ಪೌಷ್ಠಿಕತೆಯಿಂದ ಸದೃಡ ಸಮಾಜ ನಿರ್ಮಾಣ ಸಾಧ್ಯ : ಅವರಾದಿ

ಬಾಗಲಕೋಟೆ: ಏ8: ಸಮಾಜದ ಜೀವಾಳವಾಗಿರುವ ಮಹಿಳೆ ಮತ್ತು ಮಕ್ಕಳ ಆರೋಗ್ಯ ಕಾಳಜಿ ಮುಖ್ಯವಾಗಿದ್ದು, ಅಪೌಷ್ಟಿಕತೆ ತೊಡೆದು ಹಾಕಿದಲ್ಲಿ ಮಾತ್ರ ಸದೃಡ ಸಮಾಜ ನಿರ್ಮಾಣ ಸಾದ್ಯವೆಂದು ನಗರಸಭೆ ಉಪಾದ್ಯಕ್ಷ ಬಸವರಾದ ಅವರಾದಿ ಹೇಳಿದರು.
ನಗರಸಭೆ ಸಭಾಭವನದಲ್ಲಿ ತಾಲೂಕಾ ಆಡಳಿತ, ನಗರಸಭೆ, ಶಿಶು ಅಭಿವೃದ್ದಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಯೋಗದಲ್ಲಿ ರಾಷ್ಟ್ರೀಯ ಪೊಷಣ್ ಅಭಿಯಾನದ ಪೋಷನ್ ಪಕ್ವಾಡ್ ಅಂಗವಾಗಿ ಹಮ್ಮಿಕೊಂಡ ತಾಲೂಕಾ ಮಟ್ಟದ ಪೌಷ್ಠಿಕ ಆಹಾರ ಮೇಳ, ಪೌಷ್ಠಿಕ ಆಹಾರ ಕುರಿತ ರಂಗೋಲಿ ಸ್ಪರ್ಧೆ ಹಾಗೂ ಅಡುಗೆ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಆರೋಗ್ಯ ಮತ್ತು ಪೌಷ್ಠಿಕ ಆಹಾರ ಸೇವನೆಯ ಪ್ರಾಮುಖ್ಯತೆ ಬಗ್ಗೆ ಗ್ರಾಮೀಣ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮುಂದಾಗಬೇಕು. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಕಂಡುಬರುತ್ತಿದೆ. ಅಪೌಷ್ಠಿಕತೆ ತೊಡೆದು ಹಾಕಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಲಾಭವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಮುನಿಷಾಮಪ್ಪ ಮಾತನಾಡಿ ಹುಟ್ಟಿದ ಮಗುವಿಗೆ ತಾಯಿಯ ಎದೆ ಹಾಲು ಮುಖ್ಯವಾಗಿದೆ. ಕೆಲವೊಂದು ತಾಯಂದಿರು ಮಕ್ಕಳಿಗೆ ಎದೆ ಹಾಲು ಕುಡಿಸಿದರೆ ತಮ್ಮ ಸೌಂದರ್ಯ ಕಡಿಮೆಯಾಗುತ್ತದೆ ಎಂಬ ಭ್ರಮೆಯಿಂದ ಎದೆ ಹಾಲನ್ನು ಕುಡಿಸಲು ಹಿಂಜರಿಯುತ್ತಾರೆ. ಇದರಿಂದ ಮಕ್ಕಳ ಅಪೌಷ್ಠಿಕತೆಗೆ ಕಾರಣವಾಗುತ್ತದೆ. ಆದ್ದರಿಂದ ಹುಟ್ಟಿದ ಮಗುವಿಗೆ ಎದೆ ಹಾಲು ಉತ್ತಮ ಪೌಷ್ಠಿಕ ಆಹಾರವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಮಾತನಾಡಿ ಅಪೌಷ್ಠಿಕತೆ ಕೊರತೆಯಿಂದ ರಕ್ತಹೀನತೆಗೆ ಒಳಗಾಗಿ ತಾಯಿ ಹಾಗೂ ಶಿಸು ಮರಣಗಳು ಸಂಭವಿಸುತ್ತವೆ. ಮಹಿಳೆ ಗರ್ಭಿಣಿ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಅಂಗವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಸಭಾಪತಿ ರವಿ ದಾಮಜಿ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ವೈದ್ಯಾಧಿಕಾರಿ ಡಾ.ಗಂಗಮ್ಮ ಪಾಟೀಲ ಸೇರಿದಂತೆ ನಗರಸಭೆ ಸದಸ್ಯರು, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, ಬೇಟಿ ಬಚಾವೋ ಬೇಟಿ ಪಡಾವೋ ಸ್ಟಿಕರ್ ಬಿಡುಗಡೆ ಮಾಡಲಾಯಿತು. ಅಡುಗೆ ಮತ್ತು ರಂಗೋಲಿ ಸ್ಫರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಸಹ ನೀಡಲಾಯಿತು. ಪೌಷ್ಠಿಕ ಆಹಾರ ಮೇಳವನ್ನು ಪ್ರದರ್ಶನ ವೀಕ್ಷಿಸಲಾಯಿತು.