ಪೌರ ಕಾರ್ಮಿಕರ ನೇಮಕಾತಿ ಆದೇಶಕ್ಕಾಗಿ ಸೆ. 17ರಂದು ಮುಖ್ಯಮಂತ್ರಿಗಳಿಗೆ ಕಪ್ಪು ಬಟ್ಟೆ ಪ್ರದರ್ಶನ

ಕಲಬುರಗಿ,ಸೆ.13: ಕಳೆದ 2021ರಲ್ಲಿ ಆಯ್ಕೆಯಾದ 132 ಜನ ಪೌರ ಕಾರ್ಮಿಕರ ನೇಮಕಾತಿ ಆದೇಶಗಳನ್ನು ನೀಡದೇ ಹೋದರೆ ಸೆಪ್ಟೆಂಬರ್ 19ರಂದು ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕಪ್ಪು ಬಟ್ಟೆ ಪ್ರದರ್ಶನದ ಮೂಲಕ ಪ್ರತಿಭಟಿಸಲಾಗುವುದು ಎಂದು ದಲಿತ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ಎಸ್. ಭಂಡಾರಿ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಸುಮಾರು ವರ್ಷಗಳಿಂದ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಕರೆಯಲಾಗಿತ್ತು. ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಹುದ್ದೆಗಾಗಿ ಸುಮಾರು 1200ಕ್ಕಿಂತ ಹೆಚ್ಚು ಜನ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದರು. ನೇಮಕಾತಿಗಾಗಿ ಅರ್ಜಿಯನ್ನೂ ಸಹ ಸಲ್ಲಿಸಿದ್ದರು. ಪಾಲಿಕೆಗೆ ನೇರ ನೇಮಕಾತಿಗಾಗಿ 258 ಹುದ್ದೆಗಳು ಖಾಲ ಇದ್ದವು. ಆ 258ರ ಪೈಕಿ ಹುದ್ದೆಗಳಲ್ಲಿ ರೋಸ್ಟರ್ ಪದ್ದತಿಯಂತೆ ಆಯ್ಕೆ ಮಾಡಲಾಗಿದೆ. 132 ಹುದ್ದೆಗಳು ಮಾತ್ರ ಪೌರ ಕಾರ್ಮಿಕರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರದ ಅಧ್ಯಕ್ಷರಾಗಿ ಜಿಲ್ಲಾಧಿಕಾರಿಗಳು ಆಗಿದ್ದರು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕರು ಪೌರ ಕಾರ್ಮಿಕರ ವಿಶೇಷ ನೇರ ನೇಮಕಾತಿ ಮತ್ತು ವೇತನ ಪಾವತಿ ಆಯ್ಕೆ ಸಮಿತಿ ಸದಸ್ಯರಾಗಿದ್ದರು. ಪಾಲಿಕೆಯಲ್ಲಿ ಸುಮಾರು ವರ್ಷಗಳಿಂದ ಸಫಾಯಿ ಕರ್ಮಚಾರಿಗಳಾಗಿ ದುಡಿಯುತ್ತಿದ್ದ ಕ್ಷೇಮಾಭಿವೃದ್ಧಿ, ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ಇತರ ಆಧಾರದ ಮೇಲೆ ನೇಮಕಾತಿ ಹೊಂದಿ ಕನಿಷ್ಠ ಎರಡು ವರ್ಷಗಳ ಸೇವೆಯನ್ನು ಸಲ್ಲಿಸಿದವರಿಗೆ ಆದ್ಯತೆ ನೀಡಿ, ಅವರ ಅರ್ಹತೆಗೆ ತಕ್ಕಂತೆ 258 ಪೌರ ಕಾರ್ಮಿಕರ ಹುದ್ದೆಗಳಲ್ಲಿ ಸುಮಾರು 132 ಜನರನ್ನು ಆಯ್ಕೆ ಮಾಡಿ ಕಳೆದ 2021ರ ಏಪ್ರಿಲ್ 6ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆಯ್ಕೆ ಪಟ್ಟಿ ಪ್ರಕಟಿಸಲು ಮೂರು ವರ್ಷಗಳ ವಿಳಂಬ ಮಾಡಲಾಗಿದೆ. ಆದಾಗ್ಯೂ, ಅವರೆಲ್ಲರೂ ನೇಮಕಾತಿ ಆದೇಶವಿಲ್ಲದೇ ಆತಂಕಗೊಂಡಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
