ಪೌರ ಕಾರ್ಮಿಕರಿಗೆ ಸೇವಾಭದ್ರತೆ ದೊರೆಯಲಿ

ಕಲಬುರಗಿ,ಸೆ.23: ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯವನ್ನು ಮಾಡುವ ಪೌರ ಕಾರ್ಮಿಕರು ನಿಜವಾದ ಕಾಯಕಯೋಗಿಗಳು. ಕರೋನಾದಂತಹ ಸಂದಿಗ್ದ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣದ ಕಾಯಕ ಜೀವಿಗಳಿಗೆ ಸೂಕ್ತ ವೇತನ, ಸೇವೆ ಕಾಯಂಗೊಳಿಸುವಿಕೆ, ವಿಮಾ ಸೌಲಭ್ಯ ಸೇರಿದಂತೆ ಸೇವಾಭದ್ರತೆ ದೊರಕಿಸಿಕೊಡುವ ಕಾರ್ಯ ಜರುಗಬೇಕಾಗಿದೆ ಎಂದು ಕಾರ್ಮಿಕ ಹೋರಾಟಗಾರ, ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ ಆಗ್ರಹಿಸಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ಪೌರ ಕಾರ್ಮಿಕರ ದಿನಾಚರಣೆ’ಯಲ್ಲಿ ಪೌರ ಕಾರ್ಮಿಕರಿಗೆ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡುತ್ತಾ, ಕಸ, ಮಲ, ಮೂತ್ರ, ಚರಂಡಿಯ ಬಗ್ಗೆ ಹೇಸಿಗೆ ಪಡದೆ ಸ್ವಚ್ಛ ಮಾಡುವ, ಬೀದಿ ನಾಯಿಗಳು, ಹಂದಿಗಳು, ಅನಾಥ ಶವಗಳ, ಪಶು-ಪ್ರಾಣಿ, ಪಕ್ಷಿಗಳ ಸತ್ತರೆ ಅವುಗಳ ಸಾಗಾಟ ಮಾಡಿ, ನಿರ್ಮಲಗೊಳಿಸುವ, ರೋಗ ಬಾರದಂತೆ ಬ್ಲೀಚಿಂಗ್ ಪೌಡರ್ ಹಾಕಿ ಆರೋಗ್ಯಪೂರ್ಣ ಪರಿಸರವನ್ನು ನಿರ್ಮಿಸುವ ಶಿಲ್ಪಿಗಳು ಪೌರಕಾರ್ಮಿಕರಾಗಿದ್ದಾರೆ. ಪರಿಸರವನ್ನು ಹಸನಾಗಿಸುವ ಪೌರಕಾರ್ಮಿಕರಿಗೆ ಸೂಕ್ತ ಸೇವಾ ಭದ್ರತೆಯನ್ನು ಒದಗಿಸುವ ಮೂಲಕ ಅವರ ಬದುಕು ಹಸನಾಗಿಸುವುದು ಜವಬ್ದಾರಿಯುತ ಸಮಾಜ ಆದ್ಯ ಕರ್ತವ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಪೌರ ಕಾರ್ಮಿಕರಾದ ತಾರಾಚಂದ್ರ ರಾಠೋಡ್, ಸಿದ್ದಾರ್ಥ ಬಡದಾಳಕರ್, ನಾಗವೇಣಿ ಬಡದಾಳಕರ್, ಪಾರ್ವತಿ ಸುಗೂರ್ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಿಬ್ಬಂದಿಗಳಾದ ಪ್ರಿಯಾಂಕಾ ದೋಟಿಕೊಳ್ಳ, ಪಾಯಲ ಹಿಬಾರೆ, ಐಶ್ವರ್ಯ ಬಿರಾದಾರ, ಶೃತಿ ಸಿರೂರ್, ಲಕ್ಷ್ಮೀ ತಾರಾಪುರ, ಕೀರ್ತಿ ಎಂ.ಹಿರೇಮಠ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.