ಪೌರಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ : ಮೇಯರ್

ಶಿವಮೊಗ್ಗ, ಸೆ. 24:  ರೈತ, ಯೋಧ ಮತ್ತು ಪೌರ ಕಾರ್ಮಿಕ ಇವರು ನಮ್ಮ ದೇಶದ ಆಸ್ತಿ. ಈ ಆಸ್ತಿಯನ್ನು ಸಂರಕ್ಷಿಸಿ ಬೆಳೆಸುವ ಹೊಣೆ ನಮ್ಮೆಲ್ಲರದಾಗಿದ್ದು, ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಪಾಲಿಕೆ ಮಹಾಪೌರರಾದ ಸುನೀತಾ ಎಸ್ ಅಣ್ಣಪ್ಪ ತಿಳಿಸಿದರು.ಮಹಾನಗರಪಾಲಿಕೆ ವತಿಯಿಂದ  ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ-2021 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಸೇವೆ ನಮ್ಮೆಲ್ಲರಿಗೂ ಅತ್ಯಗತ್ಯವಾಗಿದ್ದು ಇವರ ಅಭ್ಯುದಯಕ್ಕಾಗಿ ನಾವೂ ಕೂಡ ಶ್ರಮಿಸಬೇಕು. ಸರ್ಕಾರ ಪೌರಕಾರ್ಮಿಕರು ಗೌರವಯುತವಾಗಿ ಬದುಕಲು ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ನೀಡಲಾಗುತ್ತಿದ್ದ ಗೌರವಧನ ರೂ.3500 ನ್ನು ನಿನ್ನೆ ರೂ.7000 ಕ್ಕೆ ಏರಿಸಲಾಗಿದೆ. ಇದಕ್ಕೆ ಸರ್ಕಾರವನ್ನು ಹಾಗೂ ಪೌರಕಾರ್ಮಿಕರಿಗೆ ಅಭಿನಂದಿಸುತ್ತೇನೆ.

    ತಾಳಿ ಭಾಗ್ಯ ಯೋಜನೆಯಡಿ ನೀಡುವ ರೂ.50,000 ಸಂಕಷ್ಟದಲ್ಲಿರುವ ಪೌರಕಾರ್ಮಿಕರ ಕುಟುಂಬದವರ ಮದುವೆಗೆ ಪಾಲಿಕೆಯ ಒಂದು ಉಡುಗೊರೆಯಾಗಿದೆ. ಹಾಗೆಯೇ ಕಾರ್ಮಿಕರ ಸಮಾರಂಭಗಳಿಗೆಂದೇ ಪ್ರತ್ಯೇಕ ಭವನ ಬೇಕೆಂದು ರೂ.4 ಕೋಟಿ ವೆಚ್ಚದಲ್ಲಿ ಸಮುದಾಯ ಭವನದ ಕಾರ್ಯ ಪ್ರಗತಿಯಲ್ಲಿದೆ. ಹಾಗೂ ಕಾರ್ಮಿಕರ ಆರೋಗ್ಯ ಅತಿ ಮುಖ್ಯವಾಗಿದ್ದು ನಿಯಮಿತವಾಗಿ ಆರೋಗ್ಯ ಪರೀಕ್ಷೆ ಶಿಬಿರಗಳನ್ನು ಮಾಡಲಾಗುತ್ತಿದೆ. ಬರುವ ಅಕ್ಟೋಬರ್ 10 ರೊಳಗೆ ಎಲ್ಲ ಪೌರಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ ನಡೆಸುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
ಪಾಲಿಕೆ ಆಯುಕ್ತ ಚಿದಾನಂದ ಎಸ್.ವಟಾರೆ ಮಾತನಾಡಿ, ಪೌರ ಕಾರ್ಮಿಕರು ಉತ್ತಮವಾಗಿ ಜೀವನ ಸಾಗಿಸಲು ಪಾಲಿಕೆ ವತಿಯಿಂದ ಅನೇಕ ಯೋಜನೆಗಳು, ಸೌಲಭ್ಯಗಳನ್ನು ನೀಡಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ 168 ಕಾರ್ಮಿಕರಿಗೆ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. 
22 ಕಾರ್ಮಿಕರಿಗೆ ಬಡ್ತಿ ಆಗಿದೆ. 2018 ರಲ್ಲಿ 38 ಕಾರ್ಮಿಕರ ನೌಕರಿ ಖಾಯಂ ಗೊಳಿಸಲಾಗಿದೆ. ಪಿಎಫ್, ಇಎಸ್‍ಐ, ಎಸ್‍ಬಿಐ ಪಾಲಿಸಿ, 2016 ರಿಂದ ತಾಳಿ ಭಾಗ್ಯ ಯೋಜನೆ, ವೈದ್ಯಕೀಯ ಪರೀಕ್ಷೆ ಸೌಲಭ್ಯ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.ಕರ್ನಾಟಕ ರಾಜ್ಯ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪೌರಕಾರ್ಮಿಕರ ನೌಕರಿ ಖಾಯಂ, ಏಕ ರೀತಿಯ ವೇತನ ಸೇರಿದಂತೆ ವಿವಿಧ 11 ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯನ್ನು ಮಹಾಪೌರರಿಗೆ ಸಲ್ಲಿಸಿದರು.