ಪೌಷ್ಠಿಕಾಂಶ ಭದ್ರತೆಗಾಗಿ ಸಿರಿಧಾನ್ಯ ಬಳಸಿ

ಕೋಲಾರ,ಜು,೨೧:ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹಸಿವನ್ನು ಮುಕ್ತಿಗೊಳಿಸಬೇಕು ಎಂಬ ಚಿಂತನೆ ಇತ್ತು. ನಂತರ ಆಹಾರ ಭದ್ರತೆ ಬಂತು, ಈಗ ಪೌಷ್ಠಿಕಾಂಶ ಭದ್ರತೆ ಬೇಕಾಗಿದೆ. ಹೀಗಾಗಿ ಸಿರಿಧಾನ್ಯಗಳನ್ನು ಬಳಸಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ||ಎಸ್.ವಿ.ಸುರೇಶ್ ರವರು ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಆಯೋಜಿಸಲಾಗಿದ್ದ ಕಿಸಾನ್ ಮೇಳ ಮತ್ತು ಸಿರಿಧ್ಯಾನಗಳ ಹಬ್ಬ ೨೦೨೩ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಹಲವಾರು ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಎಷ್ಟೇ ಸಂಶೋಧನೆಗಳನ್ನು ಮಾಡಿದರೂ ರೈತರು ಎಚ್ಚೆತ್ತುಕೊಳ್ಳಬೇಕು. ಯುವಕರು ಕೃಷಿಯಲ್ಲಿ ನಿರಾಸಕ್ತಿಯನ್ನು ಹೊಂದುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿದೆ. ಪ್ರತಿಕೂಲ ಹವಾಮಾನದಲ್ಲಿಯೂ ಸಿರಿಧಾನ್ಯಗಳನ್ನು ಬೆಳೆಯಬಹುದಾಗಿದೆ. ಸಿರಿಧಾನ್ಯಗಳನ್ನು ಬೆಳೆಯುವುದರ ಜೊತೆಗೆ ರೈತರೇ ಉದ್ದಿಮೆದಾರರಾಬೇಕು ಹೆಚ್ಚಿನ ಆದಾಯವನ್ನು ಗಳಿಸಬೇಕು ಎಂದರು.
ಪ್ರವಚನಕಾರ ತಳಗವಾರ ಆನಂದ್ ರವರು ಮಾತನಾಡಿ ನಾವು ಸೇವಿಸುವ ಆಹಾರ ಮತ್ತು ಆಧುನಿಕ ಜೀವನ ಪದ್ಧತಿ. ಕನಿಷ್ಠಪಕ್ಷ ವಾರಕ್ಕೆ ಎರಡು ಮೂರು ದಿನಗಳಾದರೂ ಸಿರಿಧಾನ್ಯಗಳನ್ನು ಸೇವಿಸಬೇಕು. ಇದರಿಂದ ಶಾರೀರಿಕ ಹಾಗೂ ಮಾನಸಿಕ ಶಕ್ತಿಯು ವೃದ್ಧಿಸುತ್ತದೆ ಎಂದರು.
ಸಹಾಯಕ ಕೃಷಿ ನಿರ್ದೇಶಕರಾದ ಶ್ರೀನಿವಾಸ್ ರವರು ಮಾತನಾಡಿ ಕಳೆದ ವರ್ಷ ಈಗಾಗಲೇ ಶೇಕಡ ೬೫ ರಷ್ಟು ಬಿತ್ತನೆ ಕಾರ್ಯ ಮುಗಿದಿತ್ತು. ಆದರೆ ಈ ವರ್ಷ ಇದು ಶೇಕಡ ೨೦ ರಷ್ಟನ್ನು ಮೀರಿಲ್ಲ. ಪ್ರತಿಯೊಬ್ಬ ರೈತರು ಬೆಳೆ ವಿಮೆಯನ್ನು ಮಾಡಿಸಿಕೊಂಡು ಇದರ ಉಪಯೋಗವನ್ನು ಪಡೆಯಬೇಕು ಎಂದರು.
ಸಿರಿಧಾನ್ಯಗಳನ್ನು ಬೆಳೆಯುವ ಮೂವರು ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು. ವಸ್ತುಪ್ರದರ್ಶನ, ಸಿರಿಧಾನ್ಯದ ವಿವಿಧ ತಳಿಗಳು, ಕೃಷಿ ಬಳಕೆಯ ಆಧುನಿಕ ತಂತ್ರಜ್ಞಾನಗಳ ಕುರಿತು ಮಳಿಗೆಗಳನ್ನು ಹಾಕಲಾಗಿತ್ತು. ಕಾರ್ಯಕ್ರಮದಲ್ಲಿ ಸಂಶೋಧನಾ ನಿರ್ದೇಶಕರಾದ ಡಾ.ಕೆ.ಬಿ.ಉಮೇಶ್, ವಿಸ್ತರಣಾ ನಿರ್ದೇಶಕರಾದ ಡಾ.ವಿ.ಎಲ್.ಮಧುಪ್ರಸಾದ್, ಡಾ.ಬಿ.ಎಸ್.ಸುಕನ್ಯ, ಡಾ.ಪಾಲಣ್ಣ, ಡಾ.ಪ್ರಭುಗಾಣೆಗೇರ್, ಡಾ.ಟಿ.ಇ.ನಾಗರಾಜ, ಡಾ.ಪಿ.ವೆಂಕಟರವಣ, ಡಾ.ಎಂ.ಪಾಪಿರೆಡ್ಡಿ ಮತ್ತು ರೈತರು ಭಾಗವಹಿಸಿದ್ದರು.