ಪೌರಾಯುಕ್ತರಿಂದ ಗುಲಾಮಗಿರಿ, ಚಮಚಾಗಿರಿ ಕೆಲಸ – ಎನ್.ಮಹಾವೀರ


ರಾಯಚೂರು,ಮಾ.೨- ನಗರಸಭೆ ಮನಸ್ಸಿಗೆ ಬಂದಂತೆ ಆಡಳಿತವನ್ನು ನಡೆಸುತ್ತಿದ್ದಾರೆ.ಸಮಸ್ಯೆಗಳನ್ನು ಇತ್ಯರ್ಥಗೊಳಿಸದೆ ರೈತರಿಂದ, ವ್ಯಾಪರಸ್ಥರಿಂದ ಕರ ವಸೂಲಿ ಮಾಡುವ ಹರಾಜನ್ನು ಮಾಡುತ್ತಿರುವುದು ಖಂಡನೀಯ ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಮಹಾವೀರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಎಂ.ಈರಣ್ಣ ವೃತ್ತದಲ್ಲಿ ಒತ್ತಾಯಪೂರಕವಾಗಿ ವ್ಯಾಪಾರಸ್ಥರನ್ನು ಹಾಗೂ ರೈತರನ್ನು ವಾರ್ಡ್ ನಂಬರ್ ೧೩ರ ನಗರಸಭೆ ಸದಸ್ಯೆ ಪತಿ ರವೀಂದ್ರ ಜಲ್ದಾರ್ ಕೂಡಿಸಿದ್ದಾರೆ ಇದಕ್ಕೆ ನಗರಸಭೆ ಪೌರಾಯುಕ್ತ ಡಾ.ಗುರುಲಿಂಗಪ್ಪ ಅವರು ಬೆಂಬಲ ನೀಡಿ ಗುಲಾಮಗಿರಿ ಚಮಚಾಗಿರಿ ಕೆಲಸ ಮಾಡುತ್ತಿದ್ದಾರೆ ಹಾಗೂ ನಗರ ಶಾಸಕ ಶಿವರಾಜ ಪಾಟೀಲ್ ಕೂಡ ಕುಮ್ಮುಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ತರಕಾರಿ ಮಾರುಕಟ್ಟೆ ಹಿಂಭಾಗದಲ್ಲಿ, ಎಂ.ಈರಣ್ಣ ವೃತ್ತ, ಐ.ಡಿ.ಎಸ್.ಎಂ.ಟಿ. ಬಡಾವಣೆಯಲ್ಲಿ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಶುಲ್ಕ ವಸೂಲಿ ಮಾಡುವ ಹರಾಜು ಮಾಡುವ ಹರಾಜು ಪ್ರಕ್ರಿಯೆಗಿಂತ ಮುಂಚೆ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘದ ಪದಾಧಕಾರಿಗ ಜೊತೆ ಚರ್ಚಿಸಿ ವಿವಿಧ ಕಡೆ ವ್ಯಾಪಾರ ಮಾಡುತ್ತಿರುವ ತರಕಾರಿ ಮಾರಾಟಗಾರರನ್ನು ಹಾಗೂ ರೈತರನ್ನು ಮುಖ್ಯ ಮಾರುಕಟ್ಟೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ವಾರ್ಡ್ ನ ೧೨ ರ ನಗರಸಭೆ ಸದಸ್ಯರು ರಾಜೀನಾಮೆ ನೀಡಿದ ನಂತರ ವಾರ್ಡಿನಲ್ಲಿ ಸ್ವಚ್ಛತೆ, ಒಳಚರಂಡಿಗಳ ವ್ಯವಸ್ಥೆ,ವಿದ್ಯುತ್ ದೀಪಗಳ ವ್ಯವಸ್ಥೆ ಕಾರ್ಯಗಳ ಬಗ್ಗೆ ಯಾರು ಕೇಳುವವರೇ ಇಲ್ಲದಂತಾಗಿದೆ. ತರಕಾರಿ ಮಾರುಕಟ್ಟೆ ಹಿಂಭಾಗದಲ್ಲಿ ರೈತರಿಂದ ಹಾಗೂ ವ್ಯಾಪಾರಸ್ಥರಿಂದ ಕರ ವಸೂಲಿ ಮಾಡುವ ಗುತ್ತೇದಾರರಿಂದ ಯಾವುದಾದರೂ ರೈತರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾದರೆ ನಗರಸಭೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ಪೌರಾಯುಕ್ತರು ನೇರ ಹೊಣೆಯಾಗುತ್ತದೆ. ಗುತ್ತಿಗೆ ಪಡೆದ ಗುತ್ತೇದಾರರು ಹೆಚ್ಚಿನ ಕರ ವಸೂಲಿ ಮಾಡಿದ್ದಲ್ಲಿ ಅವರ ವಿರುದ್ಧ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಭುನಾಯಕ, ಬಸವರಾಜ,ಉದಯಕುಮಾರ,ರಿಜ್ವಾನ್ ಇದ್ದರು.