ಪೋಷಕರೆ ನಿಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರದಿರಿ

ಕೋಲಾರ,ಜ,೯- ಪೋಷಕರು ನಮ್ಮ ಕನಸುಗಳನ್ನು ಮಕ್ಕಳ ಮೇಲೆ ಏರಬಾರದು ಏಕೆಂದರೆ ನಮ್ಮ ಕನಸುಗಳು ೨೦ ವರ್ಷದಷ್ಟು ಹಳೆಯದ್ದು, ಅವರ ಇಷ್ಟದಂತೆ ಕಲಿಕಾ ಹಾದಿಯಲ್ಲಿ ಸಾಗಲು ಬಿಡಿ ಎಂದು ರಾಕುಟೆನ್ ಸಿಂಫೋನಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಎಂಡಿ ಹಾಗೂ ಅಧ್ಯಕ್ಷ ನರೇನ್ ನಾರಾಯಣ್ ಕರೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಶನಿವಾರ ಪ್ಯೂಚರ್ ಇಂಡಿಯಾ ಟ್ರಸ್ಟ್ ಹಾಗೂ ಶಿಕ್ಷಕ ಗೆಳೆಯರ ಬಳಗದಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕರು ಮಕ್ಕಳು ಮಾದರಿಯಾಗಿರಬೇಕು ಆಗ ಮಾತ್ರ ಶಿಕ್ಷಕರು ಬೇರೆ ಮಕ್ಕಳಿಗೆ ಬುದ್ದಿವಾದ ಹೇಳಲು ಸಾಧ್ಯ,ಕಲಿಕಾ ವಿಧಾನದಲ್ಲಿ ನಾವಿನ್ಯತೆ ಅಗತ್ಯವಿದೆ, ಪಾಠ ಹೇಳುವುದಕ್ಕಿಂತ ಯಾವ ರೀತಿ ಹೇಳಿಕೊಡಲಾಗುತ್ತದೆ ಎಂಬುದು ಅತಿ ಮುಖ್ಯವಾಗಿದ್ದು, ಮಕ್ಕಳಿಗೆ ಆಕರ್ಷಣೀಯವಾಗಿ ಬೋಧನೆ ಮಾಡುವಂತಾಗಬೇಕು ಎಂದರು.
ಇಂದಿನ ಶಿಕ್ಷಣಕ್ಕೂ ಉದ್ಯೋಗ ಪಡೆಯುವುದಕ್ಕೂ ಸಂಬಂಧವೇ ಇಲ್ಲವಾಗಿದೆ, ನಾವು ಏನೋ ಓದಿ ಯಾವುದೇ ಉದ್ಯೋಗ ಮಾಡುವಂತಾಗಿದೆ ಆದರೆ ಸಂಸ್ಕಾರ ಬೆಳೆಸಲು ಶಿಕ್ಷಣ ಇಂದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ಯೂಚರ್ ಇಂಡಿಯಾ ಟ್ರಸ್ಟ್‌ನ ರವಿಕುಮಾರ್ ಮಾತನಾಡಿ, ಶಿಕ್ಷಕರು ಎಂದರೆ ಮಕ್ಕಳಲ್ಲಿ ಭದ್ರತೆಯ ಭಾವನೆ ಇರುತ್ತದೆ, ಅವರು ಪ್ರೋತ್ಸಾಹ ನೀಡುವ ಹಾಗೂ ಶಕ್ತಿತುಂಬುವುದು ಸೇರಿದಂತೆ ಅವರಲ್ಲಿ ಎಲ್ಲವೂ ಮಿಳಿತವಾಗಿರುತ್ತದೆ, ಅವರ ಶಕ್ತಿ ಅಪಾರ ಎಂದರು.
ಇಂಡಿಯಾ ಸೂಪರ್ ಪವರ್ ಮಾಡೋಣ ಅದಕ್ಕಾಗಿ ಕೋಲಾರ ತಾಲ್ಲೂಕಿಗೆ ಅಗತ್ಯರೀತಿಯ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ಯೂಚರ್ ಇಂಡಿಯಾ ಟ್ರಸ್ಟ್ ಬದ್ದವಾಗಿದ್ದು, ಶಿಕ್ಷಕ ಗೆಳೆಯರ ಬಳಗೊಂದಿಗೆ ಕಳೆದ ೧೬ ವರ್ಷಗಳಿಂದ ಇಲ್ಲಿ ಶೈಕ್ಷಣಿಕ ಸೇವೆ ಮಾಡುತ್ತಿದ್ದೇವೆ, ಶಾಲೆಯನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ಯುವ ಶಿಕ್ಷಕರಿಗೆ ಮುಂದಿನ ದಿನಗಳಲ್ಲಿಬಹುಮಾನ ನೀಡುವುದಾಗಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಉಪಾಧ್ಯಕ್ಷ ವೀರಣ್ಣಗೌಡಮ ಪ್ಯೂಚರ್ ಇಂಡಿಯಾ ಟ್ರಸ್ಟ್‌ನ ರಣಭೀರ್, ತಿಜು, ಶಿಕ್ಷಕ ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಕಾರ್ಯದರ್ಶಿ ವೆಂಕಟಾಚಲಪತಿಗೌಡ, ಸಿಆರ್‌ಪಿ ಗೋವಿಂದು, ಗೌರವ ಸಲಹೆಗಾರ ಚಿಕ್ಕಣ್ಣ, ಖಜಾಂಚಿ ಚಂದ್ರಪ್ಪ, ಪದಾಧಿಕಾರಿಗಳಾದ ಉಪಾಧ್ಯಕ್ಷರುಗಳಾದ ಸೋಮಶೇಖರ್,ಕೃಷ್ಣಪ್ಪ,ನಾಗರಾಜ್, ಸಂಘಟನಾಕಾರ್ಯದರ್ಶಿ ವೆಂಕಟರಾಂ, ಮುಖ್ಯಶಿಕ್ಷಕ ಬಿ.ಶ್ರೀನಿವಾಸ್, ನಸ್ರೂಲ್ಲಾಖಾನ್ ಮತ್ತಿತರರಿದ್ದು, ಕನ್ನಡ ಭವನ ಸಭಾಂಗಣ ಶಿಕ್ಷಕರಿಂದ ತುಂಬಿ ತುಳುಕುತ್ತಿತ್ತು.