ಪೌರ ಕಾರ್ಮಿಕರಿಗೆ ಉಚಿತ ಆಹಾರ ಕಿಟ್ ವಿತರಣೆ

ತುಮಕೂರು, ನ. ೧೭- ಕೆರ್ರಿ ಇಂಗ್ರಿಡಿಯೆಂಟ್ಸ್ ಪ್ರೈ. ಲಿಮಿಟೆಡ್ ಸಿ.ಎಸ್.ಆರ್ ಚಟುವಟಿಕೆಯ ಅಡಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ೮೦೦ ಪೌರ ಕಾರ್ಮಿಕರು ಮತ್ತು ೨೫೦ ಅಲೆಮಾರಿಗಳು, ಬಡವರು ಸೇರಿದಂತೆ ಒಟ್ಟು ೧೦೫೦ ಜನರಿಗೆ ಉಚಿತ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಯಿತು.
ತುಮಕೂರು ಮಹಾನಗರ ಪಾಲಿಕೆಯ ಫ್ರಂಟ್‌ಲೈನ್ ವಾರಿಯರ್ಸ್ ಮತ್ತು ಎಲ್ಲಾ ಪೌರಕಾರ್ಮಿಕರಿಗೆ ಕಾರ್ಪೋರೇಟ್ ಸರ್ವೀಸ್ ರೆಸ್ಪಾನ್ಸಿಬಲಿಟಿ ಅಡಿಯಲ್ಲಿ ಬೆಂಗಳೂರಿನ ಕೆರ್ರಿ ಇಂಗ್ರಿಡಿಯಂಟ್ಸ್ ಪ್ರೈ ಲಿಮಿಟೆಡ್ ನವರು ತುಮಕೂರಿನ ಪೌರಕಾರ್ಮಿಕರನ್ನು ಪರಿಗಣಿಸಿ ಅವರಿಗೆ ೧೦೫೦ ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡಿದರು.
ಪಾಲಿಕೆ ಆಯುಕ್ತೆ ರೇಣುಕಾ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕೊರೊನಾದಂತಹ ಕಷ್ಟದ ಸಮಯದಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ ಎಲ್ಲ ಪೌರಕಾರ್ಮಿಕರಿಗೆ ನೆರವಾಗುವಂತಹ ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡುತ್ತಿರುವುದು ಪ್ರಶಂಸನೀಯ. ಅದೂ ಕೂಡ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ನೀಡಿರುವುದು ಎಲ್ಲರಲ್ಲೂ ಸಂತಸವನ್ನು ತಂದಿದೆ ಎಂದರು. ಎಲ್ಲ ಕಂಪೆನಿಗಳು ಇದೇ ತರಹದ ಕೆಲಸ ಮಾಡಿ ಸಮಾಜದಲ್ಲಿ ಅವಶ್ಯಕವಿರುವಂತವರನ್ನು ಗುರುತಿಸಿದರೆ ತುಂಬಾ ಸಹಕಾರಿಯಾಗಲಿದೆ ಎಂದರು.
ಕೆರ್ರೀ ಕಂಪೆನಿಯು ತುಂಬಾ ಅಚ್ಚುಕಟ್ಟಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹಾಗೂ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿ ಈ ಕಾರ್ಯವನ್ನು ನಡೆಸಿದೆ ಎಂದರು.
ಜಿಲ್ಲೆಯಾದ್ಯಂತ ವಾಸವಿರುವ ಸುಮಾರು ೧೦೦ಕ್ಕಿಂತ ಹೆಚ್ಚು ಅಲೆಮಾರಿ ಜನಾಂಗದವರ ಬದುಕು ಕಷ್ಟವಾಗಿರುವುದನ್ನು ಮನಗಂಡಿರುವ ಕೆರ್ರಿ ಕಂಪೆನಿಯು ಅಂತಹ ಜನರನ್ನು ಗುರುತಿಸಿ ಅವರಿಗೆ ಅವಶ್ಯಕವಿರುವ ಆಹಾರ ಧಾನ್ಯಗಳನ್ನು ನೀಡುತ್ತಿರುವ ಮಹತ್ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು.
ಈಗಾಗಲೇ ಬೆಂಗಳೂರು ಬಿಬಿಎಂಪಿ ನೌಕರರಿಗೆ ಹಲವಾರು ಕಿಟ್‌ಗಳನ್ನು ವಿತರಿಸಿರುವ ಕೆರ್ರಿ ಕಂಪೆನಿಯು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದೆ ಎಂದು ಹೇಳಿದರು.
ಯಾವ ಜನರಿಗೂ ಸಮಸ್ಯೆಯಾಗದಂತೆ ಮಾಸ್ಕ್ ಧರಿಸಿಕೊಂಡು ಬರುವಂತೆ ಸೂಚಿಸಿ ಮತ್ತು ೧೦೫೦ ಜನರನ್ನು ಬ್ಯಾಚ್‌ಗಳ ಮುಖಾಂತರ ಬರುವಂತೆ ತಯಾರಿ ಮಾಡಲಾಗಿತ್ತು ಮತ್ತು ಕಂಪೆನಿಯಿಂದ ಆಗಮಿಸಿದ್ದ ಎಲ್ಲಾ ಸ್ವಯಂ ಸೇವಕರಂತೆ ಕೆಲಸ ಮಾಡಿ ಎಲ್ಲವನ್ನೂ ನಿಭಾಯಿಸಿದ ತಂಡದ ಕೆಲಸವನ್ನು ಎಲ್ಲರೂ ಪ್ರಶಂಸಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿದೇಶಕ ಪ್ರೇಮನಾಥ್ ಮಾತನಾಡಿ, ಹಲವಾರು ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಡಿ ಗ್ರೂಪ್ ನೌಕರರಿಗೆ ಕೆಲವು ತಿಂಗಳುಗಳಿಂದ ಶಾಲೆಗಳು ತೆರೆಯದೆ ಅವರುಗಳಿಗೆ ವೇತನವಿಲ್ಲದೆ ಬಹಳ ತೊಂದರೆಗೊಳಗಾಗಿದ್ದರು. ಅಂತಹವರನ್ನು ಈ ಸಂಧರ್ಭದಲ್ಲಿ ಗುರುತಿಸಿರುವುದಕ್ಕಾಗಿ ಧನ್ಯವಾದ ತಿಳಿಸಿದರು.
ಈ ಯೋಜನೆಯು ಪೌರಕಾರ್ಮಿಕರ ಕೆಲಸಕ್ಕೆ ಸಂದ ಗೌರವವೇ ಸರಿ ಎಂದು ಅವರು ಹೇಳಿದರು.