ಪೌರಕಾರ್ಮಿಕರ ನೆಮ್ಮದಿ ಬದುಕಿಗೆ ಸೂರು ಒದಗಿಸಿ

ವಿಜಯಪುರ,ಸೆ೨೪:ಸದಾಕಾಲ ಪಟ್ಟಣವನ್ನು ಸ್ವಚ್ಛತವಾಗಿಟ್ಟುಕೊಳ್ಳುವಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರು ನೆಮ್ಮದಿಯಿಂದ ಬಾಳಬೇಕೆಂದರೆ ಅವರಿಗೆ ಸ್ವಂತ ಸೂರು ಅವಶ್ಯಕವಾಗಿದ್ದು ಪುರಸಭೆ ವತಿಯಿಂದ ಅವರಿಗೆ ಕನಿಷ್ಠ ೨೦ ೩೦ ಅಡಿಗಳ ನಿವೇಶನಗಳನ್ನು ನೀಡುವ ಮೂಲಕ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡುವಂತಹ ಕೆಲಸ ಆಗಬೇಕೆಂದು ಪೌರಕಾರ್ಮಿಕ ಸಂಘದ ಮೇಸ್ತ್ರಿ ನಾಗರಾಜು ಪುರಸಭಾ ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿಗಳಿಗೆ ಒತ್ತಾಯಿಸಿದರು.
ಶನಿವಾರದಂದು ಪಟ್ಟಣದ ಶಹರಿ ರೋಜಗಾರ್ ಯೋಜನಾ ಕಟ್ಟಡದಲ್ಲಿ ಪುರ ಸಭೆ ವತಿಯಿಂದ ಏರ್ಪಡಿಸಲಾಗಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ನಿವೃತ್ತ ರಾಗಲಿರುವ ಮೇಸ್ತ್ರಿ ನಾಗರಾಜುರವರು ಪುರಸಭೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ದಿನನಿತ್ಯವು ಪಟ್ಟಣದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣದ ರೂವಾರಿಗಳು ಎಂದು ಪುರಸಭಾ ಅಧ್ಯಕ್ಷೆ ವಿiಲ ಬಸವರಾಜ್ ತಿಳಿಸಿದರು.
ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣಬಾರದು. ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೊಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಗೌರವಿಸುವುದು ನಮ್ಮ ಕಾರ್ಯವಾಗಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಸಂತೋಷ ಮಾತನಾಡಿ,ಸುಂದರ ಪಟ್ಟಣ ಹಾಗೂ ಜನರ ಆರೋಗ್ಯ ಕಾಪಾಡುವ ಮೊದಲ ವೈದ್ಯ ಎಂದರೆ ಅದು ಪೌರ ಕಾರ್ಮಿಕರು. ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸುವ ಜೊತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪುರಸಭಾವತಿಯಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು. ಈ ಸಂಧರ್ಭದಲ್ಲಿ ಪೌರಕಾರ್ಮಿಕರು ಗಳಿಗೆ ಸಮವಸ್ತ್ರಗಳನ್ನು ಸಿಹಿ ಪ್ಯಾಕೆಟ್‌ಗಳನ್ನು ವಿತರಿಸಿದರು.

ಪ್ರತಿವರ್ಷ ಪೌರಕಾರ್ಮಿಕರ ದಿನಾಚರಣೆಯು ಹಬ್ಬದ ರೀತಿಯಲ್ಲಿ ಪಟ್ಟಣದಲ್ಲಿ ಅದ್ದೂರಿಯಿಂದ ಆಚರಿಸುತ್ತಿದ್ದು ಈ ಬಾರಿ ಯಾವುದೇ ಅದ್ದೂರಿಯಾಗಿ ಆಚರಣೆ ಮಾಡದೇ ಇರುವುದರಿಂದ ಕೆಲ ಪೌರ ಕಾರ್ಮಿಕರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಪುರಸಭಾ ಸದಸ್ಯರಾದ ರಾಜಣ್ಣ, ನಂದಕುಮಾರ್, ಹನೀಪುಲ್ಲ, ರವಿಕುಮಾರ್, ನಾರಾಯಸ್ವಾಮಿ, ರಾಮು, ಶ್ರೀರಾಮಪ್ಪ, ಬೈರೇಗೌಡ, ಶಿಲ್ಪ ಆಜಿತ್ ಕುಮಾರ್, ಪುರಸಭಾ ಇಂಜಿನಿಯರ್‌ಗಳಾದ ಶೇಕರ್, ವೆಂಕಟೇಶ್,ಕಂದಾಯಾಧಿಕಾರಿಗಳಾದ ಚಂದ್ರು,,ತ್ಯಾಗರಾಜ್, ಹಾಗೂ ಪುರಸಭಾ ಸಿಬ್ಬಂದಿ, ಪೌರ ಕಾರ್ಮಿಕರು ಹಾಜರಿದ್ದರು.