ಪ್ಯಾಕ್ ಮಾಡಿದ ಆಹಾರಧಾನ್ಯ, ಬೇಳೆಗಳಿಗೆ ಶೇ 5 ಜಿಎಸ್‍ಟಿಗೆ ವಿರೋಧಗಾಂಧಿಗಂಜ್ ಮಾರುಕಟ್ಟೆ ಬಂದ್

ಬೀದರ್: ಜು.17:ಪ್ಯಾಕ್ ಮಾಡಿದ ಎಲ್ಲ ಆಹಾರಧಾನ್ಯ ಹಾಗೂ ಬೇಳೆಗಳ ಮೇಲೆ ಶೇ 5 ರಷ್ಟು ಜಿಎಸ್‍ಟಿ ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ ವ್ಯಾಪಾರಿಗಳು ನಗರದಲ್ಲಿ ಶನಿವಾರ ದಾಲ್ ಮಿಲ್ ಹಾಗೂ ಗಾಂಧಿಗಂಜ್ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಯಾವುದೇ ದಾಲ್ ಮಿಲ್‍ಗಳು ಕಾರ್ಯ ನಿರ್ವಹಿಸಲಿಲ್ಲ. ಗಾಂಧಿಗಂಜ್‍ನಲ್ಲಿ ಅಡತ್, ಆಹಾರಧಾನ್ಯ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ಹೀಗಾಗಿ ಪ್ರಮುಖ ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ.

ಬೀದರ್ ದಾಲ್ ಮಿಲ್ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಗಾಂಧಿಗಂಜ್‍ನ ವ್ಯಾಪಾರಿಗಳು ನಿಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿದರು.

ಮೊದಲು ನೋಂದಾಯಿತ ಉತ್ಪನ್ನಗಳಿಗೆ ಮಾತ್ರ ಜಿಎಸ್‍ಟಿ ವಿಧಿಸಲಾಗಿತ್ತು. ಇದೀಗ ನೋಂದಾಯಿಸದೇ ಇರುವ ಉತ್ಪನ್ನಗಳಿಗೂ ಜಿಎಸ್‍ಟಿ ಜಾರಿಗೊಳಿಸಲಾಗುತ್ತಿದೆ. ಇದರಿಂದ ರೈತರು ಹಾಗೂ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ಯಾಕ್ ಮಾಡಿದ ಎಲ್ಲ ಆಹಾರಧಾನ್ಯ ಹಾಗೂ ಬೇಳೆಗಳ ಮೇಲೆ ಜಿಎಸ್‍ಟಿ ಜಾರಿಗೊಳಿಸುತ್ತಿರುವ ಕ್ರಮಕ್ಕೆ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗಿದೆ. ಕಾರಣ, ಸರ್ಕಾರ ತಕ್ಷಣ ತನ್ನ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಬೀದರ್ ದಾಲ್ ಮಿಲ್ ಓನರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಬಸವರಾಜ ಧನ್ನೂರ, ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜಕುಮಾರ ಬಿರಾದಾರ ಗುನ್ನಳ್ಳಿ, ಪ್ರಮುಖರಾದ ಬಸವರಾಜ ಭಂಡೆ, ಶ್ರೀನಿವಾಸ್ ರೇಜಂತಲ್, ಶಿವಾನಂದ ಗುನ್ನಳ್ಳಿ, ಗೋವಿಂದರಾವ್ ನೀಲಂನಳ್ಳಿ, ನೀಲೇಶ್ ಸಿಂದೋಲ್, ರವೀಂದ್ರ ಮಾಡೆ, ಗುಂಡಪ್ಪ ಎಮ್ಮೆ ನಿಯೋಗದಲ್ಲಿ ಇದ್ದರು.