ಪೌರಕಾರ್ಮಿಕರ ಸೇವೆ ಕಾಯಂಗೊಳಿಸಿ, ಸೇವಾಭದ್ರತೆ ದೊರೆಯಲಿ

ಕಲಬುರಗಿ,ಸೆ.23: ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯವನ್ನು ಮಾಡುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಕರೋನಾದಂತಹ ಸಂದಿಗ್ದ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಮಾಡಿದ್ದಾರೆ. ದಿನಗೂಲಿಯಾಗಿ ಕಳೆದ ಅನೆಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿ, ಅವರಿಗೆ ಸೇವಾಭದ್ರತೆಯನ್ನು ದೊರಕಿಸಿಕೊಡುವ ಕಾರ್ಯ ಜರುಗಬೇಕಾಗಿದೆ ಎಂದು ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ನಗರದ ಜಗತ್ ವೃತ್ತದ ಬಸವೇಶ್ವರ ಪುತ್ತಳಿ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ಶುಕ್ರವಾರ ಏರ್ಪಡಿಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ : ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಉಪಹಾರ ವಿತರಣೆಯಲ್ಲಿ ಅವರು ಮಾತನಾಡುತ್ತಿದ್ದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ಪೌರ ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣಬಾರದು. ಪೌರ ಕಾರ್ಮಿಕರು ಕೂಡಾ ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶೃದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೌಡ್ಡ ಕಾರ್ಯವಲ್ಲ. ಪೌರ ಕಾರ್ಮಿಕ ಅಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು, ಕರೋನಾದ ಸಂದರ್ಭದಲ್ಲಿ ನೂರಾರು ಜನ ಪೌರ ಕಾರ್ಮಿಕರಿಗೆ ಆಹಾರ, ಬಟ್ಟೆ, ಮಾಸ್ಕ್, ಸಾನಿಟೈಸರ್‍ಗಳನ್ನು ನೀಡುವ ಮೂಲಕ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ನಿಮ್ಮ ಜೊತೆ ನಾವಿದ್ದೇವೆ ಎಂದು ಪ್ರೋತ್ಸಾಹಿಸುವ ಕಾರ್ಯ ಮಾಡಿ, ಮಾನಸಿಕ ಸ್ಥೈರ್ಯ ತುಂಬಿದ್ದು ಸಮಾಜಕ್ಕೆ ಮಾದರಿ ಕೆಲಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ದೇವೇಂದ್ರಪ್ಪ ಗಣಮುಖಿ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ನೈರ್ಮಲ್ಯ ನಿರೀಕ್ಷಣಾಧಿಕಾರಿಗಳಾದ ರಾಜು ಕಟ್ಟಿಮನಿ, ಧನರಾಜ ಹೆಡಗಾಪುರೆ ಸೇರಿದಂತೆ ಮತ್ತಿತರರಿದ್ದರು.
ಮಹಾನಗರ ಪಾಲಿಕೆ ಪೌರ ಕಾರ್ಮಿಕರಾದ ಜಗದೇವಿ ಬಿ.ಚಿತ್ತಾಪುರೆ, ಮಮತಾ ಎ.ನೆಲ್ಲೂರೆ, ನಿರ್ಮಲಾ ಎಸ್.ಬೆಳಗೇರಿ, ಸುರೇಖಾ ಎಂ.ಬನಸೊಡೆ, ಸುನೀತಾ ಆರ್.ಮಡಗೇರಿ, ಯಲ್ಲಪ್ಪ ಸಿ.ಶಿವಲಾಲ್, ದುರ್ಗಪ್ಪ ಕೋರಗಂಟಿ, ಉದಯಕುಮಾರ ವಂಟಿ ಅವರಿಗೆ ಪುಷ್ಪವೃಷ್ಠಿಗೈಯುವ ಮೂಲಕ ಸನ್ಮಾನಿಸಲಾಯಿತು. ನಂತರ ಉಪಹಾರ ವಿತರಿಸಲಾಯಿತು. ಈ ಕಾರ್ಯಕ್ಕೆ ಪೌರ ಕಾರ್ಮಿಕರು, ಮಹಾನಗರ ಪಾಲಿಕೆ ಅಧಿಕಾರಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಕಾಯಕ ಜೀವಿಗಳಿಗೆ ಪ್ರಾಧಾನ್ಯತೆ ನೀಡಿದ ಬಸವೇಶ್ವರ ಪುತ್ತಳಿಗೆ ಕಾರ್ಯಕ್ರಮಕ್ಕೂ ಮುನ್ನ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು. ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಲು ಶೀಘ್ರದಲ್ಲಿ ಕ್ರಮ ಕೈಗೂಳ್ಳಲಾಗುವುದು ಎಂದು ಈಚೆಗೆ ತಿಳಿಸಿದ ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.