ಪೌರಕಾರ್ಮಿಕರಿಗೆ ಮೂಲಭೂತ ಸವಲತ್ತು ನೀಡಲು ಸಿಎಂಗೆ ಮನವಿ

ಕೋಲಾರ,ಸೆ.೨೫- ಕೋಲಾರ ನಗರಸಭೆಯ ‘ಸಿ’ ಗ್ರೂಪ್ ಪೌರಕಾರ್ಮಿಕ ಸಿಬ್ಬಂದಿಗೆ ಮೂಲಭೂತ ಸವಲತ್ತುಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರನ್ನು ಸಾಮಾಜಿಕ ಕಾರ್ಯಕರ್ತ ಗೌರಿಪೇಟೆಯ ಕೆ.ಎನ್.ರವೀಂದ್ರನಾಥ್‌ರವರು ಒತ್ತಾಯಿಸಿದ್ದಾರೆ.
ಕೋಲಾರ ನಗರದ ಸ್ವಚ್ಚತೆಯನ್ನು ಕಾಪಾಡುವಲ್ಲಿ ಶ್ರಮಿಸುವ, ಕಸವಿಲೇವಾರಿ ಮಾಡುವ, ಒಳಚರಂಡಿ ಸ್ವಚ್ಚತೆ ಕೆಲಸವನ್ನು ನಿರ್ವಹಿಸುವ, ನೀರು ಸರಬರಾಜು ಮಾಡುವ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಇವರುಗಳ ಬದುಕು ಒದ್ದೆಬಟ್ಟೆಯಾಗಿದ್ದು, ಅತಂತ್ರ ಬದುಕನ್ನು ನಡೆಸಬೇಕಾಗಿದೆ ಎಂದಿದ್ದಾರೆ.
ಪೌರಕಾರ್ಮಿಕರಿಗೆ ಕೆಲಸ ಮಾಡಲು ಸುರಕ್ಷಿತ ಸಲಕರಣೆಗಳಾದ ಬೂಟು, ಹ್ಯಾಂಡ್ ಗ್ಲವ್ಸ್‌ಗಳು, ಮುಖ ಕವಚ, ಸ್ಯಾನಿಟೈಸರ್‌ಗಳನ್ನು ನಿಗದಿತ ಪ್ರಮಾಣದಲ್ಲಿ ವಿತರಿಸಬೇಕು. ಇವರು ಕೆಲಸ ನಿರ್ವಹಿಸುಲು ಹೋಗುವ ಪ್ರದೇಶಗಳಿಗೆ ನಗರಸಭೆಯ ಸ್ಥಳದಿಂದ ಪಿಕಪ್ ಮತ್ತು ಡ್ರಾಪ್‌ಗೆ ವಾಹನದ ವ್ಯವಸ್ಥೆ ಮಾಡಬೇಕು. ಇವರುಗಳಿಗೆ ಬೆಳಿಗ್ಗಿನ ಮತ್ತು ಮಧ್ಯಾಹ್ನದ ಉಪಹಾರ ಊಟದ ಜೊತೆಗೆ ಮೊಟ್ಟೆ, ಹಾಲಿನಂತೆ ಪೌಷ್ಠಿಕಾಂಶದ ಆಹಾರ ನೀಡಬೇಕೆಂದರು.