ಪೋಷಕರು-ಶಿಕ್ಷಕರಿಗೆ ಅನುಕೂಲವಾಗುವ ಸೂತ್ರ ಅತ್ಯಗತ್ಯ: ಸುರೇಶ್ ಕುಮಾರ್ ಸಲಹೆ

ಬೆಂಗಳೂರು, ಫೆ.23- ಪೋಷಕರು ಮತ್ತು ಶಿಕ್ಷಕರಿಗೆ ಅನುಕೂಲವಾಗುವ ಸೂತ್ರ ಇಂದಿನ ಸಂದರ್ಭದ ಅವಶ್ಯಕತೆಯಾಗಿದ್ದು, ಈ ಹಿನ್ನೆಲೆಯಲ್ಲಿಯೇ‌ ಶಾಲಾ ಶುಲ್ಕ ಕುರಿತಂತೆ ಆಲೋಚನೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ವಿವಿಧ ಖಾಸಗಿ ಶಾಲಾ ಸಂಘಟನೆಗಳ ಆಶ್ರಯದಲ್ಲಿ ಶಾಲಾ ಶುಲ್ಕ ಕಡಿತ ಆದೇಶ ಮರುಪರಿಶೀಲನೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ, ಸಿಬ್ಬಂದಿ ಮತ್ತು ಆಡಳಿತ ಮಂಡಳಿಗಳ ಪ್ರತಿನಿಧಿಗಳ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಖಾಸಗಿ ಶಾಲಾ ಶಿಕ್ಷಕರ ಮತ್ತು ಪೋಷಕರ ಹಿತದೃಷ್ಟಿಯಿಂದ ಈ ಶೈಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಿ ಸರ್ಕಾರ ಶೇ. 30ರ ಶುಲ್ಕ ಕಡಿತದ ನಿರ್ಧಾರ ಕೈಗೊಂಡಿತ್ತು, ಇದು ಖಾಸಗಿ ಶಾಲೆಗಳ‌ ಹಿತದೃಷ್ಟಿಯಿಂದಲೂ ಒಳಿತಿನ ನಿರ್ಧಾರವಾಗಿತ್ತು ಎಂದರು.

ಇಂತಹ ಒಂದು ನಿರ್ಧಾರ ಕೈಗೊಳ್ಳುವ ಮೊದಲು ಹತ್ತಾರು ಬಾರಿ ಶಾಲಾ ಸಂಘಟನೆಗಳು ಮತ್ತು ಪೋಷಕರ ಸಂಘಟನೆಗಳೊಂದಿಗೆ ಸಮಾಲೋಚನೆ ಮಾಡಲಾಗಿತ್ತು. ಎರಡೂ ಕಡೆಯ ವಾದಗಳನ್ನು ಆಲಿಸಿ ಎಲ್ಲರಿಗೂ ಸಮ್ಮತವಾಗುವ ನಿರ್ಧಾರವೊಂದನ್ನು ಕೈಗೊಳ್ಳಲಾಗಿತ್ತು.

ಈ ನಿರ್ಧಾರದ ನಂತರವೇ ಪೋಷಕರು ಶಾಲೆಗಳಿಗೆ ಶುಲ್ಕ ಪಾವತಿಸಲು ಆರಂಭಿಸಿದರು. ಇದರಿಂದ ಖಾಸಗಿ ಶಾಲೆಗಳಿಗೆ ಅನುಕೂಲವಾಯಿತಲ್ಲದೇ ಇದರಿಂದ ಶಾಲಾ ಶಿಕ್ಷಕರಿಗೆ ಆ ಶುಲ್ಕದಿಂದ ಸಂಗ್ರಹವಾದ ಹಣದಿಂದ ವೇತನ ಪಾವತಿಸಲೂ ಸಹಕಾರಿಯಾಯಿತು  ಎಂದರು.

ಸರ್ಕಾರ ಶಿಕ್ಷಕರ ಹಿತದೃಷ್ಟಿಯಿಂದಲೇ ಈ ಆದೇಶ ಹೊರಡಿಸಿತ್ತು. ಈ ಕೋವಿಡ್ ವಿಷಮ ಕಾಲಘಟ್ಟದಿಂದಾಗಿ ಸಮಸ್ಯೆ ಸೃಷ್ಟಿಯಾಯಿತು. ಶಿಕ್ಷಕರ ಕಷ್ಟವನ್ನು ನಾನು ಕಣ್ಣಾರೆ ನೋಡಿದ್ದೇನೆ. ಶಿಕ್ಷಕರು ನರೇಗಾದಂತಹ ಕೆಲಸ ಮಾಡಿ ಬದುಕಿದ್ದಾರೆ. ಹಣ್ಣ ತರಕಾರಿ ಮಾರುತ್ತಿದ್ದಾರೆ.

