ಪೌಷ್ಠಿಕಾಂಶ ಆಹಾರ ಕುರಿತು ಸಮುದಾಯದಲ್ಲಿ ಅರಿವು ಮೂಡಿಸುವುದು ಮುಖ್ಯ: ಪ್ರೊ. ಮೇಟಿ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.17: ಆಹಾರ ಮತ್ತು ಪೌಷ್ಟಿಕತೆಯ ಕುರಿತು ಸಮುದಾಯದ ಜನರಲ್ಲಿ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮಹತ್ವದ್ದು ಎಂದು ಮಹಿಳಾ ವಿವಿಯ ಆಹಾರ ಮತ್ತು ಪೌಷ್ಟಿಕತೆ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ರೇಣುಕಾ ಮೇಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಆಹಾರ ಮತ್ತು ಪೌಷ್ಟಿಕತೆ” ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಶಿಕ್ಷಕರು ಕೇವಲ ಬೋಧನೆಗೆ ಮಾತ್ರ ಸೀಮಿತರಾಗಿಲ್ಲ ಅವರು ತಮ್ಮ ವೃತ್ತಿಯ ಜೊತೆಗೆ ಸಮುದಾಯಕ್ಕೆ ಆರೋಗ್ಯ, ಆಹಾರ ಹಾಗೂ ಸ್ವಾಸ್ಥ್ಯದ ಕುರಿತು ಅರಿವು ಮೂಡಿಸಬೇಕು.
ಗ್ರಾಮೀಣ ಜನರಲ್ಲಿ ಆಹಾರ ಮತ್ತು ಪೌಷ್ಟಿಕತೆಯ ಅರಿವಿನ ಕೊರತೆಯಿದೆ ಅದನ್ನು ಸರಿ ಪಡಿಸುವವರೆಗು ಸಮುದಾಯದ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ತಿಳಿಸಿದರು. ಶಾಲಾ ಮಟ್ಟದ ಶಿಕ್ಷಣದಿಂದಲೇ ಇದರ ಕುರಿತು ಚಟುವಟಿಕೆಗಳನ್ನು ರೂಪಿಸಬೇಕಾಗಿದೆ. ಇದರಿಂದ ಉತ್ತಮ ಆರೋಗ್ಯ ಹೊಂದುವ ಮೂಲಕ ಮಕ್ಕಳ ಸಮಾಜಕ್ಕೆ ಉಪಯೋಗಿಯಾಗಬಲ್ಲರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ವಿಷ್ಣು ಶಿಂದೆ ಮಾತನಾಡಿ, ಭಾರತೀಯರಲ್ಲಿ ಆರೋಗ್ಯದ ಅರಿವಿನ ಕೊರತೆಯಿಂದ ಗ್ರಾಮೀಣ ವಲಯದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಮನೆ ಮನೆಗೆ ತೆರಳಿ ಸಮತೋಲನ ಆಹಾರದ ಮಾಹಿತಿ ನೀಡುವಲ್ಲಿ ಪ್ರತಿಯೊಬ್ಬರು ಸಹಭಾಗಿಯಾಗಬೇಕು ಅಂದಾಗ ಮಾಥ್ರ ಆರೋಗ್ಯಯುತ ಸಮುದಾಯ ಕಟ್ಟಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ಪ್ರೊ. ಯು.ಕೆ.ಕುಲಕರ್ಣಿ, ಪ್ರೊ.ಅಶೋಕಕುಮಾರ ಸುರಪುರ, ಡಾ. ಪ್ರಕಾಶ ಸಣ್ಣಕ್ಕನವರ, ಡಾ. ಭಾರತಿ ಗಾಣಿಗೇರ, ಡಾ. ರೂಪಾ ನಾಯ್ಕೊಡಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಲಾಯಿತು. ವಿದ್ಯಾರ್ಥಿನಿಯರಾದ ವೀಣಾ ಮುಧೋಳ ನಿರೂಪಿಸಿದರು. ದುಂಡವ್ವ ಪರಿಚಯಿಸಿದರು, ಲಕ್ಷ್ಮೀ ವಂದಿಸಿದರು.