ಪೌರಕಾರ್ಮಿಕರಿಗಾಗಿ ನಿರ್ಮಿಸಲಾಗಿರುವ ವಸತಿ ಗೃಹ ಯೋಜನೆ : ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಪರಿಶೀಲನೆ

ಚಾಮರಾಜನಗರ, ನ.5- ಗುಂಡ್ಲುಪೇಟೆ ಪಟ್ಟಣದಲ್ಲಿ ಪೌರಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನದ ಗೃಹ ಭಾಗ್ಯ ಯೋಜನೆಯಡಿ ನಿರ್ಮಾಣವಾಗಿರುವ ವಸತಿ ಗೃಹಗಳನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಇಂದು ಪರಿಶೀಲಿಸಿದರು.
ಗುಂಡ್ಲುಪೇಟೆ ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು 1.12 ಕೋಟಿ ರೂ ವೆಚ್ಚದಲ್ಲಿ ಪೌರಕಾರ್ಮಿಕ ಫಲಾನುಭವಿಗಳಿಗೆ ನಿರ್ಮಾಣ ಮಾಡಲಾಗಿರುವ ವಸತಿ ಗೃಹಗಳನ್ನು ವೀಕ್ಷಿಸಿದರು. ವಸತಿ ಗೃಹಕ್ಕೆ ಬಾಕಿ ಉಳಿದಿರುವ ವಿದ್ಯುತ್ ಸಂಪರ್ಕ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ ಶೀಘ್ರವೇ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಸತಿ ಸಮುಚ್ಚಯದಲ್ಲಿ ವಯೋವೃದ್ದರು, ವಿಕಲಚೇತನರಿಗೆ ಅನುಕೂಲವಾಗುವಂತೆ ರ್ಯಾಂಪ್ ವ್ಯವಸ್ಥೆ ಮಾಡಬೇಕು. ಈಗ ಇರುವ ಮೆಟ್ಟಿಲುಗಳನ್ನು ಸರಾಗವಾಗಿ ಓಡಾಡಲು ಅನುವಾಗುವಂತೆ ಮಾರ್ಪಡಿಸಬೇಕು, ವಾಹನ ನಿಲುಗಡೆಗೂ ಸೂಕ್ತ ಸ್ಥಳವಕಾಶ ನಿಗಧಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ವಸತಿ ಗೃಹಗಳು ನಿರ್ಮಾಣವಾಗಿರುವ ಸಮೀಪದಲ್ಲಿಯೇ ಮುಂದೆ ಪೌರಕಾರ್ಮಿಕರಾಗಿ ಖಾಯಂಗೊಳ್ಳುವ ನೌಕರರಿಗೂ ಮನೆ ನಿರ್ಮಾಣ ಮಾಡಲು ನಿವೇಶನವಿದೆ. ಈ ನಿವೇಶನ ಅನ್ಯ ಬಳಕೆಗೆ ಅವಕಾಶವಾಗಬಾರದು. ಪೌರಕಾರ್ಮಿಕರ ವಸತಿ ಗೃಹ ನಿರ್ಮಾಣಕ್ಕಾಗಿಯೇ ಕಾಯ್ದಿರಿಸಬೇಕೆಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಬಳಿಕ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ನಗರ ಆಶ್ರಯ ಯೋಜನೆಯಡಿ ವಸತಿ ರಹಿತ 1440 ಫಲಾನುಭವಿಗಳಿಗೆ ಗುಂಪು ಮನೆ ನಿರ್ಮಾಣ ಮಾಡಲು ಪುರಸಭೆ ವ್ಯಾಪ್ತಿಯ ಮಡಹಳ್ಳಿ ಮತ್ತು ವಿಜಯಪುರ ಗ್ರಾಮದ ಬಳಿ ಖರೀದಿಸಿರುವ 18 ಎಕರೆ 30 ಗುಂಟೆಗಳ ಖಾಸಗಿ ಜಮೀನಿನ ಸ್ಥಳ ಪರಿಶೀಲನೆಯನ್ನು ಜಿಲ್ಲಾಧಿಕಾರಿಯವರು ನಡೆಸಿದರು.
ಈಗಾಗಲೇ 109.50 ಕೋಟಿ ರೂಗಳ ಅಂದಾಜು ವೆಚ್ಚದಲ್ಲಿ ವಿಸ್ತøತ ಯೋಜನಾ ವರದಿಯನ್ನು ಸಿದ್ದಪಡಿಸಿದ್ದು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯು ಬಾಕಿ ಇದ್ದು ಇದನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಗುಂಡ್ಲುಪೇಟೆ ಪುರಸಭಾ ಮುಖ್ಯಾಧಿಕಾರಿ ರಮೇಶ್, ವಸತಿ ಎಂಜಿನಿಯರ್ ಎಂ. ಅಶ್ವಿನಿ, ಕಿರಿಯ ಅಭಿಯಂತರರಾದ ಮಂಜುನಾಥ್ ಇತರರು ಹಾಜರಿದ್ದರು.