2018ರ ಫೆಬ್ರವರಿ 22ರಿಂದ ಪ್ರಾರಂಭವಾದ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಐದು ವರ್ಷಗಳು ಕಳೆದರೂ ಕೂಡ ನೇಮಕಾತಿ ಆದೇಶ ಕೊಡದೇ ಇರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ, ಸಚಿವರಿಗೆ, ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕಳೆದ 2023ರ ಫೆಬ್ರವರಿ 2ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇಮಕಾತಿ ನಿಯಮಗಳ ಅಡಿ ಭರ್ತಿ ಮಾಡುವಂತೆ ಮತ್ತು ಆಯ್ಕೆಯಾದ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ನೀಡದೇ ವಿಳಂಬ ಮಾಡಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ವಿಸ್ತøತವಾಗಿ ಸೂಚಿಸಿದ್ದರು. ಮತ್ತೆ 2023ರ ಜುಲೈ 10ರಂದು ಮೂರು ತಿಂಗಳಿನ ನಂತರ ಯಾವುದೇ ಮಾಹಿತಿ ಸಿಕ್ಕಿಲ್ಲವೆಂದು ಎಚ್ಚರಿಸಿ ನೇಮಕಾತಿ ವಿಳಂಬ ಮಾಡಿದವರ ವಿರುದ್ಧ ಶಿಸ್ತು ಕ್ರಮ, ಕಾಲಮಿತಿಯಲ್ಲಿ ನೇಮಕಾತಿ ಆದೇಶ ಕೊಡಲು ಕ್ರಮ ಕೈಗೊಳ್ಳಲು ಮತ್ತೊಂದು ಪತ್ರವನ್ನೂ ಸಹ ಬರೆದಿದ್ದರು. ಆದಾಗ್ಯೂ, ಯಾವುದೇ ಆದೇಶ ದೊರಕುವ ಭರವಸೆ ಕಾಣದೇ ಇದ್ದುದರಿಂದ ಕಳೆದ 8ರಂದು ನಗರಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಅವರಿಗೆ ಮನವಿ ಮಾಡಿದಾಗ ನೇಮಕಾತಿ ಆದೇಶ ಕೊಡಲು ಸೂಚಿಸಿದ್ದರು. ಆದಾಗ್ಯೂ, ಇಲ್ಲಿಯವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು.
ಪೌರ ಕಾರ್ಮಿಕರ ನೇಮಕಾತಿ ಆದೇಶಗಳನ್ನು ನೀಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 17ರಂದು ಕಾರ್ಯಕರ್ತರು ತಲೆಗೆ ಹಾಗೂ ರಟ್ಟೆಗಳಿಗೆ ಕಪ್ಪು ಬಟ್ಟೆ ಧರಿಸಿ ಮುಖ್ಯಮಂತ್ರಿಗಳ ಆಗಮನ ಸಂದರ್ಭದಲ್ಲಿ ಪ್ರತಿಭಟಿಸಲಾಗುತ್ತದೆ. ಸೆಪ್ಟೆಂಬರ್ 27ರೊಳಗಾಗಿ ನೇಮಕಾತಿ ಆದೇಶ ಕೊಡದೇ ಹೋದಲ್ಲಿ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪಾಲ್ಗೊಳ್ಳದೇ ಬಹಿಷ್ಕರಿಸಲು ತೀರ್ಮಾನಿಸಲಾಗುವುದು ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಕಪಿಲ್ ಜೆ. ವಾಲಿ, ಗುರು ಎಸ್. ಮಾಳಗೆ, ರಾಜು ಎಸ್. ಲೆಂಗಟಿ, ಶರಣು ಅತನೂರ್, ಅನಿಲ್ ಚಕ್ರ, ಶರಣಪ್ಪ ಇಟಗಿ ಮುಂತಾದವರು ಉಪಸ್ಥಿತರಿದ್ದರು.