ಪೌರ ಕಾರ್ಮಿಕರ ವಿರುದ್ಧ ಸೇಡಿನ ಕ್ರಮ – ಮಿಂಚಿನ ಪ್ರತಿಭಟನೆ

ಆಯುಕ್ತರ ಮಧ್ಯ ಪ್ರವೇಶದಿಂದ ನಿವಾರಣೆಗೊಂಡ ಸಮಸ್ಯೆ
ರಾಯಚೂರು.ನ.೦೭- ಸಫಾಯಿ ಕರ್ಮಚಾರಿ ಆಯೋಗಕ್ಕೆ ದೂರು ನೀಡಲು ಬೆಂಗಳೂರಿಗೆ ತೆರಳಿದ ನೇರ ಪಾವತಿ ಆಧಾರಿತ ಪೌರ ಕಾರ್ಮಿಕರನ್ನು ಹೊರ ಹಾಕುವಂತೆ ಪರಿಸರ ಅಭಿಯಂತರ ಹೇಳಿದ ಮೌಖಿಕ ಸೂಚನೆ ಇಂದು ಬೆಳ್ಳಂಬೆಳಿಗ್ಗೆ ಪೌರ ಕಾರ್ಮಿಕರು ಮಿಂಚಿನ ಪ್ರತಿಭಟನೆಗಿಳಿದು, ಕೆಲಸ ಸ್ಥಗಿತಗೊಳಿಸಲು ಕಾರಣವಾಯಿತು.
ಕಳೆದ ಮೂರು, ನಾಲ್ಕು ದಿನಗಳ ಹಿಂದೆ ಸಫಾಯಿ ಕರ್ಮಚಾರಿ ಆಯೋಗದ ಮುಂದೆ ಪೌರ ಕಾರ್ಮಿಕರ ಪ್ರಕರಣಕ್ಕೆ ವಿಚಾರಣೆ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಾದ ಎಸ್.ಮಾರೆಪ್ಪ ಅವರೊಂದಿಗೆ ಕೆಲ ಕಾರ್ಮಿಕರು ಬೆಂಗಳೂರಿಗೆ ತೆರಳಿದ್ದರು. ಈ ಕುರಿತು ಕಾರ್ಮಿಕರ ವಿರುದ್ಧ ತೀವ್ರ ಅಸಮಾಧಾನಗೊಂಡ ಪರಿಸರ ಅಭಿಯಂತರ ವಿಚಾರಣೆಗೆ ಹಾಜರಾದ ಕಾರ್ಮಿಕರನ್ನು ಸೇವೆಯಿಂದ ಹೊರಗಿಡುವಂತೆ ಸೂಚನೆ ನೀಡಿರುವುದೇ ಈ ಗೊಂದಲಕ್ಕೆ ಕಾರಣವಾಯಿತು. ಎಂದಿನಂತೆ ಬೆಳಗಿನ ಜಾವ ಕೆಲಸಕ್ಕೆ ಬಂದ ಕೆಲ ಪೌರ ಕಾರ್ಮಿಕ ಕೆಲಸದಿಂದ ಹಿಂದಕ್ಕೆ ತೆರಳುವಂತೆ ಸೂಚಿಸಲಾಯಿತು.
ಇದರಿಂದ ತೀವ್ರ ಅಸಮಾಧಾನಗೊಂಡ ನೇರ ಪಾವತಿ ಆಧಾರಿತ ಪೌರ ಕಾರ್ಮಿಕರು ತಕ್ಷಣವೇ ಅಲ್ಲಿಂದ ಎಸ್.ಮಾರೆಪ್ಪ ಅವರಿಗೆ ಕರೆ ಮಾಡಿ, ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಮಾರೆಪ್ಪ ಅವರು ಕೂಡಲೇ, ಎಲ್ಲಾ ಪೌರ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ, ಮುಷ್ಕರದಲ್ಲಿ ತೊಡಗುವಂತೆ ಕರೆ ನೀಡಿದರು. ಇದರಿಂದ ವಿಚಲಿತಗೊಂಡ ನಗರಸಭೆ ಈ ಕುರಿತು ಪೌರಾಯುಕ್ತರ ಗುರುಲಿಂಗಪ್ಪ ಅವರಿಗೆ ಮಾಹಿತಿ ನೀಡಲಾಯಿತು. ಪೌರಾಯುಕ್ತರು ತಕ್ಷಣವೇ ಮಧ್ಯ ಪ್ರವೇಶಿಸಿ ಕೂಡಲೇ, ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ತೆರಳುವಂತೆ ಆದೇಶಿಸಿದರು.
ಇದರಿಂದ ಪೌರ ಕಾರ್ಮಿಕರ ಮುಷ್ಕರ ಸಮಸ್ಯೆ ನಿವಾರಣೆಗೊಂಡು ಯಥಾರೀತಿಯಲ್ಲಿ ಕಾರ್ಮಿಕರು ಮತ್ತೇ ಕೆಲಸ ಕಾರ್ಯದಲ್ಲಿ ತೊಡಗುವಂತಾಯಿತು. ಪರಿಸರ ಇಲಾಖೆಯ ಅಭಿಯಂತರರ ನಿರ್ಲಕ್ಷ್ಯ ಮತ್ತು ಪೌರ ಕಾರ್ಮಿಕರ ಬಗ್ಗೆ ದ್ವೇಷದ ವರ್ತನೆಯನ್ನು ಸಂಘಟನೆ ತೀವ್ರವಾಗಿ ಖಂಡಿಸಲಾಯಿತು.