ಅದರೊಂದಿಗೆ ಇರುವ ಕೆಲಸ ಕಳೆದುಕೊಂಡು ಪೋಷಕರೂ ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯಿಂದಾಗಿ ನಾವು ಶೇ. 30ರಷ್ಟು ಶುಲ್ಕ ಕಡಿತದ ನಿರ್ಧಾರ ಮಾಡಿದ್ದೆವು ಎಂದು ತಿಳಿಸಿದರು.

ಖಾಸಗಿ ಶಾಲಾ ಶಿಕ್ಷಕರಿಗೆ ಯಾವುದಾದರೂ ರೂಪದಲ್ಲಿ ನೆರವಾಗಬೇಕೆಂದು ನಾವು ಏನೆಲ್ಲಾ ಪ್ರಯತ್ನ ಮಾಡಿದೆವು. ಈ ಕುರಿತು ಸರ್ಕಾರಿ ನೌಕರರ ಸಂಘ, ಆರ್ಥಿಕ ಇಲಾಖೆಯೊಂದಿಗೂ ಮಾತನಾಡಿದೆವು. ಆರ್ಥಿಕ ಪರಿಸ್ಥಿತಿಯ ದುಸ್ಥಿತಿಯ ಹಿನ್ನೆಲೆಯಲ್ಲಿ ಅದಾವದೂ ಈ ವರ್ಷ ಕೈಗೂಡಲಿಲ್ಲ.

ಕಾರ್ಮಿಕ ಇಲಾಖೆ ಮೂಲಕವೂ ಕೊನೆಗೆ ಫುಡ್ ಕಿಟ್ ನೀಡಲು ಸಹ ಚಿಂತಿಸಿದೆವು. ಕಾರ್ಮಿಕ ಇಲಾಖೆ ನಿಯಮಗಳು ಅದಕ್ಕೆ ಪೂರಕವಾಗಿರಲಿಲ್ಲ. ನಾನಂತೂ ಶಿಕ್ಷಕರ ವಿರುದ್ಧವಿಲ್ಲ. ನನಗೆ ಶಿಕ್ಷಕರ ಸಮಸ್ಯೆ ಬೇರೆಲ್ಲರಿಗಿಂತಲೂ ಚೆನ್ನಾಗಿ ಅರಿವಿದೆ. ಶುಲ್ಕ ವಿಚಾರದಲ್ಲಿ ನನಗಾಗಲಿ, ಸರ್ಕಾರಕ್ಕಾಗಿ ಯಾವುದೇ ಪ್ರತಿಷ್ಠೆಯಿಲ್ಲ ಎಂದು ಸಚಿವರು ಹೇಳಿದರು.

ಪೋಷಕರ ಮತ್ತು ಶಾಲೆಗಳ ಮಧ್ಯದ ನಂಬುಗೆ ಮತ್ತು ವಿಶ್ವಾಸಗಳು ಈಗ ಇಲ್ಲವಾಗಿರುವುದರಿಂದ ಇಬ್ಬರೂ ಒಂದು ಸರ್ವಸಮ್ಮತ ನಿರ್ಧಾರಕ್ಕೆ ಬರಲಿಲ್ಲವಾದ್ದರಿಂದ ಅನಿವಾರ್ಯವಾಗಿ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ಸುರೇಶ್ ಕುಮಾರ್ ಹೇಳಿದರು.

ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದ ಕೋರಮಂಗಲದ ವಿದ್ಯಾರ್ಥಿಗೆ ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರಿಂದ ತರಗತಿಯಲ್ಲಿ ಬಹಿರಂಗವಾಗಿ ಪ್ರಾಚಾರ್ಯರು ಮಾಡಿದ ಅವಮಾನದಿಂದಾಗಿ ವಿದ್ಯಾರ್ಥಿಯೊಬ್ಬ ನೇಣಿಗೆ ಕೊರಳು ಕೊಟ್ಟಿದ್ದನ್ನು ಸ್ಮರಿಸಿದ ಸಚಿವರು, ನಾವು ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಒಂದು ನಿರ್ಧಾರಕ್ಕೆ ಬಂದೆವು ಎಂದು ಹೇಳಿದರು.

ಸಮಸ್ಯೆಯಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಂದ ಹಿತವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಸೂಕ್ತ ಕಾರ್ಯಕ್ರಮ ರೂಪಿಸಲು ಆಲೋಚಿಸುತ್ತಿದೆ. ಈ ಸಮುದಾಯದ ಹಿತವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.