ಪೋಷಣ್ ಮಾಸಾಚರಣೆ ಕಾರ್ಯಕ್ರಮ ಆರೋಗ್ಯವಂತ ಮಗು ದೇಶದ ಆಸ್ತಿ

ಚಿತ್ರದುರ್ಗ,ಸೆ.3; ಆರೋಗ್ಯವಂತ ಮಗು ದೇಶದ ಆಸ್ತಿ ಎಂದು ಪಂಡರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಿದೇವಿ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪೋಷಣ್ ಮಾಸಾಚರಣೆ ಪೌಷ್ಟಿಕಾಹಾರ ಪ್ರಾತ್ಯಕ್ಷಿಕೆ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗರ್ಭಿಣಿಯರು ನಮ್ಮ ಸುತ್ತಮುತ್ತ ಬೆಳೆದ ತರಕಾರಿ ಹಣ್ಣುಗಳನ್ನು ಸೇವನೆ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್. ಎಸ್. ಮಂಜುನಾಥ್ ಮಾತನಾಡಿ, ಹಸಿರು ಸೊಪ್ಪುಗಳ ಬಳಕೆಯಿಂದ ಹೇರಳವಾಗಿ ದೇಹಕ್ಕೆ ಅಗತ್ಯವಿರುವ ಬಿ ಅನ್ನಾಂಗವನ್ನು ಖನಿಜಾಂಶಗಳನ್ನು ನೀಡುತ್ತದೆ. ಬೆಳೆಕಾಳುಗಳು ದೇಹದ ಬೆಳವಣಿಗೆಗೆ ಅಗತ್ಯವಿರುವ ಪ್ರೋಟೀನ್ ಅಂಶ ನೀಡುತ್ತವೆ. ಆಹಾರದ ಘಮಲು ಅರ್ಥ ಮಾಡಿಕೊಂಡು ಆಹಾರ ಆಸ್ವಾದಿಸಿ ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಪೌಷ್ಟಿಕ ಪುನಶ್ವೇತನ ಕೇಂದ್ರ ಸ್ಥಾಪಿತವಾಗಿದೆ. ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆಯನ್ನು ಗುಣಪಡಿಸಲು ತೆರೆಯಲಾಗಿದೆ. ಇಲ್ಲಿ ವೈದ್ಯಕೀಯ ತೊಡಕುಗಳ ನಿವಾರಣೆ, ಚಿಕಿತ್ಸೆ, ಮಕ್ಕಳ ಪೌಷ್ಟಿಕತೆಯ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಪೋಷಣ್ ಮಾಸಾಚರಣೆಯ ಉದ್ದೇಶ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿ, ಮಗು ಹುಟ್ಟಿದ ತಕ್ಷಣ ಎದೆಹಾಲನ್ನು ಕುಡಿಸಿ, 6 ತಿಂಗಳ ತನಕ ಎದೆ ಹಾಲು ಬಿಟ್ಟು ಬೇರೆ ಏನನ್ನು ನೀಡಬೇಡಿ ಎಲ್ಲಾ ಮಕ್ಕಳಿಗೂ 1 ವರ್ಷ ತುಂಬುವುದರೊಳಗೆ 11 ಮಾರಕ ರೋಗಗಳ ವಿರುದ್ಧ ನೀಡುವ ಎಲ್ಲಾ ಲಸಿಕೆಗಳನ್ನು  ಕೊಡಿಸಿ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾರುತಿ ಪ್ರಸಾದ್ ಮಾತನಾಡಿ, ಕೋವಿಡ್ ಲಸಿಕೆ ಕೊರತೆ ಇರುವುದಿಲ್ಲ. ಎಲ್ಲಾ ಗರ್ಭಿಣಿಯರು ಹಾಲುಣಿಸುವ ತಾಯಂದಿರು ತಪ್ಪದೇ ಲಸಿಕೆ ಪಡೆದುಕೊಳ್ಳಿ. ಯಾರಿಗಾದರೂ ಕ್ಷಯರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೆ ತಪಾಸಣೆ ಮಾಡಿಸಿಕೊಳ್ಳಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೋಭಾ ನಾವಳ್ಳಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳಾದ ಮಾತೃ ವಂದನಾ, ಭಾಗ್ಯಲಕ್ಷ್ಮಿ ಯೋಜನೆ ಬಗ್ಗೆ ತಿಳಿಸಿ ಫಲಾನುಭವಿಗಳಿಗೆ ಮನೆಗೆ ಆಹಾರ ವಿತರಣೆ  ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಸವಿತಾಬಾಯಿ, ಲಕ್ಷ್ಮೀದೇವಿ, ಮಾರುತಿ, ಗ್ರಾಮದ ಹಿರಿಯರಾದ ಶೇಖರಪ್ಪ ಹಾಗೂ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.