ಪೌರಕಾರ್ಮಿಕರಿಗೆ ಒದಗಿಸಲಾಗುವ ಸೌಲಭ್ಯಗಳ ಕುರಿತು ಅರಿವು ಅಭಿಯಾನಕ್ಕೆ ಕೋಟೆ ಸೂಚನೆ

ವಿಜಯಪುರ:ಫೆ.25: ಪೌರಕಾರ್ಮಿಕರ ಪುನರ್ವಸತಿಗಾಗಿ ಸರ್ಕಾರ ರೂಪಿಸಿರುವ ನೀತಿ-ನಿಯಮಗಳ ಅರಿವು ಮೂಡಿಸಿ, ಪೌರಕಾರ್ಮಿಕರಿಗೆ ನೀಡುವ ಅಗತ್ಯ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಪಿಎಫ್, ಇಎಸ್‍ಐ ಹಾಗೂ ಆರೋಗ್ಯದ ಕುರಿತು ಪೌರಕಾರ್ಮಿಕರಿಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪೌರ ಕಾರ್ಮಿಕರು ನಮ್ಮೆಲ್ಲರ ಆರೋಗ್ಯ ರಕ್ಷಕರು. ಅವರಿಗೆ ಕೆಲಸದ ಸಮಯದಲ್ಲಿ ಸರಿಯಾದ ಗುಣಮಟ್ಟದ ಪರಿಕರಗಳನ್ನು ಒದಗಿಸಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ಸಕಾಲದಲ್ಲಿ ವೇತನ ಪಾವತಿ ಹಾಗೂ ಪಿಎಫ್. ಇಎಸ್‍ಐ ಕಡಿತವಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮ್ಯಾನುವೆಲ್ ಸ್ಕ್ಯಾವೆಂಜರ್ ಕಾಯ್ದೆ -2013ರನ್ವಯ ನಿಷೇಧಿಸಲಾಗಿದ್ದು, ನಿಯಮವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಮ್ಯಾನುವೆಲ್ ಸ್ಕ್ಯಾವೆಂಜರ್ ಪ್ರಕರಣಗಳು ನಡೆಯದಂತೆ ಜಿಲ್ಲೆಯ ತಹಶೀಲ್ದಾರಗಳು ಗಮನ ಹರಿಸಬೇಕು. ಆಯೋಗಕ್ಕೆ ನ್ಯಾಯಾಧೀಶರ ಅಧಿಕಾರ ಸಹ ಇದ್ದು, ದಂಡದ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಅಧಿಕಾರಿ ಆಯೋಗಕ್ಕೆ ಇದೆ ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 25 ಬಸ್ ನಿಲ್ದಾಣಗಳಲ್ಲಿ 34 ಜನ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಈ ಕಾರ್ಮಿಕರಿಗೆ ನಿಯಮಾನುಸಾರ ಕನಿಷ್ಠ ವೇತನ, ಸಕಾಲ ಪಾವತಿಯಾಗಬೇಕು. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ಮೊದಲು ಕಾರ್ಯನಿರ್ವಹಿಸಿದ ಪೌರಕಾರ್ಮಿಕರಿಗೆ ಆದ್ಯತೆ ನೀಡಿ ನೇಮಕಾತಿ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಿಯಮಿತವಾಗಿ ನಡೆಸಬೇಕು. ಬಿ.ಪಿ.ಶುಗರ್, ಅಲ್ಪಾವಧಿ ಮತ್ತು ದೀರ್ಘಾವಧಿ ಕಾಯಿಲೆಗಳ ಕುರಿತು ವೈದ್ಯಕೀಯ ತಪಾಸಣೆ ನಡೆಸಿ, ಅಗತ್ಯ ವೈದ್ಯಕೀಯ ಸಲಹೆ ಸೂಚನೆ ನೀಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು.
