ಪ್ಯಾಕ್ಸ್ ಗಳಲ್ಲಿ ರಸಗೊಬ್ಬರ ದಾಸ್ತಾನು: ನಾಗಮಾರಪಳ್ಳಿ

ಬೀದರ:ಮೇ.29: ಮುಂಗಾರು ಹಂಗಾಮು ಪ್ರಯುಕ್ತ ರೈತರ ಅನುಕೂಲಕ್ಕಾಗಿ ಜಿಲ್ಲೆಯ 181 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪ್ಯಾಕ್ಸ್)ಗಳಲ್ಲಿ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಒಟ್ಟು 6,626 ಮೆಟ್ರಿಕ್ ಟನ್ ಡಿಎಪಿ, 2,100 ಮೆಟ್ರಿಕ್ ಟನ್ 12:32:16 ಹಾಗೂ 500 ಮೆಟ್ರಿಕ್ ಟನ್ 10:26:26 ರಸಗೊಬ್ಬರ ಸಂಗ್ರಹ ಇದೆ ಎಂದು ಹೇಳಿದ್ದಾರೆ.

50 ಕೆ.ಜಿ ಡಿಎಪಿ ರಸಗೊಬ್ಬರದ ಒಂದು ಬ್ಯಾಗ್ ಬೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಿಸಿದಂತೆ ₹ 1,200 ಇದೆ. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಬ್ಯಾಂಕ್ 49 ವರ್ಷಗಳಿಂದ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಸುಲಭವಾಗಿ ರಸಗೊಬ್ಬರ ದೊರಕುವಂತೆ ಮಾಡುತ್ತಿದೆ. ಜಿಲ್ಲಾ ಆಡಳಿತ ಹಾಗೂ ಕೃಷಿ ಇಲಾಖೆ ಸಹಕಾರದೊಂದಿಗೆ ರಾಜ್ಯದಲ್ಲೇ ಮಾದರಿಯಾಗಿ ಕಾರ್ಯ ನಿರ್ವ ಹಿಸುತ್ತಿದೆ ಎಂದು ತಿಳಿಸಿದ್ದಾರೆ.ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳಲ್ಲೇ ಬೀದರ್ ಡಿಸಿಸಿ ಬ್ಯಾಂಕ್‍ನ ರಸಗೊಬ್ಬರ ಸರಬರಾಜು ವ್ಯವಸ್ಥೆಯನ್ನು ಮಾದರಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಘೋಷಿಸಿದೆ. ಉಳಿದ ಡಿಸಿಸಿ ಬ್ಯಾಂಕ್‍ಗಳು ಬೀದರ್ ಮಾದರಿಯನ್ನು ಅಳವಡಿಸಿಕೊಳ್ಳಲು ಸಹ ನಿರ್ಧರಿಸಿವೆ. ಸದ್ಯದಲ್ಲಿ ಮುಂಗಾರು ಆರಂಭವಾಗುವ ಕಾರಣ ರಸಗಿಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. 5 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನಡೆದ ರಸಗೊಬ್ಬರ ವ್ಯವಹಾರದ ಒಟ್ಟು ಮೊತ್ತ ₹ 120.42 ಕೋಟಿ ಆಗಿದೆ ಎಂದು ತಿಳಿಸಿದ್ದಾರೆ.