
ಕಲಬುರಗಿ,ಸೆ.02:ವ್ಯಕ್ತಿ ದೈಹಿಕ, ಮಾನಸಿಕವಾಗಿ ಸದೃಢರಾಗಿರಲು ಸಮತೋಲಿತ, ಪೌಷ್ಟಿಕಾಂಶಗಳುಳ್ಳ ಆಹಾರದ ನಿಯಮಿತ ಸೇವನೆ ಅಗತ್ಯವಾಗಿದೆ. ವಿಟಾಮಿನಗಳು, ಪ್ರೋಟಿನ್‍ಗಳು, ಖನಿಜಗಳು, ಕಾರ್ಬೊಹೈಡ್ರೇಟ್ಸ್‍ಗಳು ಒಳಗೊಂಡಿರುವ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿ, ಕಾಯಿಲೆಗಳ ತಡೆಗಟ್ಟುವಿಕೆ, ತೂಕ ನಿರ್ವಹಣೆ ಸೇರಿದಂತೆ ಸಾಕಷ್ಟು ಪ್ರಯೋಜನೆಗಳಿವೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ತಾಲೂಕಿನ ಪಟ್ಟಣ ಗ್ರಾಮದ ಸಾವಯುವ ಬೆಳಗಾರ, ಪ್ರಗತಿಪರ ರೈತ ಗುಂಡೇರಾಯ ಎಸ್.ಧೂಳಗೊಂಡ್ ಅವರ ತೋಟದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಮಾಜ ಸೇವಕ ಅಸ್ಲಾಂ ಶೇಖ್ ಮಾತನಾಡಿ, ಧೂಳಗೊಂಡ ಅವರು ಸಾವಯುವ ಬೆಳೆಗಳನ್ನು ಬೆಳೆಯುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಇಂದಿನ ಒತ್ತಡ ಜೀವನದಲ್ಲಿ ಪೌಷ್ಟಿಕಾಂಶಗಳುಳ್ಳ ಆಹಾರದ ಸೇವನೆಯತ್ತ ಜನರು ಲಕ್ಷ್ಯ ವಹಿಸುತ್ತಿಲ್ಲ. ಅದಕ್ಕಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬರುತ್ತಿದ್ದು, ಇದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಳಗವು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಶಿಕಲಾ ಜಿ.ಧೂಳಗೊಂಡ್, ರಾಚಣ್ಣ ಎಚ್.ಪಟ್ಟಣ, ನೀಲಮ್ಮ ಧೂಳಗೊಂಡ, ಭೀಮಾಶಂಕರ ಎಸ್.ಜೇವರ್ಗಿ, ಕೋಮಲಾಬಾಯಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.