ಪೌರಸೇವಾ ನೌಕರರ ವೇತನ ನೀಡಲು ತಾರತಮ್ಯ ಸಲ್ಲದು: ಸುಲೇಕರ ಆಕ್ರೋಶ

ಅಫಜಲಪುರ: ಮಾ.22:ಜಿಲ್ಲೆಯ ಅಫಜಲಪುರ, ಆಳಂದ, ಚಿತ್ತಾಪೂರ, ಸೇಡಂ, ಶಹಾಬಾದ, ಚಿಂಚೋಳಿ ಪುರಸಭೆಗಳಲ್ಲಿ ಕ್ಷೇಮಾಭಿವೃದ್ಧಿ ಅಡಿಯಲ್ಲಿ ಕಾರ್ಯನಿರ್ವಹಿಸುವ ನೌಕರರ ವೇತನ ಎಂಟು ತಿಂಗಳಿಂದ ಮಾಡದೇ ಇರುವುದರಿಂದ ಸಂಕಷ್ಟ ಎದುರಿಸುವಂತಾಗಿದೆ ಎಂದು ಜಿಲ್ಲಾ ಪೌರ ನೌಕರರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗುರುಲಿಂಗಪ್ಪ ಸುಲೇಕರ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇಮಾಭಿವೃದ್ಧಿ ಅಡಿಯಲ್ಲಿ ಕೆಲಸ ಮಾಡುವ ಎಸ್‍ಡಿಎ ಬಿಲ್ ಕಲೆಕ್ಟರ್, ಪಂಪ ಆಪರೇಟರ್, ಪೌರಕಾರ್ಮಿಕರು ನಿಯತ್ತಿನಿಂದ ದುಡಿಯುತ್ತಾರೆ. ಮುಖ್ಯಾಧಿಕಾರಿಗಳ ಆದೇಶದ ಮೇರೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳು ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳ ಯಶಸ್ವಿಗಾಗಿ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಾರೆ. ಆದರೂ ಸಂಬಂಧಪಟ್ಟ ತಾಲೂಕುಗಳಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಈ ಸಿಬ್ಬಂದಿಗೆ ಪ್ರತಿತಿಂಗಳು ವೇತನ ನೀಡದೆ ಸತಾಯಿಸುತ್ತಾರೆ. ಈಗಾಗಲೇ 09 ತಿಂಗಳು ಕಳೇದರೂ ಇನ್ನು ವೇತನ ನೀಡಿಲ್ಲ. ಇದರಿಂದ ಈ ನೌಕರರ ಬದುಕು ಬೀದಿಗೆ ಬಿದ್ದಿದೆ. ಜಿಲ್ಲಾಧಿಕಾರಿಗಳು ಈ ಕೂಡಲೇ ಪರಿಶೀಲಿಸಿ ವೇತನ ಪಾವತಿ ಮಾಡುವಂತೆ ಆಯಾ ಪುರಸಭೆ ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಬೇಕೆಂದು ಪೌರ ನೌಕರರ ಸೇವಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಲಿಂಗಪ್ಪ ಸುಲೇಕರ ಮನವಿ ಮಾಡಿದರು.

ರಾಷ್ಟ್ರೀಯ ವಿಪತ್ತು & ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿರುವ ಕ್ಷೇಮಾಭಿವೃದ್ಧಿ ನೌಕರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುವುದು ಬಿಡುವಂತೆ ಆಗ್ರಹಪಡಿಸಿದ ಅವರು ಕಳೆದ 2012ರಲ್ಲಿ ಪುರಸಭೆ, ಪಟ್ಟಣ ಪಂಚಾಯತಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಮತ್ತು ಅವರ ಸೇವೆಯನ್ನು ಪರಿಗಣಿಸದೆ ಹಾಗೂ ಇತ್ತ ದಿನಗೂಲಿ ಎಂದು ನಮೂದಿಸದೇ ಕ್ಷೇಮಾಭಿವೃದ್ಧಿ ಎನ್ನುವ ತೂತು ಬಿದ್ದ ಹಡುಗಿನಂತೆ ಈ ನೌಕರರ ಬದುಕಾಗಿದೆ. ನಡು ನೀರಿನಲ್ಲಿ ಬಿಟ್ಟರೆ ಹಡುಗು ಮುಳುಗದೆ ಇರಲಾರದು ಹಾಗಾಗಿದೆ ಈ ನೌಕರರ ಪರಿಸ್ಥಿತಿ ಎಂದು ಹೇಳಿದರು.