ಚಿಕ್ಕಬಳ್ಳಾಪುರ : ಸೆಪ್ಟೆಂಬರ್ – 23: ಪರಿಸರ ಮತ್ತು ನಗರ ಸ್ವಚ್ಛತೆಗೆ ಕಾರಣರಾದ ಪೌರಕಾರ್ಮಿಕರ ಶ್ರಮ ಹಾಗೂ ಸೇವೆಯನ್ನು ಯಾರೂ ಗುರುತಿಸುತ್ತಿಲ್ಲ, ಅವರು ಮಾಡುವ ಕೆಲಸಕ್ಕೆ ಸೂಕ್ತ ಸೌಲಭ್ಯ,ಗೌರವ ಸಿಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ತಿಳಿಸಿದರು.
ಜಿಲ್ಲಾಡಳಿತ,ಚಿಕ್ಕಬಳ್ಳಾಪುರ ನಗರ ಸಭೆ ಹಾಗೂ ಬೋರ್ಡ್ ಮತ್ತು ಟೈರ್ಡ್ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರಸಭೆ ಆವರಣದಲ್ಲಿ ನಿರ್ಮಿಸಿರುವ “ಪೌರಕಾರ್ಮಿಕರ ವಿಶ್ರಾಂತಿ ಗೃಹದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಪೌರಕಾರ್ಮಿಕರ ಆರೋಗ್ಯ ಸುರಕ್ಷತೆಯ ದೃಷ್ಟಿಯನ್ನು ಇಟ್ಟುಕೊಂಡು ಅವರಿಗೆ ಹಲವು ಸೌಲಭ್ಯಗಳನ್ನು ನೀಡಲು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡಿದರು ಕೂಡ ಅವುಗಳ ಜೊತೆಗೆ ಅವರಿಗೆ ಸಮಾಜದಲ್ಲಿ ಗೌರವ ದೊರೆತಾಗ ಮಾತ್ರ ಅವರು ಮಾಡುವ ಕೆಲಸಕ್ಕೆ ಅರ್ಥ ಸಿಗುತ್ತದೆ. ಚಿಂತಾಮಣಿ ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಕಂಡುಬರುವ ಸಮಸ್ಯೆಗಳನ್ನು ಮತ್ತು ಅದಕ್ಕೆ ಏನು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಸಂಪೂರ್ಣ ವರದಿಯನ್ನು ಸದ್ಯದಲ್ಲೇ ಟೈಡ್ ಸಂಸ್ಥೆ ಹೊರ ತರುತ್ತಿದ್ದಾರೆ, ಅದರಂತೆ ಚಿಕ್ಕಬಳ್ಳಾಪುರ ನಗರಕ್ಕೂ ಇದೇ ಮಾದರಿ ಅನುಸರಿಸಿ ಸ್ವಚ್ಛ, ಸುಂದರ ಮಾದರಿ ನಗರ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಟೈಡ್ ಸಂಸ್ಥೆಗೆ ತಿಳಿಸಿದರು.
ಪೌರ ಕಾರ್ಮಿಕರು ನಿಮ್ಮ ಸ್ವಚ್ಛತೆಗೆ ಸ್ವಲ್ಪ ಗಮನ, ಸಮಯ ಕೊಡಿ,ಬೆಳಿಗ್ಗೆ 5:00 ಗಂಟೆಗೆ ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೀರಾ ನಿಮಗೆ ಊಟ ಮಾಡಲು ಮತ್ತು ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳ, ಸಮಯಾವಕಾಶ ಇರುವುದಿಲ್ಲ ಈ ಕೊರತೆ ನಿಗಿಸಲು ಸುಮಾರು 45 ಲಕ್ಷ ಖರ್ಚು ಮಾಡಿ”ವಿಶ್ರಾಂತಿ ಗೃಹ ನಿರ್ಮಾಣ ಮಾಡಿದ ಟೈಡ್ ಸಂಸ್ಥೆಗೆ,ಈ ಕಾರ್ಯಕ್ಕೆ ಸಹಕಾರ ಕೊಟ್ಟ ಇತರ ಸಂಸ್ಥೆಗಳಿಗೆ ಧನ್ಯವಾದ ತಿಳಿಸಿದರು.
ಉತ್ತಮ ಗುಣಮಟ್ಟದ ಶೌಚಾಲಯ, ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದಾರೆ ಅದನ್ನು ಪೌರಕಾರ್ಮಿಕರು ಬಳಸಿಕೊಂಡು,ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕೆಂದು ಮನವಿ ಮಾಡಿದರು. ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ಕ್ರಮ ವಹಿಸುತ್ತಿದೆ.ಈ ಕಾರ್ಯಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಕೋರಿದರು.
