ಪೌರ ಕಾರ್ಮಿಕರ ಅಕ್ರಮ ನೇಮಕಾತಿ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ.ಮೇ.03:ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ (ವಿಶೇಷ) ನೇಮಕಾತಿಯಲ್ಲಿ ಆಗಿರುವ ಆಕ್ರಮ ನೇಮಕಾತಿ ರದ್ದು ಮಾಡುವಂತೆ ಹಾಗೂ ನಿಜವಾದ ಪೌರ ಕಾರ್ಮಿಕರಿಗೆ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿ ಸೋಮವಾರ ಪೌರ ಕಾರ್ಮಿಕರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಕೋವಿಡ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 14 ದಿನಗಳ ಜನತಾ ಕಫ್ರ್ಯೂ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆಗಳನ್ನು ಮಾಡದಂತೆ ನಿಷೇಧಿಸಲಾಗಿದೆ. ಆದಾಗ್ಯೂ, ಪ್ರತಿಭಟನೆ ಮಾಡಿದರೂ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರತಿಭಟನೆಕಾರರಲ್ಲಿ ಆಗಲಿಲ್ಲ. ಹಲವು ಕಾರ್ಮಿಕರು ಮಾಸ್ಕ್ ಸಹ ಧರಿಸದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಮಿಕ ಮುಖಂಡರಾದ ಸೂರ್ಯಕಾಂತ್ ನಿಂಬಾಳಕರ್, ಸುನಿಲ್ ಮಾರುತಿ ಮಾನ್ಪಡೆ, ವಿಠಲ್ ಚಿಕಣಿ, ಮೈಲಾರಿ ದೊಡ್ಡಮನಿ, ಅಯ್ಯಣ್ಣ ಹಾಲಬಾವಿ, ನಾಗಪ್ಪ ಟೈಗರ್, ರುಕ್ಕಪ್ಪ ಕಾಂಬಳೆ ಮುಂತಾದವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಮಂಡಳಿಯ ಅಧ್ಯಕ್ಷರೂ ಆದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ತಿಂಗಳು ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪೌರ ಕಾರ್ಮಿಕರ (ವಿಶೇಷ) ನೇರ ನೇಮಕಾತಿಯನ್ನು ಈ ವರ್ಷ ಪೂರ್ಣಗೊಳಿಸಲು ಪ್ರಯತ್ನಿಸುವುದು ಪೌರ ಕಾರ್ಮಿಕರಿಗೆ ಹರ್ಷದ ವಿಷಯವಾಗಿದೆ. ಆದಾಗ್ಯೂ, ಈಗ ಪ್ರಕಟಿಸಿರುವ ತಾತ್ಕಾಲಿಕ ಪಟ್ಟಿ ಆಕ್ರಮದಿಂದ ಕೂಡಿದ್ದು, 15_20 ವರ್ಷಗಳಿಂದ ದುಡಿದ ನಿಜವಾದ ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಮಹಾನಗರ ಪಾಲಿಕೆ ಪೌರ ಕಾರ್ಮಿಕರ (ವಿಶೇಷ) ನೇಮಕಾತಿಯಲ್ಲಿ 40ರಿಂದ 50 ಜನ ಸುಪ್ರವೈಜರ್‍ಗಳನ್ನು ಹಾಗೂ 10_15 ಜನ ವಾಹನ ಚಾಲಕರು ಮತ್ತು 5\ರಿಂದ 10 ಜನ ಕಚೇರಿ ಕೆಲಸದವರನು ನೇಮಕ ಮಾಡಲಾಗಿದೆ. 2._3 ವರ್ಷ ಸೇವೆ ಸಲ್ಲಿಸಿದವರನ್ನು ನೇಮಕ ಮಾಡಿಕೊಂಡಿದ್ದು, ಅವರು ದಾಖಲೆಯಲ್ಲಿ ಪಿ.ಕೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ನೇಮಕಾತಿ ಪ್ರಾಧಿಕಾರಕ್ಕೆ ದಾರಿ ತಪ್ಪಿಸಿದ್ದಾರೆ. ಇದರಿಂದ 15_20 ವರ್ಷ ದುಡಿದ ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ. ನೇಮಕಾತಿಯಲ್ಲಿ ಹೊರಗುತ್ತಿಗೆ ನೌಕರರನ್ನು ಮಾತ್ರ ನೇಮಕಾತಿಯಲ್ಲಿ ಪರಿಗಣನೆಗೆ ತೆಗೆದುಕೊಂಡು ದಿನಗೂಲಿ ನೌಕರರನ್ನು ಕಡೆಗಣಿಸಲಾಗಿದೆ ಎಂದು ಅವರು ದೂರಿದರು.
