ಪೌರ ಸಂಸ್ಥೆಗಳ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಆಗ್ರಹಿಸಿ ಪಾಲಿಕೆ ಮುಂದೆ ಧರಣಿ

ಕಲಬುರಗಿ.ಸೆ.14: ರಾಜ್ಯದ ಎಲ್ಲ ಪೌರ ಸಂಸ್ಥೆಗಳಲ್ಲಿನ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ನೇತೃತ್ವದಲ್ಲಿ ಪೌರ ನೌಕರರು ಮಹಾನಗರ ಪಾಲಿಕೆಯ ಮುಂದೆ ಮಂಗಳವಾರ ಧರಣಿ ಸತ್ಯಾಗ್ರಹ ಮಾಡಿದರು.
ಪ್ರತಿಭಟನೆಕಾರರು ಮಹಾನಗರ ಪಾಲಿಕೆಯ ಆಯುಕ್ತರ ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ, ನಗರದ ಸಂಪೂರ್ಣ ಸ್ವಚ್ಛತೆಗೋಸ್ಕರ ಮಳೆ, ಚಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೇ ಬಡಾವಣೆಗಳಲ್ಲಿ ಅಪಾಯಕಾರಿ ತ್ಯಾಜ್ಯ ಮತ್ತು ದುರ್ವಾಸನೆಯಿಂದ ಕೂಡಿದ ಚರಂಡಿಗಳ ಸ್ವಚ್ಛತೆಗಾಗಿ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಶುಚಿತ್ವದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅದರಿದ ಉತ್ಪತ್ತಿಯಾಗುವ ರೋಗ ರುಜಿನಿಗಳಿಗೆ ಸಾಕಷ್ಟು ಪೌರ ಕಾರ್ಮಿಕರು ಮತ್ತು ಅವರ ಮೇಲಾಧಿಕಾರಿಗಳು ತೊಂದರೆ ಅನುಭವಿಸುತ್ತಾರೆ. ಆದಾಗ್ಯೂ, ಅವರ ಆರೋಗ್ಯಕ್ಕೆ ತೊಂದರೆಯಾದಾಗ ಆಸ್ಪತ್ರೆಯ ವೆಚ್ಚ ಭರಿಸಿ ಕುಟುಂಬ ನಿರ್ವಹಣೆಯು ದುಸ್ತರವಾಗಿದೆ ಎಂದು ತಿಳಿಸಿದರು.
ಇದಲ್ಲದೇ ಕೋವಿಡ್-19 ಮಹಾಮಾರಿ ಮತ್ತು ಅನೇಕ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರದ ಮಾನದಂಡಗಳು ಯಥಾವತ್ತಾಗಿ ಅನುಷ್ಠಾನಗೊಳಿಸಲು ಸಾರ್ವತ್ರಿಕ ರಜೆಗಳನ್ನು ಉಪಯೋಗ ಮಾಡದೇ ಕ್ಷಿಪ್ರ ಕಾರ್ಯ ನಿರ್ವಹಿಸಿ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಪಾಲಿಕೆಯ ನೌಕರರ ಸೇವೆ ಶ್ಲಾಘನೀಯವಾಗಿದೆ. ಪ್ರಧಾನಿಯವರು ಪೌರ ಕಾರ್ಮಿಕರ ಸೇವೆಯನ್ನು ಪರಿಗಣಿಸಿ ಪಾದಪೂಜೆಯನ್ನೂ ಸಹ ಮಾಡಿದ್ದಾರೆ. ಆದಾಗ್ಯೂ, ಕಳೆದ 5ರಂದು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಇನ್ನೂ ಕೆಲವು ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಯೋಜನೆಯು ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಪರ್ಯಾಸವೆಂದರೆ ರಾಜ್ಯ ಸರ್ಕಾರದ ಕೆಸಿಎಸ್‍ಆರ್ ನಿಯಮಗಳನ್ವಯ ಪಾಲಿಕೆಯ ನೌಕರರಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನಶ್ರೇಣಿ ಮತ್ತು ಕರ್ನಾಟಕ ಲೋಕಸೇವಾ ಆಯೋಗದಿಂದ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ಆಯ್ಕೆ ಮಾಡಿ ಮಹಾನಗರ ಪಾಲಿಕೆಗಳಿಗೆ ನೇಮಕಾತಿ ಕೈಗೊಳ್ಳಲಾಗುತ್ತದೆ. ಅದೇ ತರಹ ಕಾಲಕಾಲಕ್ಕೆ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಎಲ್ಲ ನಿಯಮಗಳಂತೆ ರಾಜ್ಯ ಸರ್ಕಾರಿ ನೌಕರರಿಗೆ ನೀಡುವಂತೆ ಪಾಲಿಕೆ ನೌಕರರಿಗೂ ನೀಡುತ್ತಿದೆ. ಆದಾಗ್ಯೂ, ಆರೋಗ್ಯ ಸಂಜೀವಿನಿ ಯೋಜನೆ ಪಾಲಿಕೆ ನೌಕರರಿಗೆ ಅನ್ವಯಿಸುವುದಿಲ್ಲ ಎಂದು ಆದೇಶ ಹೊರಡಿಸಿದ್ದು ಸಮಂಜಸವಲ್ಲ ಎಂದು ಅವರು ತಿಳಿಸಿದರು.
ಈಗಾಗಲೇ ರಾಜ್ಯದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಿತವಾಗಿ ರಾಜ್ಯದ ಹತ್ತು ಮಹಾನಗರ ಪಾಲಿಕೆಗಳ ಅಧ್ಯಕ್ಷ ಅಮೃತರಾಜ್ ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿ ಗಡುವು ನೀಡಿದರೂ ಬೇಡಿಕೆಗೆ ಸ್ಪಂದಿಸಿಲ್ಲ. ಕೂಡಲೇ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.