ಪೌರ ಕಾರ್ಮಿಕರ ಸುರಕ್ಷತೆಗೆ ಒತ್ತು ಕೊಡಿ: ರಾಮಚಂದ್ರನ್ ಆರ್

ಬೀದರ:ನ.6: ಮ್ಯಾನ್ಯುಯಲ್ ಸ್ಕ್ಯಾವೇಂಜರ್ಸ ನೇಮಕಾತಿ ನಿಷೇಧ ಮತ್ತು ಅದರ ಪುನರ್ವಸತಿ ಕಾಯ್ದೆ 2013ರ ಜಿಲ್ಲಾಮಟ್ಟದ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮ್ಯಾನ್ಯುಯಲ್ ಸ್ಕ್ಯಾವೇಂಜರ್ಸ ನೇಮಕ ನಿಷೇಧವಾಗಿದ್ದರಿಂದ ಜಿಲ್ಲೆಯಲ್ಲಿ, ಈ ಕೆಲಸಗಾರರನ್ನಾಗಿ ಯಾರನ್ನು ಕೂಡ ಉಪಯೋಗಿಸಿಕೊಳ್ಳಬಾರದು ಎಂದು ತಿಳಿಸಿದರು.
ಪೌರ ಕಾರ್ಮಿಕರು ಸುರಕ್ಷಿತ ಪರಿಕರಗಳೊಂದಿಗೆ ಕೆಲಸ ಮಾಡುವಂತೆ ಕ್ರಮ ವಹಿಸಬೇಕು. ಅವರ ಅಗತ್ಯ ಅನುಸಾರ ವೈದ್ಯಕೀಯ ತಪಾಸಣೆಗೆ ವ್ಯವಸ್ಥೆ ಮಾಡಬೇಕು. ಪೌರ ಕಾರ್ಮಿಕರಿಗೆ ಇಪಿಎಫ್ ಮತ್ತು ಇಎಸ್‍ಐ ಸೌಕರ್ಯ ಸೇರಿದಂತೆ ಕನಿಷ್ಟ ವೇತನ ಸಿಗುವ ವ್ಯವಸ್ಥೆಯಾಗಬೇಕು. ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಾಣ ಸೌಕರ್ಯ ಕಲ್ಪಿಸಿಕೊಡಲು ಒತ್ತು ಕೊಡಬೇಕು ಎಂದು ನಗರಸಭೆಗಳ ಪೌರಾಯುಕ್ತರು ಮತ್ತು ಪುರಸಭೆಯ ಎಲ್ಲ ಮುಖ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮ್ಯಾನ್ಯುಯಲ್ ಸ್ಕ್ಯಾವೇಂಜರ್ಸ್ ನೇಮಕ ನಿಷೇಧದ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕಾರ್ಯಕೈಗೊಳ್ಳಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಬೀದರ ಜಿಲ್ಲೆಯಲ್ಲಿನ ಎರಡು ಮ್ಯಾನ್ಯುಯಲ್ ಸ್ಕ್ಯಾವೇಂಜರ್ಸ್ ಪ್ರಕರಣಗಳಿಗೆ ಸರ್ಕಾರದ ನಿಯಮಾನುಸಾರ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಈಗ ಮ್ಯಾನ್ಯುಯಲ್ ಸ್ಕ್ಯಾವೇಂಜರ್ಸ ಇಲ್ಲ ಎಂದು ಇದೆ ವೇಳೆ ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೇಂಜರ್ಸ ನೇಮಕಾತಿ ನಿಷೇಧ ಮತ್ತು ಅದರ ಪುನರ್ವಸತಿ ಕಾಯ್ದೆ 2013ರ ಜಿಲ್ಲಾಮಟ್ಟದ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ವಿಜಯಲಕ್ಷ್ಮಿ, ಸರ್ಕಾರೇತರ ಸಂಸ್ಥೆಗಳ ಸದಸ್ಯರು, 25 ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಹಾಗೂ ಇತರರು ಇದ್ದರು.