ಈ ಕುರಿತು ಪೌರ ಕಾರ್ಮಿಕರ ಹಲವು ಬಾರಿ ಹೋರಾಟ, ಪ್ರತಿಭಟನೆಗಳು ನಡೆಸಿದಾಗ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡದು ಅವರಿಗೆ ನೇರಪಾವತಿ. ಸಮಾನ ಕಲಸಕ್ಕೆ ಸಮಾನ ವೇತನ ಜಾರಿ ಮಾಡಲು ತೀರ್ಮಾನ ತೆಗೆದುಕೊಂಡಿದ್ದಾರೆ. ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಅವರ ಪರವಾಗಿ ತೀಪು ನೀಡಿ 370 ಜನ ದಿನಗೂಲಿ ಪೌರ ಕಾರ್ಮಿಕರು ಎಂದು ಆದೇಶಿಸಿ ನೇರ ಪಾವತಿಗೆ ಆದೇಶ ನೀಡಿದ್ದಾರೆ. ಕಾರ್ಮಿಕರ ಖಾತೆಗೆ ನೇರ ಪಾವತಿಗೆ ಕ್ರಮ ಕೈಗೊಂಡಿದ್ದಾರೆ. ಇನ್ನು 54 ತಿಂಗಳ ವೇತನ ಮಾಡದಿರುವ ಬಗ್ಗೆ ಸಹಾಯಕ ಕಾರ್ಮಿಕರು ಕಾರ್ಮಿಕ ಇಲಾಖೆಯ ಕಾರ್ಮಿಕ ನ್ಯಾಯಲಯದಲ್ಲಿ ಪ್ರಕರಣ ಚಾಲ್ತಿಯಲ್ಲಿದೆ ಎಂದು ಅವರು ತಿಳಿಸಿದರು.
ಈಗ ತಯಾರಿಸಿರುವ ನೇರ ನೇಮಕಾತಿ ಪಟ್ಟಿಯು ಪ್ರಾಧಿಕಾರಕ್ಕೆ ಸಂಪೂರ್ಣ ಮಾಹಿತಿ ಸ್ಥಳೀಯ ಅಧಿಕಾರಿಗಳು ನೀಡದೇ ತಮಗೆ ಅನುಕೂಲವಿರುವ ಪಟ್ಟಿಯನ್ನು ತಯಾರು ಮಾಡಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಆದ್ದರಿಂದ ನಿಜವಾದ ಪೌರ ಕಾರ್ಮಿಕರ ಸಂಪೂರ್ಣ ವಾಸ್ತವ ದಾಖಲೆಗಕನ್ನು ಮರೆಮಾಚಿದ್ದಾರೆ. ಪ್ರಾಧಿಕಾರವು ಕೆಲವು ಭ್ರಷ್ಟ ಅಧಿಕಾರಿಗಳ ಅನುಕೂಲಕ್ಕೆ ತಕ್ಕಂತೆ ನಿಯಮಾವಳಿ ರೂಪಿಸಿಕೊಂಡು 10 -15 ವರ್ಷ ದುಡಿದಿರುವ ನಿಜವಾದ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ಕೂಡಲೇ ಮಧ್ಯಸ್ಥಿಕೆ ವಹಿಸಿ ನೇಮಕಾತಿ ತಡೆ ನೀಡಿ ನಿಜವಾದ ಪೌರ ಕಾರ್ಮಿಕರಿಗೆ ನ್ಯಾಯ ಒಡಗಿಸಬೇಕೆಂದು ಅವರು ಒತ್ತಾಯಿಸಿದರು.