ಪೌಷ್ಠಿಕ ಆಹಾರ ತಲುಪಿಸಲು ಕಾಳಜಿ ವಹಿಸಿ

ಕಲಬುರಗಿ:ಸೆ. 21: ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಠಿಕತೆ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳು, ಯೋಜನೆ ಜಾರಿಗೊಳಿಸಲಾಗಿದೆ. ಪೌಷ್ಠಿಕಾಂಶಗಳುಳ್ಳ ಆಹಾರವನ್ನು ಪ್ರತಿ ಗರ್ಭಿಣಿ, ಮಹಿಳೆ ಹಾಗೂ ಮಗುವಿಗೆ ತಲುಪಿಸುವ ಕಾರ್ಯವನ್ನು ಸಿಬ್ಬಂದಿ ಮಾಡುವ ಮೂಲಕ ಅಪೌಷ್ಠಿಕತೆ ನಿರ್ಮೂಲನೆಗೆ ಕಾಳಜಿ ವಹಿಸಿ ಕಾರ್ಯನಿರ್ವಹಿಸುವದು ತುಂಬಾ ಅವಶ್ಯಕವಾಗಿದೆಯೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಅವರು ನಗರದ ಕೈಲಾಸ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ಪೋಷಣಾ ಮಾಸಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಗನವಾಡಿ ಮೇಲ್ವಿಚಾರಕಿ ಗೀತಾ ಆರ್ ಮಾತನಾಡಿ, ಹದಿಹರೆಯದವರು ಮತ್ತು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು ಸಾಮಾನ್ಯವಾಗಿ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರಿಗೆ ಹಾಗೂ ಜನಿಸುವ ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಸರ್ಕಾರ ಸಾಕಷ್ಟು ಹಣ ವೆಚ್ಚ ಮಾಡಿ ಪೋಷಣಾ ಯೋಜನೆಯನ್ನು ಒಂದು ಅಭಿಯಾನದ ರೂಪದಲ್ಲಿ ಹಮ್ಮಿಕೊಂಡಿದೆ. ಯುವತಿಯರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಪೋಷಕಾಂಶಗಳ ಆಹಾರವನ್ನು ನೀಡಿ ಅನೀಮಿಯಾ ಮುಕ್ತ ಭಾರತ ಮಾಡಲು ಪ್ರಯತ್ನಿಸುತ್ತಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ಕಲ್ಯಾಣಿ, ಉಮಾದೇವಿ ಎಚ್.ಪಾಟೀಲ, ಜಯಶ್ರೀ ಎಸ್.ಪುರಾಣಿಕ, ಹಂಪಮ್ಮ ಬಿ.ಹೆಬ್ಬಾಳ, ವಿಜಯಲಕ್ಷ್ಮೀ ಎಂ.ಕೆರಳ್ಳಿ, ವಿಮಲಾ, ಶಾಹೀನ್ ಬೇಗಂ, ಇರ್ಫಾನಾ, ಸುಧಾ ಎಸ್.ಬಿರಾದಾರ ಸೇರಿದಂತೆ ಸಿಬ್ಬಂದಿ, ಬಡಾವಣೆಯ ಮಹಿಳೆಯರು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.