ಪೌಷ್ಠಿಕ ಆಹಾರ ನೀಡಿರುವ ಬಗ್ಗೆ ಸಚಿವರಿಂದ ಪರಿಶೀಲನೆ

ಹನೂರು: ಜೂ.02: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಸುರೇಶ್‍ಕುಮಾರ್ ಜಿಲ್ಲಾ ಪ್ರವಾಸ ನಿಮ್ಮಿತ್ತ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸೇಬಿನ ಕೋಬೆ ಹಾಗೂ ಪಿ.ಜಿ.ಪಾಳ್ಯ ಗ್ರಾ.ಪಂ. ವ್ಯಾಪ್ತಿಯ ಜೀರಿಗೆ ಗದ್ದೆ ಸೋಲಿಗರ ಹಾಡಿಗಳಿಗೆ ಶಾಸಕ ಆರ್.ನರೇಂದ್ರ ಅವರ ಜೊತೆಗೂಡಿ ಬೇಟಿ ನೀಡಿ ಗಿರಿಜನರಿಗೆ ನೀಡಲಾಗುವ ಆಹಾರ ಪದಾರ್ಥಗಳು ಹಾಗೂ ಕೋವಿಡ್ ಸಂಬಂಧಿತ ವಿಷಯಗಳ ಬಗ್ಗೆ ಸಂವಾದ ಹಾಗೂ ಪರಿಶೀಲನೆ ನಡೆಸಿದರು.
ಮೊದಲಿಗೆ ಸೇಬಿನಕೋಬೆ ಹಾಡಿಗೆ ಬೇಟಿ ನೀಡಿದ ಸಚಿವರು ಅಂತ್ಯೋದಯ ಹಾಗೂ ಪೌಷ್ಠಿಕ ಆಹಾರಗಳನ್ನು ನೀಡಿರುವ ಬಗ್ಗೆ ಗುಣಮಟ್ಟ ಮತ್ತು ಅಳತೆಯ ಪರಿಶೀಲನೆ ನಡೆಸಿ, ಆದಿವಾಸಿಗಳು ಸರ್ಕಾರ ನೀಡಲಾಗುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡದೇ ಬಳಸಿಕೊಳ್ಳಬೇಕು. ಪ್ರತಿಯೊಬ್ಬರು ತಪ್ಪದೇ ಕೊವಿಡ್ ವ್ಯಾಕ್ಸಿನ್ ಪಡೆದುಕೊಳ್ಳಬೇಕೆಂದು ಸೂಚಿಸಿದ ಸಚಿವರು ಮುಂದಿನ ಕೆಲವೇ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಈ ಭಾಗದ ಹಾಡಿಗಳ ಯುವಕರು ಹಾಗೂ ವ್ಯಾಕ್ಸಿನ್ ಪಡೆಯಲು ಮುಂದೆ ಬರುವವರಿಗೆ ನೀಡಲು ಕ್ರಮ ವಹಿಸಲಾಗುವುದು, ವಸತಿ ಸೌಕರ್ಯಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಪಿ.ಜಿ.ಪಾಳ್ಯ ಗ್ರಾ.ಪಂ.ವ್ಯಾಪ್ತಿಯ ಜೀರಿಗೆ ಗದ್ದೆ ಆಶ್ರಮ ಶಾಲೆಗೆ ಬೇಟಿ ನೀಡಿ ವೈದ್ಯರು, ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾ.ಪಂ.ಪಿಡಿಒ ಹಾಗೂ ಅಧ್ಯಕ್ಷರುಗಳು ಕೋವಿಡ್-19 ತಡೆಗಟ್ಟುವ ದಿಸೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಸಂವಾದ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿಗಳು ರ್ಯಾಪಿಡ್ ಟೆಸ್ಟ್‍ನ್ನು ಕೈಗೊಳ್ಳುವ ಮೂಲಕ ಶೀಘ್ರದಲ್ಲಿ ಕೊವಿಡ್ ಪಾಸಿಟಿವ್ ಕೇಸ್‍ಗಳನ್ನು ಪತ್ತೆ ಹಚ್ಚಿ ಎಂದು ಸಲಹೆ ನೀಡಿದರು.
ಸಚಿವ ಸುರೇಶ್‍ಕುಮಾರ್ ಮಾತನಾಡಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆಯವರು ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಹೋರಾಟದಲ್ಲಿ ನಾವು ಹೋರಾಡಿ ಜಯಿಸಬೇಕಿದೆ ಎಂದರು.
ಸೋಲಿಗ ವೃದ್ಧೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು: ಸಭೆಯಲ್ಲಿ ಸೋಲಿಗ ಮಹಿಳೆ ಮುತ್ತಮ್ಮ ಅವರ ಅನಿಸಿಕೆಗಳನ್ನು ವ್ಯಕ್ತಪಡಿಸಬೇಕೆಂದು ಸಚಿವರು ಕೇಳಿದಾಗ ಸ್ವಾಮಿ ನಾವು ಎಲ್ಲೂ ಹೊರಗಡೆ ಹೋಗಲ್ಲ, ನಮ್ಮ ಹಾಡಿಗೆ ಬರುವವರನ್ನು ಒಳಕ್ಕೆ ಬಿಡುವುದಿಲ್ಲ. ಆದರೆ ಹಳ್ಳಿಗಳು, ನಗರ, ಪಟ್ಟಣಗಳಲ್ಲಿ ಎಲ್ಲೆಂದರಲ್ಲಿ ವಾಹನಗಳಲ್ಲಿ ಓಡಾಡುತ್ತಾರೆ. ಕೊರೊನಾ ಹೋಗಬೇಕೆಂದರೆ ಮನೆಯಲ್ಲಿ ಇರಬೇಕು ಎಂದು ಚಾಕಚಕ್ಯತೆಯಿಂದ ನೀಡಿದ ಸಲಹೆಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಉಪ ವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬೋಯರ್ ಸೇರಿದಂತೆ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.