ಪೌರಕಾರ್ಮಿಕರ ಸೇವೆ ಅನನ್ಯ -ಶಿವಣ್ಣ

ಆನೇಕಲ್.ಜ.೭-ಕೊರೊನಾ ಕಾಲದಲ್ಲೂ ಊರಿನ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿರುವ ಪೌರಕಾರ್ಮಿಕರ ಸೇವೆ ಅನನ್ಯ. ಅವರು ನಿಜವಾದ ಅರ್ಥದಲ್ಲಿ ಕೊರೊನಾ ವಾರಿಯರ್ಸ್ ಎಂದು ಶಾಸಕ ಬಿ.ಶಿವಣ್ಣ ರವರು ತಿಳಿಸಿದರು.
ಅವರು ತಾಲ್ಲೂಕಿನ ಹೆಬ್ಬಗೋಡಿ ಸರ್ಕಾರಿ ಶಾಲಾ ಆವರಣಲ್ಲಿ ಹೆಬ್ಬಗೋಡಿ ನಗರ ಸಭೆ ಹಾಗೂ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಸಹಯೋಗದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೊರೊನಾ ಕಾರಣಕ್ಕೆ ಹಲವು ಇಲಾಖೆಗಳ ನೌಕರರು ಮನೆಯಿಂದ ಹೊರಬರಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲೂ ಪೌರಕಾರ್ಮಿಕರು ತಪ್ಪದೆ ಕೆಲಸ ಮಾಡಿದ್ದಾರೆ ಎನ್ನುವುದನ್ನು ಸಮಾಜ ಗುರುತಿಸಬೇಕಿದೆ’ ಎಂದರು. ಸಮಾಜ ನಮಗೇನು ಮಾಡಿತು ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಮಾಡಿದೆವು ಎನ್ನುವುದು ಮುಖ್ಯ. ಬರುವ ದಿನಗಳಲ್ಲಿ ಕೊರೊನಾ ಕರಗಿ, ಎಲ್ಲರ ಬಾಳಲ್ಲಿ ಹೊಸಬೆಳಕು ಬರಲಿ ಎಂದು ಹೇಳಿದರು.
ನಗರ ಸಭೆ ಪೌರಾಯುಕ್ತ ಚನ್ನರಾಯಪ್ಪ ಮಾತನಾಡಿ ಕೋವಿಡ್-೧೯ಕ್ಕೆ ಎಲ್ಲರೂ ಹೆದರಿ ಮನೆ ಸೇರಿದ ಸಂದರ್ಭದಲ್ಲಿ ರೋಗಿಗಳನ್ನು ಉಳಿಸಲುಶ್ರಮಿಸಿದ ಪೌರ ಕಾರ್ಮಿಕರೇ ನಿಜವಾದ ಕೊರೊನಾ ಸೈನಿಕರು. ಕೊರೊನಾ ಕಠಿಣ ಸಂದರ್ಭದಲ್ಲಿ ಪೌರ ಕಾರ್ಮಿಕರು ನಾವಿರುವುದೇ ನಿಮ್ಮ ಸೇವೆ ಮಾಡಲು ಎಂದು ತಮ್ಮ ಆರೋಗ್ಯ ಲೆಕ್ಕಿಸದೆ ಮನೆ ಮನೆ ಮತ್ತು ನಗರದ ತ್ಯಾಜ್ಯ ತೆಗೆದು ರೋಗಗಳು ಹರಡದಂತೆ ಸೇವೆ ಮಾಡುತ್ತಿರುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಮುಖ್ಯವಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಕಣ್ಣಿನ ಆರೋಗ್ಯವನ್ನು ಪ್ರತಿ ೬ ತಿಂಗಳಿಗೊಮ್ಮೆ ಕಡ್ಡಾಯವಾಗಿ ಪರೀಕ್ಷಿಸಿಕೊಳ್ಳಿ ಎಂದು ಪೌರ ಕಾರ್ಮಿಕರಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಸಂಘದ ಅಧ್ಯಕ್ಷ ಸಿ.ರಾಜಪ್ಪ ಮಾತನಾಡಿ ಪೌರಕಾರ್ಮಿಕರ ದಿನಾಚರಣೆಯನ್ನು ಮೆರವಣಿಗೆಯ ಮೂಲಕ ಹಬ್ಬದಂತೆ ಆಚರಿಸಲಾಗಿದೆ. ಸದಾ ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಯಾವತ್ತೂ ಸಮಾಜದ ಮುಖ್ಯವಾಹಿನಿಗೆ ಬರಲು ಬಯಸುವುದಿಲ್ಲ. ಅವರನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಹೆಬ್ಬಗೋಡಿ ನಗರ ಸಭೆ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷ ಮುನಿಯಲ್ಲಪ್ಪ ಮತ್ತು ಹೆಬ್ಬಗೋಡಿ ನಗರ ಸಭೆ ಸದಸ್ಯರು, ಸಿಬ್ಬಂದಿ ವರ್ಗ, ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.