ಪೌರ ಕಾರ್ಮಿಕರ ದಿನಾಚರಣೆ : ಕಾರ್ಮಿಕರ ಸೇವೆ ಅತ್ಯಂತ ಶ್ಲಾಘನೆ

ಗ್ಲೌಸ್, ಶೂ ಧರಿಸಿ ಕರ್ತವ್ಯ ನಿರ್ವಹಿಸಲು ಡಿಸಿ ಸಲಹೆ
ರಾಯಚೂರು.ಸೆ.೨೩- ಕೊರೊನಾ, ಡೆಂಗ್ಯೂ ಹಾಗೂ ಮತ್ತಿತರ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವ ಮತ್ತು ಶ್ಲಾಘನೀಯವಾಗಿದೆ. ಈ ರೀತಿಯ ಸೇವೆ ಬೇರೆ ಯಾರು ಮಾಡಲು ಸಾಧ್ಯವಿಲ್ಲ. ಇದಕ್ಕೆ ನಾವು ತಲೆ ಬಾಗಿದರೂ ತಪ್ಪಲ್ಲವೆಂದು ಜಿಲ್ಲಾಧಿಕಾರಿ ಡಾ.ಸತೀಶ್ ಅವರು ಹೇಳಿದರು.
ಅವರಿಂದು ಅತ್ತನೂರು ಪ್ಯಾಲೇಸ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿಗೆ ನೀರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಅತ್ಯುತ್ತಮ ರೀತಿಯಲ್ಲಿ ಕಾಯ್ದುಕೊಳ್ಳಬೇಕು. ನಿಮ್ಮ ಆರೋಗ್ಯ ನಮ್ಮ ನಗರದ ಸ್ವಚ್ಛತೆಗೆ ಸಹಕಾರಿಯಾಗಿದೆ. ಕೋವಿಡ್, ಡೆಂಗ್ಯೂ ಮತ್ತಿತರ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ನೀವು ಜನರಿಗೆ ನೀಡಿದಂತಹ ಸೇವೆ ಅವಿಸ್ಮರಣೀಯವಾಗಿದೆ.
ಈ ರೀತಿಯ ಸೇವೆಯನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎನ್ನುವುದು ಅಷ್ಟೇ ಮಹತ್ವದ ವಿಷಯವಾಗಿದೆ. ಆದರೆ, ಸೇವೆಯ ಸಂದರ್ಭದಲ್ಲಿ ನಿಮ್ಮ ಆರೋಗ್ಯ ಕಾಯ್ದುಕೊಳ್ಳುವುದು ಅಷ್ಟೇ ಮಹತ್ವದಾಗಿದೆ. ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ ಪೌರ ನೌಕರರು ಕಡ್ಡಾಯವಾಗಿ ಗ್ಲೌಸ್ ಮತ್ತು ಶೂ ಧರಿಸಬೇಕು. ಪೌರ ಕಾರ್ಮಿಕರ ಈ ದಿನಾಚರಣೆಯನ್ನು ಮುಂದಿನ ವರ್ಷ ಪ್ರತ್ಯೇಕವಾಗಿ ಆಯೋಜಿಸುವಂತಹ ವ್ಯವಸ್ಥೆ ಮಾಡಿಕೊಳ್ಳಬೇಕು. ಪೌರ ಕಾರ್ಮಿಕರ ದಿನಾಚರಣೆಯಂದು ಆರೋಗ್ಯ ಇಲಾಖೆಯವರನ್ನು ಕರೆದು, ಇಡೀ ದಿನ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಕಾರ್ಯಕ್ರಮ ರೂಪಿಸಲು ಚಿಂತಿಸುವಂತೆ ಸಲಹೆ ನೀಡಿದರು. ಈ ಪೌರ ಕಾರ್ಮಿಕರ ದಿನಾಚರಣೆಯನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಆಯೋಜಿಸಲಾಗಿದೆಂದು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಉಪಾಧ್ಯಕ್ಷರು ಹಾಗೂ ಹಿರಿಯ ಸದಸ್ಯರಾದ ಜಯಣ್ಣ ಅವರು ಮಾತನಾಡುತ್ತಾ, ೨೦೧೬-೧೭ ನೇ ಸಾಲಿನಲ್ಲಿ ದೇಶಕ್ಕೆ ಮಾದರಿಯಾಗಿದ್ದ ಸ್ವಚ್ಛತೆ ಈಗ ಯಾವ ಹಂತದಲ್ಲಿದೆ ಎಂದು ಅವಲೋಕಿಸಿಕೊಳ್ಳುವಂತಹ ಸಂದಿಗ್ಧ ಕಾಲ ನಮ್ಮ ಮುಂದಿದೆ. ಸ್ವಚ್ಛತೆಯ ಆ ಮಾದರಿ ಈಗ ನಿಧಾನಕ್ಕೆ ಕಣ್ಮರೆಯಾಗಿದೆ. ಯಾರು ಕೆಲಸ ಮಾಡುತ್ತಿಲ್ಲ ಎನ್ನುವ ಉದ್ದೇಶ ನನ್ನದ್ದಲ್ಲ. ಆದರೆ, ಕ್ರಿಯಾಶೀಲನೆ, ಮೇಲ್ವಿಚಾರಣೆ ಮತ್ತು ಇಚ್ಛಾಸಕ್ತಿಯ ಕೊರತೆ ಈ ಅವ್ಯವಸ್ಥೆಗೆ ಕಾರಣವಾಗಿದೆ.
