ಪೌಷ್ಟಿಕಾಂಶದ ಆಗರ ಮೆಂತೆ ಸೊಪ್ಪು

ವಿವಿಧ ಆಹಾರ ಪದಾರ್ಥಗಳ ತಯಾರಿಯಲ್ಲಿ ಮೆಂತೆ ಸೊಪ್ಪನ್ನು ವಿಶೇಷವಾಗಿ ಬಳಸುತ್ತಾರೆ. ಈ ಸಸ್ಯದ ಬೀಜವನ್ನು ಸುವಾಸನೆಗಾಗಿ ಹಾಗೂ ಎಲೆಗಳನ್ನು ವಿಶೇಷ ಪೋಷಣೆಗಳಿಗೆ ಉಪಯೋಗಿಸುತ್ತಾರೆ. ಪೌಷ್ಟಿಕಾಂಶದ ಆಗರವಾದ ಮೆಂತೆಯ ಉಪಯೋಗಗಳು ಹಲವಾರು. ಹೊಟ್ಟೆ ನೋವು, ಪಿತ್ತ, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆಯಿಂದ ಮನೆ ಔಷಧಿ ತಯಾರಿಸಬಹುದು.
ಹಸಿರು ಮೆಂತೆ: ಮೆಂತೆ ಎಲೆಗಳು ಮೂಲಭೂತವಾಗಿ ಒಂದು ಹಸಿರು ಎಲೆಗಳ ತರಕಾರಿ. ಇದನ್ನು ಒಣಗಿಸಿದರೆ ಕಸೂರಿ ಮೇಥಿಯಾಗುತ್ತದೆ. ಒಣಗಿಸಿರುವ ಮೆಂತೆಗಿಂತ ಹಸಿರು ಎಲೆಗಳಲ್ಲಿ ಹೆಚ್ಚು ಪೋಷಕಾಂಶ ಸಿಗುತ್ತದೆ. ಅಲ್ಲದೆ ಇದರಿಂದ ತಯಾರಿಸಿರುವ ಆಹಾರ ಪದಾರ್ಥಗಳು ಹೆಚ್ಚು ರುಚಿಯನ್ನು ಹೊಂದಿರುತ್ತವೆ.
ಕಬ್ಬಿಣದ ಮೂಲ: ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತಹೀನತೆಗೆ ಪ್ರಮುಖ ಔಷಧಿಯನ್ನಾಗಿ ಉಪಯೋಗಿಸುತ್ತಾರೆ. ರಕ್ತಹೀನತೆ ಇರುವವರು ಮೆಂತೆಯ ಆಹಾರ ಮತ್ತು ಇತರ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಹಸಿ ಮೆಂತೆಯ ಸೊಪ್ಪನ್ನು ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗುವುದು.
ಇನ್ಸುಲಿನ್ ನಿಯಂತ್ರಕ: ಮೆಂತೆ ಎಲೆಯನ್ನು ರುಬ್ಬಿ, ಒಂದು ಗ್ಲಾಸ್ ರಸವನ್ನು ತಯಾರಿಸಿ ಕುಡಿದರೆ ಇನ್ಸುಲಿನ್ ಹಾರ್ಮೋನ್‍ಗಳ ಮಟ್ಟವನ್ನು ನಿಯಂತ್ರಿಸಬಹುದು. ಆರೋಗ್ಯ ಪೂರ್ಣ ಪಾನೀಯವಾದ ಇದರಲ್ಲಿ ಕಹಿ ಗುಣವು ಇರುವುದರಿಂದ ಮಧುಮೇಹಕ್ಕೂ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ನೀಡುವುದು.
ವಿಟಮಿನ್ ಕೆ: ಬಸಳೆ, ಪುದೀನಗಳಂತಹ ಸೊಪ್ಪಿಗೆ ಮೆಂತೆಸೊಪ್ಪು ಹೆಚ್ಚು ಸ್ಪರ್ಧಾತ್ಮಕ ಪೈಪೋಟಿ ನೀಡುವುದು. ಇವುಗಳಲ್ಲಿರುವ ವಿಟಮಿನ್ ಕೆ ಪ್ರಮಾಣದಷ್ಟೇ ಮೆಂತೆ ತನ್ನ ಒಡಲಲ್ಲೂ ಸಮೃದ್ಧವಾದ ವಿಟಮಿನ್ ಕೆಯನ್ನು ಹೊಂದಿದೆ. ಇದು ಕಿಣ್ವಗಳ ಆರೈಕೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತದೆ.
ಸೂಕ್ತ ನಾರಿನಂಶ: ಮೆಂತೆ ಎಲೆಯು ದೇಹಕ್ಕೆ ಬೇಕಾಗುವ ನಾರಿನಂಶವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹಾರ ಗೊಳಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಮೃದುಗೊಳಿಸುತ್ತದೆ.
ಉತ್ತಮ ಮಟ್ಟದ ಪ್ರೋಟೀನ್: ಮೆಂತೆಯಲ್ಲಿ ಸಮೃದ್ಧವಾದ ಪ್ರೋಟೀನ್ ಮತ್ತು ನಿಕೋಟಿನ್ ಆಮ್ಲಗಳಿವೆ. ಇವು ನಮ್ಮ ಕೇಶರಾಶಿಯ ಹೊಳಪನ್ನು ಹೆಚ್ಚಿಸಿ ಬೆಳವಣಿಗೆ ಸಹಾಯ ಮಾಡುತ್ತದೆ, ಜೊತೆಗೆ ದೇಹದಲ್ಲೂ ಶಕ್ತಿಯನ್ನು ವೃದ್ಧಿಸುತ್ತದೆ.
ಕಹಿಯ ಗುಣ: ಮೆಂತೆಯಲ್ಲಿ ಇರುವ ಪೋಷಕಾಂಶಗಳು ದೇಹದ ಆರೋಗ್ಯವನ್ನು ಕಾಪಾಡುವಂತೆ, ಇದರಲ್ಲಿ ಇರುವ ಕಹಿ ಅಂಶಗಳು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ರಕ್ತವನ್ನು ಶುದ್ಧಿಗೊಳಿಸುತ್ತದೆ. ಜೊತೆಗೆ ದೇಹದಲ್ಲಿರುವ ನಂಜಿನ ಪ್ರಮಾಣ ಕಡಿಮೆಯಾಗುತ್ತದೆ. ದೇಹದಲ್ಲಿರುವ ಗಾಯಗಳನ್ನು ಬಹು ಬೇಗ ಗುಣಪಡಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.