ಪೌರಾಡಳಿತ ಇಲಾಖೆ ಖಾಲಿ ಹುದ್ದೆ ಭರ್ತಿಗೆ ಕ್ರಮ

ಬೆಂಗಳೂರು, ಮಾ. ೨೩- ಪೌರಾಡಳಿತ ಇಲಾಖೆಯಲ್ಲಿ ೯೯೭೨ ಹುದ್ದೆಗಳು ಖಾಲಿ ಇದ್ದು, ಆದ್ಯತೆ ಆಧಾರದ ಮೇಲೆ ಅಗತ್ಯವಿರುವ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜು ವಿಧಾನಪರಿಷತ್‌ನಲ್ಲಿಂದು ಹೇಳಿದರು.
ಸದ್ಯ ಬಿ,ಸಿ ವೃಂದದ ಒಟ್ಟು ೫೩೦ ಹುದ್ದೆಗಳನ್ನು ನೇಮಕ ಮಾಡಲು ಮುಂದಾಗಿದ್ದು, ಕರ್ನಾಟಕ ಲೋಕಸೇವಾ ಆಯೋಗ ಈ ಪೈಕಿ ೧೦೯ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ೨೧೩೩ ಪೌರ ಕಾರ್ಮಿಕರನ್ನು ವಿಶೇಷ ನೇಮಕಾತಿ ಮೂಲಕ ಭರ್ತಿ ಮಾಡಲಾಗಿದೆ ಎಂದರು.
ಮುಂಬಡ್ತಿ ಕೋಟಾದಡಿ ಗ್ರೂಪ್ ಎ ವೃಂದದ ಹುದ್ದೆಗಳಲ್ಲಿ ಖಾಲಿಯಾಗುವ ಹುದ್ದೆಗಳನ್ನು ಸರ್ಕಾರದ ಹಂತದಲ್ಲಿ ಹಾಗೂ ಗ್ರೂಪ್ ಡಿ ಮತ್ತು ಸಿ ವೃಂದದ ಹುದ್ದೆಗಳಲ್ಲಿ ಖಾಲಿಯಾಗುವ ಹುದ್ದೆಗಳನ್ನು ಪೌರಾಡಳಿತ ನಿರ್ದೇಶನಾಲಯದ ಹಂತದಲ್ಲಿ ಕಾಲ ಕಾಲಕ್ಕೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಹಂತದಲ್ಲ ಎದ್ದು ನಿಂತ ಕೆ.ಸಿ. ಕೊಂಡಯ್ಯ ಅವರು, ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತೀರಿ ಎಂದರೆ ಸಚಿವರು ಬೇರೆಯೇ ಉತ್ತರ ಕೊಡುತ್ತಾರೆ ಎಂದರು.
ಆಗ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜಹೊರಟ್ಟಿ, ಸದಸ್ಯರು ಕೇಳಿರುವ ಪ್ರಶ್ನೆಯೇ ಬೇರೆ. ಸಚಿವರು ನೀಡುತ್ತಿರುವ ಉತ್ತರವೇ ಬೇಡ. ಗೊಂದಲ ಮಾಡಿಕೊಳ್ಳಬೇಡಿ. ಸರಿಯಾದ ಉತ್ತರ ನೀಡಿ ಎಂದು ಸಚಿವ ನಾಗರಾಜ್ ಅವರಿಗೆ ಸೂಚಿಸಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಭಾನಾಯಕ ಕೋಟಾ ಶ್ರೀನಿವಾಸಪೂಜಾರಿ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಹಾಗೂ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ಕುರಿತಂತೆ ಆರ್ಥಿಕ ಇಲಾಖೆ ಅನುಮತಿ ಪಡೆದು ಆನಂತರ ಭರ್ತಿ ಮಾಡಲಾಗುವುದು ಎಂದು ಹೇಳುವ ಮೂಲಕ ಸಚಿವರ ನೆರವಿಗೆ ಧಾವಿಸಿದರು.
ಬಳಿಕ ಸಭಾಪತಿ ಬಸವರಾಜಹೊರಟ್ಟಿ ಅವರು ಶೂನ್ಯ ವೇಳೆಗೆ ಅವಕಾಶ ಮಾಡಿಕೊಟ್ಟರು.
ಕೆ.ಸಿ. ಕೊಂಡಯ್ಯ, ಕೆ.ಪಿ. ಶ್ರೀಕಂಠೇಗೌಡ, ಯು.ಬಿ. ವೆಂಕಟೇಶ್, ಶ್ರೀಕಾಂತ್ ಗೊಟ್ನೆಕರ್, ಹನುಮಂತನಿರಾಣಿ, ಅರುಣ್ ಶಹಾಪೂರ, ಸಂದೇಶ್ ನಾಗರಾಜ್, ಪ್ರತಾಪಚಂದ್ರಶೆಟ್ಟಿ, ಎಸ್.ವಿ. ಸಂಕನೂರು, ಭಾರತಿಶೆಟ್ಟಿ, ಪ್ರಮುಖ ವಿಷಯ ಕುರಿತು ಸರ್ಕಾರದ ಗಮನ ಸೆಳೆದರು.
ಸಭಾನಾಯಕ ಕೋಟಾಶ್ರೀನಿವಾಸಪೂಜಾರಿ ಪ್ರತಿಕ್ರಿಯಿಸಿ, ಸಂಬಂಧಿಸಿದ ಸಚಿವರಿಂದ ಉತ್ತರ ನೀಡುವುದಾಗಿ ಹೇಳಿದರು.
ಸಂದೇಶ್ ನಾಗರಾಜ್ ಅವರು ವಿಷಯ ಪ್ರಸ್ತಾಪ ಮಾಡುತ್ತಿದ್ದ ಸಮಯದಲ್ಲಿ ಬೋಜೇಗೌಡ ಮತ್ತು ರಮೇಶ್‌ಗೌಡ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರಿಗೂ ಸಭಾಪತಿಗಳು ಸುಮ್ಮನಿರುವಂತೆ ಸೂಚನೆ ನೀಡಿದರು.
ಇದೇ ವೇಳೆ ವಿಷಯ ಪ್ರಸ್ತಾಪ ಮಾಡುತ್ತಿದ್ದ ಸಂದೇಶ್ ನಾಗರಾಜ್ ಅವರು, ಬಳಸಿದ ಪದ ಕೆಲ ಕಾಲ ಸದನದ ಸದಸ್ಯರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.
ಎಸ್.ವಿ. ಸಂಕನೂರು ಅವರು ಪ್ರಸ್ತಾಪ ಮಾಡಿದ ವಿಷಯಕ್ಕೆ ಪ್ರತಿಕ್ರಿಯಿಸಿದ ವಾರ್ತಾ ಸಚಿವ ಸಿ.ಸಿ. ಪಾಟೀಲ್, ಆಡಳಿತ ಪಕ್ಷದ ಸದಸ್ಯರಾಗಿದ್ದುಕೊಂಡು ಸರ್ಕಾರಕ್ಕೆ ಮುಜುಗರ ತರುವ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ ಎಂದು ಸಲಹೆ ಮಾಡಿದರು.