ಚಿಕ್ಕಬಳ್ಳಾಪುರ ನಗರದ ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ 40 ಕೋಟಿ ರೂ ವೆಚ್ಚದಲ್ಲಿ ಕ್ರಮವಹಿಸಲಾಗುವುದು, ಅತ್ಯಾಧುನಿಕ ಶೈಲಿಯಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುವುದು, ನಗರದ ರಸ್ತೆಗಳಿಗೆ ಹೊಸ ರೂಪ ನೀಡಲಾಗುವುದು, ರೈತರು ಹಾಗೂ ವರ್ತಕರೊಂದಿಗೆ ಸಮಾಲೋಚಿಸಿ ಹೂವಿನ ಮಾರುಕಟ್ಟೆಗೆ ಸ್ಥಳ ಗುರುತಿಸಲಾಗುತ್ತಿದೆ, ಕನ್ನಡ ಭವನ, ಗುರುಭವನ ಸೇರಿದಂತೆ ಇತರ ಭವನಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಆದಷ್ಟು ತ್ವರಿತವಾಗಿ ಅಭಿವೃದ್ಧಿಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದರು
ಜಿಲ್ಲಾಧಿಕಾರಿ ರವೀಂದ್ರ ಅವರು ಮಾತನಾಡಿ,ನಗರವು ಸ್ವಚ್ಛವಾಗಿ ಇರಬೇಕೆಂದರೆ ಅದಕ್ಕೆ ಮೂಲ ಕಾರಣ ಪೌರಕಾರ್ಮಿಕರು ಸಾರ್ವಜನಿಕರು ಉಂಟು ಮಾಡುವ ತ್ಯಾಜ್ಯ ಕಸವನ್ನು ನೀವು ನಿಮ್ಮ ಕೈಯಾರೆ ತೆಗೆದು ನಗರವನ್ನು ಸ್ವಚ್ಛಗೊಳಿಸಲು ಶ್ರಮಿಸುವ ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಆಶಯವಾಗಿದೆ, ಹಾಗಾಗಿ ಕಾಲಕಾಲಕ್ಕೆ ಪೌರಕಾರ್ಮಿಕರು ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಅನುವಾಗಲು, ಯಾವುದೇ ಆಸ್ಪತ್ರೆಯಲ್ಲಿ ನಗದು ರಹಿತವಾಗಿ ಚಿಕಿತ್ಸೆ ಪಡೆದುಕೊಳ್ಳಲು ಅರೋಗ್ಯ ಜೀವ ವಿಮೆ ಮಾಡಿಸಲು ನಗರಸಭೆಯವರು ಮುಂದಾಗಿದೆ ಎಂದು ತಿಳಿಸಿದರು.
ಕಾರ್ಮಿಕರು ಮನೆ ಬಾಗಿಲಿಗೆ ಬಂದಾಗ ಹಸಿ ಕಸ ಒಣ ಕಸವನ್ನು ಬೇರ್ಪಡಿಸಿ ಕೊಟ್ಟರೆ ಅವರಿಗೆ ಸುಲಭವಾಗುತ್ತದೆ, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಹಕರಿಸಿ ಹಾಗೂ ಬಟ್ಟೆ ಬ್ಯಾಗನ್ನು ಬಳಸಿ ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಟಪರಿಣಾಮಗಳ ಬಗ್ಗೆ ತಿಳಿಸಿ ಕೊಡಲು ಮನೆ ಮನೆ ಬಾಗಿಲಿಗೆ ತೆರಳಿ ತಮ್ಮಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀಡಿ ಮತ್ತೆ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲು ಪ್ಲಾಸ್ಟಿಕ್ ಬಿಕ್ಷೆ ಅಭಿಯಾನ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದರು
ಶಾಸಕರಾದ ಪ್ರದೀಪ್ ಈಶ್ವರ್ ಅವರು ಮಾತನಾಡಿ. 15-20 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವವರಿಗೆ ಕೆಲಸ ಕಾಯಂ ಆಗಲು ಸರ್ಕಾರದ ಹಂತದಲ್ಲಿ ಕ್ರಮ ವಹಿಸಲು ಸಚಿವರಿಗೆ ಮನವಿ ಮಾಡಿದರು, ವಾಪಸಂದ್ರದಲ್ಲಿ ಸರ್ಕಾರಿ ಶಾಲೆಯೊಂದನ್ನು ಅಭಿವೃದ್ಧಿಪಡಿಸಲು ಮತ್ತು ಇನ್ನಷ್ಟು ಯೋಜನೆಗಳು ಚಿಕ್ಕಬಳ್ಳಾಪುರದಲ್ಲಿ ಮಾಡಿ ಎಂದು ಟೈಡ್ ಸಂಸ್ಥೆಗೆ ಮನವಿ ಮಾಡಿದರು.
ವೇದಿಕೆಯಲ್ಲಿ ನಗರಸಭೆಯ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲು ನಗರ ಸಭೆ ಸದಸ್ಯರು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್,ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ,ಉಪ ವಿಭಾಗಾಧಿಕಾರಿ ಡಿ. ಹೆಚ್. ಅಶ್ವಿನ್,
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ತಹಸೀಲ್ದಾರ್ ಅನಿಲ್, ಪೌರಾಯುಕ್ತ ಮಂಜುನಾಥ್, ಟೈಡ್ ಸಂಸ್ಥೆ ಮುಖ್ಯಸ್ಥ ಅಶ್ವಿನ್ ಹಾಗೂ ಇತರ ಪ್ರತಿನಿಧಿಗಳು , ನಗರಸಭೆ ಸದಸ್ಯರಾದ ಶಕೀಲಾ ಬಾನು, ಗಜೇಂದ್ರ, ನಾಗರಾಜ್, ಜಯಲಕ್ಷ್ಮಿ, ಮೀನಾಕ್ಷಿ, ವೆಂಕಟೇಶಪ್ಪ, ಕೆ.ಆರ್. ದೀಪಕ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಹಾಜರಿದ್ದರು.