ಪೋಷಣ್ ಮಾಸಾಚರಣೆ ಮೂಲಕ ಆಹಾರ ಅರಿವು

ಕೋಲಾರ,ಸೆ,೨೩- ವಿದ್ಯಾರ್ಥಿನಿಯರು, ಮಕ್ಕಳು,ಮಹಿಳೆಯರಲ್ಲಿ ವೈಯಕ್ತಿಕ ಸ್ವಚ್ಚತೆ, ಸಮತೋಲಿತ ಆಹಾರ, ಆರೋಗ್ಯ ರಕ್ಷಣೆ ಮತ್ತು ಪೌಷ್ಠಿಕತೆ ಕುರಿತು ಅರಿವು ಮೂಡಿಸುವ ಉದ್ದೇದಿಂದಲೇ ಪ್ರಧಾನ ಮಂತ್ರಿಗಳ ಪೋಷಣ್ ಮಾಸಾಚರಣೆ ಆಚರಿಸಲಾಗುತ್ತಿದೆ ಎಂದು ಮಧ್ಯಾಹ್ನ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಎಸ್.ಟಿ.ಸುಬ್ರಮಣಿ ತಿಳಿಸಿದರು.
ತಾಲ್ಲೂಕಿನ ಹೊಲ್ಲಂಬಳ್ಳಿ ಶಾಲೆಯಲ್ಲಿ ಪೋಷಣ್ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಉತ್ತಮ ಆರೋಗ್ಯಕರ ಪೋಷಣೆಯೊಂದಿಗೆ ಉತ್ತಮ ಕಲಿಕೆಯನ್ನು ವೃದ್ದಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಮಹಿಳೆಯರಲ್ಲಿ, ಅದರಲ್ಲೂ ಗರ್ಭಿಣಿಯರಲ್ಲಿ ಅಪೌಷ್ಟಿಕತೆ ಕಾಡಿದಲ್ಲಿ ಅದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದಲೇ ಸರ್ಕಾರ ಪೋಷಣ್ ಮಾಸಾಚರಣೆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ರಕ್ಷಣೆಯೊಂದಿಗೆ ಅಪೌಷ್ಟಿಕತೆ ತೊಡೆದು ಹಾಕಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ಶುಚಿ,ರುಚಿಕರ,ಪೌಷ್ಟಿಕಾಂಶಭರಿತ ಆಹಾರ ಒದಗಿಸಲಾಗುತ್ತಿದೆ, ಶಾಲಾ ಹಂತದಲ್ಲಿ ಬಿಸಿಯೂಟ, ಹಾಲು ಜತೆಗೆ ಇದೀಗ ಮೊಟ್ಟೆ ನೀಡುವ ಕಾರ್ಯವು ನಡೆದಿದೆ ಎಂದರು.
ರಾಜ್ಯ ವಿಜ್ಞಾನ ಪರಿಷತ್ ಸದಸ್ಯೆ ಮಂಜುಳಾ ಭೀಮರಾವ್, ಸಿರಿಧಾನ್ಯಗಳ ಮಹತ್ವ, ಆರೋಗ್ಯ ಮತ್ತು ಪೌಷ್ಟೀಕತೆ ಕುರಿತು ಉಪನ್ಯಾಸ ನೀಡಿ, ಶಾಲಾ ಪೂರ್ವದಲ್ಲಿ ಅಂಗನವಾಡಿಗಳ ಮೂಲಕ ಅರಿವು ನೀಡುವುದರ ಜತೆಗೆ ಶಾಲಾ ಹಂತದಲ್ಲಿ ಪೋಷಣಾ ಸಭೆಗಳನ್ನು ಏರ್ಪಡಿಸಿ, ವಿಷಯ ತಜ್ಞರು, ಸ್ಥಳೀಯ ವೈದ್ಯರು, ಆಹಾರ ಸುರಕ್ಷತಾ ಅಧಿಕಾರಿಗಳ ಸಹಯೋಗದಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು, ಸಿರಿಧಾನ್ಯಗಳ ಮಹತ್ವ ತಿಳಿಸಿಕೊಟ್ಟು ಸೇವನೆಗೆ ಮುಂದಾಗಬೇಕು ಎಂದರು.
ಮಕ್ಕಳಲ್ಲಿ ಆರೋಗ್ಯಕರ ಹವ್ಯಾಸಗಳ ಕುರಿತು ತಾಯಂದಿರೊಂದಿಗೆ ಚರ್ಚಿಸುವುದು, ಪ್ರತಿನಿತ್ಯ ಶಾಲೆಯಲ್ಲಿ ಹಾಗೂ ಮನೆಯಲ್ಲಿ ಮಕ್ಕಳು ಆಹಾರ ಸೇವಿಸುವ ಮೊದಲು ಕೈಕಾಲುಗಳನ್ನು,ತಟ್ಟೆ,ಲೋಟ ಗಳನ್ನು ತೊಳೆದುಕೊಳ್ಳುವುದು, ಶೌಚಾಲಯ ಬಳಕೆ ನಂತರ ಸೋಪಿನಿಂದ ಕೈತೊಳೆಯುವ ಅಭ್ಯಾಸ ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪರಿಯಾವರಣ ಸಂಸ್ಥೆ ಪ್ರತಿನಿಧಿ ಮಹೇಶ್‌ರಾವ್ ಕದಂ, ಎಸ್‌ಡಿಎಂಸಿ ಅಧ್ಯಕ್ಷ ರವಿಕುಮಾರ್, ಮುಖ್ಯಶಿಕ್ಷಕ ಹೆಚ್.ಎಂ.ನಾರಾಯಣಪ್ಪ, ಅಂಗನವಾಡಿ ಸದಸ್ಯರು, ಆಶಾಕಾರ್ಯಕರ್ತೆಯರು, ಗ್ರಾಮಸ್ಥರು ತಾಯಂದಿರು ಭಾಗವಹಿಸಿದ್ದರು.