ಪೌರತ್ವ ತರಬೇತಿ ಶಿಬಿರ 

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಏ.೬: ವಿದ್ಯೆ ಕಲಿಸುವ ಪ್ರಶಿಕ್ಷಣಾರ್ಥಿಗಳಿಗೆ ರಂಗಭೂಮಿಯ ಆಯಾಮಗಳ ಬಗ್ಗೆ ಅರಿತಿರಬೇಕು. ದೇಹದ ನಿಲುವು, ಮಾತಿನ ಏರಿಳಿತ, ಪಾಠೋಪಕರಣ ಹಾಗೂ ಪೀಠೋಪಕರಣಗಳ ಬಳಕೆ, ಸತ್ವಪೂರ್ಣವಾದ ಅಭಿವ್ಯಕ್ತಿಯನ್ನು ಕರಗತ ಮಾಡಿಕೊಳ್ಳಬೇಕು. ರಂಗಭೂಮಿಯ ಹಲವು ಕಸರತ್ತುಗಳಿಂದ ಕೂಡಿದ ಬೋಧನೆ ಪರಿಣಾಮಕಾರಿಯಾಗಿರುತ್ತದೆ ಎಂದು ರಂಗ ನಿರ್ದೇಶಕ ಕೆಪಿಎಂ.ಗಣೇಶಯ್ಯ ತಿಳಿಸಿದರು.ನಗರದ ಸಮೀಪವಿರುವ ಮಲ್ಲಾಪುರ ಗ್ರಾಮದಲ್ಲಿ ಬಾಪೂಜಿ ಸಮೂಹ ಸಂಸ್ಥೆಯ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಬಾಪೂಜಿ ಬಿ.ಇಡಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರ -2024 ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಮಾಜಕ್ಕೆ ಮತ್ತು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡುವಲ್ಲಿ ವಿದ್ಯಾರ್ಥಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು. ಸ್ಥಾಯೀಭಾವಗಳಾದ ರತಿ, ವಿನೋದ, ಶೋಕ, ಕ್ರೋಧ, ಉತ್ಸಾಹ, ಭಯ, ಜಿಗುಪ್ಸೆ, ಆಶ್ಚರ್ಯ, ಶಾಂತಿ ಇವುಗಳಿಗೆ ಅನುಕ್ರಮವಾಗಿ ಶೃಂಗಾರ, ಹಾಸ್ಯ, ಕರುಣಾ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತ ಹೀಗೆ ನವರಸಗಳು ಹುಟ್ಟುತ್ತವೆ. ಈ ಕುರಿತು ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಪಡೆದುಕೊಂಡು ಪಾಠಬೋಧನೆಗೆ ಪ್ರಶಿಕ್ಷಣಾರ್ಥಿಗಳು ಮಾನಸಿಕ ಮತ್ತು ದೈಹಿಕವಾಗಿ ಶ್ರಮವಹಿಸಬೇಕಾಗುತ್ತದೆ. ಕಲಿಕೆಯ ಹಂತದಲ್ಲೇ ರಂಗಭೂಮಿಯ ಕುರಿತು ಅರಿವು ಮೂಡಿಸುವ ಅಗತ್ಯತೆಗೆ ರಂಗಶಿಕ್ಷಕರ ಅವಶ್ಯಕತೆಯಿದೆ ಎಂದರು.