ಪೋಸ್ಟರ್ ಬ್ಯಾನರಗಳನ್ನು ಮುದ್ರಿಸಲು ಆರ್‍ಓಅನುಮತಿ ಕಡ್ಡಾಯ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ, ಎ.1: ಈಗಾಗಲೇ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯ ಎಲ್ಲಾ ಪ್ರೀಟಿಂಗ್ ಪ್ರೇಸ್‍ನವರು ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಪೋಸ್ಟರ್ ಬ್ಯಾನರ್‍ಗಳನ್ನು ಮುದ್ರಿಸುವ ಮುನ್ನ ಅಭ್ಯರ್ಥಿಗಳಿಂದ ಆರ್‍ಓ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪ್ರೀಟಿಂಗ್ ಪ್ರೇಸ್ ಮಾಲೀಕರು ಮತ್ತು ಮುದ್ರಕರಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಮ್ಮ ಮುದ್ರಣಕ್ಕೆ ಕರಪತ್ರ ಮುದ್ರಿಸಲು ಬರುವವರಿಂದ ಅಧಿಕೃತ ಅನುಮತಿ ಪತ್ರವನ್ನು ಪಡೆದು ಅವುಗಳನ್ನು ಮುದ್ರಿಸಬೇಕು. ಪ್ರತಿ ಪೇಜಿನ ಮುದ್ರಣಕ್ಕೆ ಈಗಾಗಲೇ ಹಣವನ್ನು ನಿಗದಿಪಡಿಸಲಾಗಿರುತ್ತದೆ ಮತ್ತು ಕರ ಪತ್ರದಲ್ಲಿ ತಮ್ಮ ಮುದ್ರಣದ ಹೆಸರು ಕೆಳಗಡೆ ನಮೂದಿಸಬೇಕು, ಅಭ್ಯರ್ಥಿಯು ನಾಮಪತ್ರ ಸಲ್ಲಿಸುವವರೆಗೂ ಪಕ್ಷದ ಕರ ಪತ್ರಗಳು ಬರುತ್ತವೆ ಅದರಲ್ಲಿ ಪಕ್ಷದ ಚಿಹ್ನೆಯನ್ನು ಹೊರತುಪಡಿಸಿ ಯಾವುದೇ ಅಭ್ಯರ್ಥಿಯ ಹೆಸರು ಇರಬಾರದು. ಏಪ್ರಿಲ್ 13 ರ ನಂತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದು ಪ್ರಾರಂಭವಾಗುತ್ತದೆ ಆಗ ಅಭ್ಯರ್ಥಿಗಳು ತಮ್ಮಲ್ಲಿ ಕರ ಪತ್ರಗಳನ್ನು ಮುದ್ರಿಸಲು ಬಂದಾಗ ಅವರು ಆರ್‍ಓ ಅವರಿಂದ ಅನುಮತಿ ಪತ್ರ ಪಡೆದಿದ್ದರೆ ಮಾತ್ರ ಅವರ ಕರ ಪತ್ರಗಳನ್ನು ಮುದ್ರಿಸಬೇಕು.

ಪ್ರೀಟಿಂಗ್ ಪ್ರೇಸ್‍ನವರು ತಾವು ಮುದ್ರಿಸಿದ ಪ್ರತಿಗಳ ಒಂದು ಪ್ರತಿಯನ್ನು ಆರ್‍ಓ ಅವರಿಗೆ ಕಳುಹಿಸಬೇಕು. ಯಾವುದೇ ಜಾತ್ರೆ ಮತ್ತು ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಇರಬಾರದು. ಜಿಲ್ಲೆಯ ಎಲ್ಲಾ ಪ್ರೀಟಿಂಗ್ ಪ್ರೇಸ್ ಮಾಲೀಕರು ಚುನಾವಣೆ ನೀತಿ ಸಂಹಿತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಚನ್ನಬಸವಣ್ಣ ಎಸ್.ಎಲ್. ಅವರು ಮಾತನಾಡಿ, ತಾವು ಮುದ್ರಿಸುವ ಕರಪತ್ರಗಳ ಕೆಳಗಡೆ ತಮ್ಮ ಪ್ರೀಟಿಂಗ್ ಪ್ರೇಸ್ ಹೆಸರು ಹಾಕುವುದರಿಂದ ನಮಗೆ ಚೆಕ್ ಮಾಡಲು ಅನುಕೂಲವಾಗುತ್ತದೆ ಹಾಗೂ ಅವು ಎಲ್ಲಿ ಮುದ್ರಣಗೊಂಡಿವೆ, ಎಷ್ಟು ಮುದ್ರಣಗೊಂಡಿವೆ ಎಂಬ ಮಾಹಿತಿ ನಮಗೆ ಸ್ಪಷ್ಟವಾಗಿ ಲಭಿಸುತ್ತದೆ ಎಂದು ಹೇಳಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಬೀದರ ಪ್ರೀಟಿಂಗ್ ಪ್ರೇಸ್ ಅಸೋಸಿಯೇಷನ್ ಅಧ್ಯಕ್ಷರಾದ ರೇವಣಸಿದ್ದಯ್ಯ ಜಿ.ಸ್ವಾಮಿ, ಉಪಾಧ್ಯಕ್ಷರಾದ ವಿಶ್ವನಾಥ ತೋರಣೆ ಸೇರಿದಂತೆ ಜಿಲ್ಲೆಯ ವಿವಿಧ ಪ್ರೀಟಿಂಗ್ ಪ್ರೇಸ್ ಮಾಲೀಕರು ಹಾಗೂ ಇತರರು ಉಪಸ್ಥಿತರಿದ್ದರು.