಿಕ ನಿರೀಕ್ಷಕಿ ಜಗದೇವಿ ಸಜ್ಜನ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ನೀಲಮ್ಮ ಖೇಡಗಿ, ಶಿರಸ್ತೇದಾರ ಆರ್.ಎಚ್. ಸುಣಗಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ. ಕೋರೆ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿ.ಕೆ. ಹೊಸಮನಿ, ಸಮಾಜ ಕಲ್ಯಾಣ ಇಲಾಖೆಯ ಡಿ.ಎನ್. ನಾಯಕ, ತಾಲೂಕು ಪಂಚಾಯತಿಯ ಕವಿತಾ ಬಿರಾದಾರ, ಪೊಲೀಸ್ ಇಲಾಖೆಯ ವೈ.ಬಿ. ಶಿವಾನಂದ ಅವರು ಪಾಲ್ಗೊಂಡಿದ್ದರು.