ರಾಯಚೂರು ನಗರಸಭೆ ೧೯೫೨ ರಿಂದ ಸುಧೀರ್ಘ ಇತಿಹಾಸ ಹೊಂದಿದೆ. ಜನಪರ ಆಡಳಿತ ನೀಡಬೇಕು ಎನ್ನುವುದು ಈಗ ದಿನೇ ದಿನೇ ಹುಸಿಯಾಗುತ್ತಿದೆ. ನಗರಸಭೆ ಸದಸ್ಯರು ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗ ನಾವು ನಗರಸಭೆಗೆ ಬಂದ ಉದ್ದೇಶ ಮತ್ತು ನಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು, ಜನಪರ ಆಡಳಿತ ನೀಡಬೇಕು. ಈ ಉದ್ದೇಶ ದುರ್ಬಲವಾಗುತ್ತಿದೆ. ನಮ್ಮ ಇಚ್ಛಾಸಕ್ತಿಯ ಕೊರತೆ ಇದಕ್ಕೆ ಕಾರಣವಾಗಿದೆ. ದಿನಗೂಲಿ ನೌಕರರನ್ನು ನೇರ ಪಾವತಿಯಡಿ ಸೇರಿಸಿಕೊಂಡ ಜಿಲ್ಲಾಡಳಿತ ಮತ್ತು ನಗರಸಭೆ ಅವರಿಂದ ಏನು ನಿರೀಕ್ಷಿಸುತ್ತದೆ. ಇದು ಜನರಿಗೆ ಯಾವ ರೀತಿಯಲ್ಲಿ ಪೂರಕವಾಗಿದೆ ಎನ್ನುವುದು ಪ್ರತಿಯೊಬ್ಬರು ಯೋಚಿಸಬೇಕಾಗಿದೆ.
ನಮ್ಮ ಪ್ರತಿ ಬಡಾವಣೆ ಸ್ವಚ್ಛ ಮತ್ತು ಸೊಳ್ಳೆ ಮುಕ್ತ, ಉತ್ತಮ ಕುಡಿವ ನೀರಿನ ಸೌಲಭ್ಯ ಹಾಗೂ ರಸ್ತೆಗಳನ್ನು ನೀಡಬೇಕೆನ್ನುವುದು ಜನರ ಆಪೇಕ್ಷೆಯಾಗಿರುತ್ತದೆ. ಇದನ್ನು ಸಾಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆಂದು ಅವಲೋಕಿಸಿಕೊಳ್ಳಬೇಕಾಗಿದೆ. ೫೦೦ ಕ್ಕೂ ಹೆಚ್ಚು ಕಾರ್ಮಿಕರನ್ನೊಳಗೊಂಡಂತೆ ಈ ಸಂಸ್ಥೆ ೨.೫೦ ಲಕ್ಷ ಜನರಿಗೆ ಸೇವೆ ಸಲ್ಲಿಸಲು ೩೫ ವಾರ್ಡ್ ನಗರಸಭೆ ಸದಸ್ಯರು ಆಯ್ಕೆಗೊಂಡು, ಜವಾಬ್ದಾರಿ ನಿರ್ವಹಣೆಯಲ್ಲಿ ನಾವು ಎಡವಿದ್ದೇವೆ ಎನ್ನುವ ನೋವು ಕಾಡುವಂತೆ ಮಾಡಿದೆ.
ಸುಧೀರ್ಘ ೩೦ ವರ್ಷಗಳಿಂದ ಈ ಆಡಳಿತ ವ್ಯವಸ್ಥೆ ನೋಡಿದ ನಾನು ಇದೇ ಸಂಸ್ಥೆಯಲ್ಲಿ ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಪ್ರಭಾರಿ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆ ಮತ್ತು ಜನರ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ನಾವು ಎಚ್ಚರಿಕೆಯಿಂದ ಮತ್ತು ಅತ್ಯಂತ ಜವಾಬ್ದಾರಿ ರೀತಿಯಿಂದ ಕಾರ್ಯ ನಿರ್ವಹಿಸುವತ್ತ ಇನ್ನೂ ಸಕ್ರಿಯಗೊಳ್ಳಬೇಕು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಆಯುಕ್ತರಾದ ಕೆ.ಮುನಿಸ್ವಾಮಿ, ಭಾಸ್ಕರ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.