ಸ್ವಚ್ಛ ಪರಿಸರದ ಜವಾಬ್ದಾರಿಯನ್ನು ಹೊಂದಿದ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಒತ್ತು ನೀಡಬೇಕು. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣ, ಕೌಶಲ್ಯಾಭಿವೃದ್ದಿಗೆ ಆದ್ಯತೆ ನೀಡಬೇಕು. ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ಕಡ್ಡಾಯವಾಗಿ ಉಪಯೋಗಿಸಲು ಪ್ರೇರೇಪಿಸಬೇಕು. ಮಾಸ್ಕ್-ಶೂಜ್‍ಗಳನ್ನ ಪೌರಕಾರ್ಮಿಕರು ಬಳಸುವಂತೆ ಮುಖ್ಯಾಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಪೌರ ಕಾರ್ಮಿಕರಿಗೆ ವರ್ಷಕ್ಕೆ ಎರಡು ಬಾರಿ ಗುಣಮಟ್ಟದ ಸಮವಸ್ತ್ರ ಒದಗಿಸಬೇಕು. ಏಕರೂಪ ಸುರಕ್ಷಾ ಕ್ರಮ ಬಳಸಲು ಸರ್ಕಾರ ಅನುಮತಿ ನೀಡಿದ್ದು, ಪೌರ ಕಾರ್ಮಿಕರಿಗೆ ರಾಜ್ಯದಾದ್ಯಂತ ಏಕರೂಪ ರಕ್ಷಣಾತ್ಮಕ ಪರಿಕರಗಳು ಮತ್ತು ಸಮವಸ್ತ್ರ ತರಲು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ-ಸ್ಥಳೀಯ ಸಂಸ್ಥೆಗಳು-ಪುರಸಭೆಗಳಲ್ಲಿ ಪಟ್ಟಣ ಪಂಚಾಯತಿಯಲ್ಲಿ ವಿಶ್ರಾಂತಿ ಗೃಹ ಅತ್ಯಂತ ಸುಸಜ್ಜಿತವಾದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ವಿಶ್ರಾಂತಿ ಗೃಹದಲ್ಲಿ ಮಹಿಳೆ-ಪುರುಷರಿಗಾಗಿ ಪ್ರತ್ಯೇಕ ಕೊಠಡಿ ಸೇರಿದಂತೆ ಸುಸಜ್ಜಿತವಾದ ವಿಶ್ರಾಂತಿ ಗೃಹ ನಿರ್ಮಿಸಬೇಕು. ಈಗಾಗಲೇ ಈ ಕುರಿತು ವಿನ್ಯಾಸ ರಚನೆಯ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಸರ್ಕಾರದಿಂದ ಅನುಮೋದನೆಯಾದ ವಿನ್ಯಾಸದಂತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಪೌರ ಕಾರ್ಮಿಕರ ಜೀವನ ಹಸನಗೊಳಿಸಲು ರಾಜ್ಯ ಸರ್ಕಾರ ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11,133 ಪೌರ ಕಾರ್ಮಿಕರನ್ನು ಖಾಯಂ ಮಾಡಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ವರ್ಗವನ್ನು, ಸಮಾಜದ ಮುಖ್ಯವಾಹಿನಿಗೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ್ದಾಗಿದ್ದು, ಇದನ್ನರಿತು ಸ್ಥಳೀಯವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಪೌರ ಕಾರ್ಮಿಕರಿಗೆ ವೇತನ ಚೀಟಿ ನೀಡಬೇಕು. ಅಗತ್ಯ ಅನುದಾನ ಕಾಯ್ದಿರಿಸಿ ಅವಶ್ಯಕ ವಸ್ತು ಖರೀದಿಸಿ, ಪೌರಕಾರ್ಮಿಕರಿಗೆ ತರಬೇತಿ ನೀಡಿ ಸುರಕ್ಷಾ ವಸ್ತುಗಳನ್ನು ಬಳಸಲು ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಇದಕ್ಕೂ ಮೊದಲು ಮ್ಯಾನುವೆಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್‍ವಸತಿ ಕಾಯ್ದೆ ಕುರಿತು ಪಿಪಿಟಿ ಮೂಲಕ ಅಧಿಕಾರಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡಲಾಯಿತು. ಮ್ಯಾನುವೆ4ಲ್ ಸ್ಕ್ಯಾವೆಂಜರ್ ಕಾಯ್ದೆ-2013ರ ಅನುಷ್ಠಾನ, ಪೌರ ಕಾರ್ಮಿಕರ ನೇಮಕಾತಿ, ಸ್ವಚ್ಛತಾ ಪರಿಕರಗಳ ವಿತರಣೆ, ವೇತನ ಪಾವತಿ, ಸೌಲಭ್ಯ, ವಿಶ್ರಾಂತಿ ಗೃಹ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಆಯೋಗದ ಕಾರ್ಯದರ್ಶಿ ಚಂದ್ರಕಲಾ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳೆ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಶ್ರೀಮತಿ ಗೀತಾ ವಾಡೆಕರ, ಸೇರಿದಂತೆ ಜಿಲ್ಲೆಯ ವಿವಿಧ ಪುರಸಭೆ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.